ನಕಲಿ ಗಾಂಧಿಗಳು ಬೇಲ್ ಮೇಲೆ ಹೊರಗಿದ್ದಾರೆ: ಸಿಎಂ ಬೊಮ್ಮಾಯಿ
ಗಾಂಧಿ ಜಯಂತಿಯಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡಲಿ? ಅಂತಹವರ ಬಗ್ಗೆ ಮಾತನಾಡುವುದು ಸರಿಯಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು(ಅ.03): ‘ಗಾಂಧಿ ಜಯಂತಿಯಂದು ನಕಲಿ ಗಾಂಧಿಗಳ ಬಗ್ಗೆ ಮಾತಾಡುವುದು ಸರಿಯಲ್ಲ. ಕರ್ನಾಟಕವು ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿದ್ದು, ಇಲ್ಲಿಯೇ ಅಧಿಕಾರದಲ್ಲಿಲ್ಲ ಎಂಬ ಕೊರಗಿನಲ್ಲಿ ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ 40% ಭ್ರಷ್ಟಾಚಾರ ಆರೋಪ ಕುರಿತು ಭಾನುವಾರ ವಿಧಾನಸೌಧದಲ್ಲಿ ಗಾಂಧಿ ಜಯಂತಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಗಾಂಧಿ ಜಯಂತಿಯಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡಲಿ? ಅಂತಹವರ ಬಗ್ಗೆ ಮಾತನಾಡುವುದು ಸರಿಯಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಇಡೀ ಪಕ್ಷವೇ ಭ್ರಷ್ಟಾಚಾರ ಮಾಡಿ ಜಾಮೀನಿನ ಮೇಲೆ ಹೊರಗಿದೆ. ಇಂತಹವರು ನಮ್ಮ ಬಗ್ಗೆ ಮಾತಾಡುವುದಾ ಎಂದು ಕಿಡಿಕಾರಿದರು.
ಈಗಿನದ್ದು ಡೂಪ್ಲಿಕೇಟ್ ಕಾಂಗ್ರೆಸ್, ನಕಲಿ ಗಾಂಧಿಗಳು: ಸಚಿವ ಜೋಶಿ
ಕಾಂಗ್ರೆಸ್‌ನವರಿಗೆ ಕರ್ನಾಟಕ ಎಟಿಎಂ ಮಷಿನ್ ಆಗಿತ್ತು. ಆದರೆ, ಈಗ ಕರ್ನಾಟಕದಲ್ಲಿ ಅಧಿಕಾರವಿಲ್ಲ. ಈ ಕೊರಗಿನಲ್ಲಿ ಕಾಂಗ್ರೆಸ್‌ನವರು ಹೀಗೆ ಆರೋಪ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ. ಹಾಗೊಂದು ವೇಳೆ ಭ್ರಷ್ಟಾಚಾರ ನಡೆದಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಲಿ. ತನಿಖೆ ನಡೆಸಲಾಗುವುದು ಎಂದರು.
ಚನ್ನಪಟ್ಟಣದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಬಾರದು. ಹಿಂಸೆಗೆ ಅವಕಾಶ ಕೊಡಬಾರದು. ನಾವು ಪ್ರಬುದ್ಧವಾಗಿ ಇದ್ದೇವೆ. ಅನುದಾನ ಜನರಿಗೆ ಮುಟ್ಟಬೇಕು. ಘಟನೆ ಬಗ್ಗೆ ವರದಿ ಪಡೆದುಕೊಳ್ಳುತ್ತೇನೆ’ಎಂದು ಹೇಳಿದರು.