ಸ್ಯಾಂಟ್ರೋ ರವಿ ಪ್ರಕರಣದ ಸಮಗ್ರ ತನಿಖೆಗೆ ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮೈಸೂರು (ಜ.08): ಸ್ಯಾಂಟ್ರೋ ರವಿ ಪ್ರಕರಣದ ಸಮಗ್ರ ತನಿಖೆಗೆ ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಪೊಲೀಸರಿಗೆ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದೇನೆ. ಈ ವಿಚಾರದಲ್ಲಿ ಪ್ರಶ್ನೆ ಕೇಳುವವರೆಲ್ಲ ತನಿಖಾಧಿಕಾರಿಗಳು ಆಗುವುದು ಬೇಡ. ಇಲ್ಲಿ ಯಾರು ತನಿಖಾಧಿಕಾರಿಗಳೂ ಅಲ್ಲ. ಪೊಲೀಸರು ನಿಜವಾದ ತನಿಖೆ ಮಾಡುತ್ತಾರೆ ಎಂದು ಹೇಳಿದರು. ತಮ್ಮ ಪುತ್ರ ಸ್ಯಾಂಟ್ರೋ ರವಿ ಜೊತೆ ಮಾತನಾಡಿದ್ದಾರೆನ್ನಲಾದ ಆಡಿಯೋ ಬಿಡುಗಡೆ ವಿಚಾರಕ್ಕೂ ಪ್ರತಿಕ್ರಿಯಿಸಿದರು.

ಆ ಆಡಿಯೋ ಬಗ್ಗೆಯೂ ತನಿಖೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ, ವಿಡಿಯೋ ಸೇರಿ ಎಲ್ಲವನ್ನೂ ತನಿಖೆಗೊಳಪಡಿಸಲಾಗುವುದು. ಸ್ಯಾಂಟ್ರೋ ರವಿ ವಿರುದ್ಧ ದಾಖಲಾದ ಕೇಸ್‌ ಬಗ್ಗೆ ತನಿಖೆ ನಡೆಯುತ್ತದೆ. ತನಿಖೆ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರ ಬರಲಿದೆ ಎಂದು ತಿಳಿಸಿದರು. ವಿಪಕ್ಷಗಳ ನಾಯಕರ ಜೊತೆಯಲ್ಲೂ ಆತ ಸಂಪರ್ಕದಲ್ಲಿದ್ದಾನೆ. ಈಗ ಬಿಡುಗಡೆಯಾಗುತ್ತಿರುವ ಫೋಟೋ ಮತ್ತು ಕಾಲ್‌ ಲಿಸ್ಟ್‌ಗಳು ಎಲ್ಲವೂ ನಕಲಿ. ಅದು ಅವನೇ ತಾಂತ್ರಿಕತೆಯಿಂದ ಮಾಡಿಕೊಂಡಿರುವುದು ಎಂದರು. ಯಾರ ಜೊತೆ ಏನೋ ಮಾತನಾಡುತ್ತೇವೆ, ಮಾತನಾಡಿದ ತಕ್ಷಣ ಅಪರಾಧಿಯಾಗುತ್ತೇವಾ? ಯಾರಾರ‍ಯರ ಜೊತೆ ಮಾತನಾಡುವಾಗ ಹಿನ್ನೆಲೆ ಮಾತನಾಡಿಸಿ ಮಾತನಾಡಲು ಸಾಧ್ಯನಾ? ವಿಪಕ್ಷಗಳು ಸುಮ್ಮನೇ ಆರೋಪ ಮಾಡುತ್ತಿವೆ ಎಂದು ತಿಳಿಸಿದರು. 

ಶೀಘ್ರ ಸಂಪುಟ ವಿಸ್ತರಣೆ, ನಿರ್ದಿಷ್ಟ ದಿನ ಹೇಳಲಾಗದು: ಸಿಎಂ ಬೊಮ್ಮಾಯಿ

ಭ್ರಷ್ಟಾಚಾರದ ಬ್ಯಾಂಕ್‌ ಆಗಿತ್ತು: ವಿಧಾನಸೌಧದ ಆವರಣದಲ್ಲಿ ಎಂಜಿನಿಯರ್‌ವೊಬ್ಬರ ಬಳಿ 10 ಲಕ್ಷ ನಗದು ಪತ್ತೆ ವಿಚಾರಕ್ಕೆ ಸಂಬಂಧಿಸಿ ಪ್ರತಿಪಕ್ಷ ಕಾಂಗ್ರೆಸ್‌ ಟೀಕೆಗೆ ಬೊಮ್ಮಾಯಿ ತೀವ್ರ ಕಿಡಿಕಾರಿದ್ದಾರೆ. ವಿಧಾನಸೌಧವನ್ನು ಕಾಂಗ್ರೆಸ್‌ ತನ್ನ ಭ್ರಷ್ಟಾಚಾರದ ಬ್ಯಾಂಕ್‌ ಮಾಡಿಕೊಂಡಿತ್ತು.ಅಂಥವರು ಈಗ ಶಾಪಿಂಗ್‌ ಮಾಲ್‌ನ ಮಾತು ಆಡುತ್ತಿದ್ದಾರೆ ಎಂದರು.

2019ರಲ್ಲಿ ಪುಟ್ಟರಂಗಶೆಟ್ಟಿಅವರ ಕಚೇರಿಯಲ್ಲಿ .22 ಲಕ್ಷ ಹಣ ಸಿಕ್ಕಿತ್ತು. ಆವತ್ತೇ ಅದು ಶಾಪಿಂಗ್‌ ಕಾಂಪ್ಲೆಕ್ಸ್‌ ಅಲ್ಲ, ಕಾಂಗ್ರೆಸ್ಸಿನ ಭ್ರಷ್ಟಾಚಾರದ ಬ್ಯಾಂಕ್‌ ಆಗಿತ್ತು. ಆವತ್ತು ಯಾಕೆ ತನಿಖೆ ಮುಂದುವರೆಸಿಲ್ಲ? ಯಾಕೆ ಆವತ್ತು ಪುಟ್ಟರಂಗಶೆಟ್ಟಿಯನ್ನು ತನಿಖೆಗೆ ಒಳಪಡಿಸಿಲ್ಲ? ಅವರಿಂದ ಹೇಳಿಕೆ ಸಹ ಪಡೆದಿಲ್ಲ? ಎಸಿಬಿಗೆ ಪ್ರಕರಣ ಕೊಟ್ಟು ಮುಚ್ಚಿ ಹಾಕಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಿದ ಈ ಪುಣ್ಯಾತ್ಮರು ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

ಸೋನಿಯಾ ಮನೆ ಬಳಿ ಕಾದು ನಿಲ್ಲುತ್ತಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

20 ವರ್ಷಗಳಿಂದ ಎಲ್ಲಾ ನಾಯಕರ ಜೊತೆ ರವಿ ನಂಟು ಹೊಂದಿದ್ದಾನೆ. ಮಹಿಳೆ ದೂರು ಆಧರಿಸಿ ರವಿ ವಿರುದ್ಧ ತನಿಖೆ ಆರಂಭವಾಗಿದೆ. ಹಿಂದಿನ ಪ್ರಕರಣಗಳು ಸಹ ತನಿಖೆ ಆಗಲಿದೆ. ಆ ಸಂಪರ್ಕ ಸಹ ತನಿಖೆ ಆಗಲಿದೆ. ಇದರಲ್ಲಿ ಯಾರನ್ನೂ ಬಚಾವ್‌ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲವೂ ಹೊರಗೆ ಬರಲಿ ಎಂಬುದು ನನ್ನ ಇಚ್ಛೆ ಎಂದರು.