ಈಗಿನದ್ದು ಡೂಪ್ಲಿಕೇಟ್ ಕಾಂಗ್ರೆಸ್, ನಕಲಿ ಗಾಂಧಿಗಳು: ಸಚಿವ ಜೋಶಿ
ಈಗಿರುವ ಕಾಂಗ್ರೆಸಿನವರು ಒರಿಜಿನಲ್ ಅಲ್ಲ. ಈಗಿನ ಕಾಂಗ್ರೆಸ್‌ಗೂ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿದ್ದ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಈಗಿರುವುದು ಡುಪ್ಲಿಕೆಟ್ ಕಾಂಗ್ರೆಸ್ ಮತ್ತು ಈಗಿನವರು ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ಶಿಗ್ಗಾಂವಿ (ಆ.15): ಈಗಿರುವ ಕಾಂಗ್ರೆಸಿನವರು ಒರಿಜಿನಲ್ ಅಲ್ಲ. ಈಗಿನ ಕಾಂಗ್ರೆಸ್‌ಗೂ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿದ್ದ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಈಗಿರುವುದು ಡುಪ್ಲಿಕೆಟ್ ಕಾಂಗ್ರೆಸ್ ಮತ್ತು ಈಗಿನವರು ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು. ಕಾಂಗ್ರೆಸ್‌ನಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಭಾನುವಾರ ಶಿಗ್ಗಾಂವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇದರಲ್ಲೂ ಕಾಂಗ್ರೆಸ್‌ನವರು ರಾಜಕೀಯ ಮಾಡಬಾರದಿತ್ತು. ಕಾಂಗ್ರೆಸ್, ಅನೇಕ ಸಂಘಟನೆಗಳು, ಕ್ರಾಂತಿಕಾರಿಗಳ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅಂದಿನ ಹೋರಾಟವನ್ನು ನಮ್ಮ ಹೋರಾಟ ಎಂದು ಕ್ಲೇಮ್ ಮಾಡಿಕೊಳ್ಳಲು ಅವರಿಗೆ ಯಾವುದೇ ನೈತಿಕತೆ ಇಲ್ಲ.
ಈಗಿರುವುದು ಇಂದಿರಾ ಕಾಂಗ್ರೆಸ್. ಇದರಲ್ಲಿ ಭ್ರಷ್ಟರು, ದೇಶಕ್ಕೆ ಸುಳ್ಳು ಹೇಳಿರುವವರು ಬಂದಿದ್ದಾರೆ. ಇದೊಂದು ನಕಲಿ ಕಾಂಗ್ರೆಸ್ ಮತ್ತು ನಕಲಿ ಗಾಂಧಿಗಳ ಪಾರ್ಟಿ ಎಂದು ವ್ಯಂಗ್ಯವಾಡಿದರು. ಬಿಜೆಪಿ ಅಧಿಕೃತವಾಗಿ 1980ರಲ್ಲಿ ಬಂತು. ಹಿಂದಿನ ಲೆಕ್ಕ ತೆಗೆದರೆ ಜನ ಸಂಘ ಬಂದಿದ್ದು 1952ರಲ್ಲಿ. ಇದಕ್ಕಿಂತ ಮೊದಲು ನಮ್ಮ ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ, ಈಗಿನ ಕಾಂಗ್ರೆಸ್ಸಿಗರು ಎಲ್ಲಿ ಭಾಗವಹಿಸಿದ್ದರು? ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆಗಿನ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ನಾವು ಹೋರಾಟ ಮಾಡಿದ್ದೆವು ಎನ್ನಲು ಅವರಿಗೆಲ್ಲಿ ಅಧಿಕಾರವಿದೆ? ಎಂದು ಹೇಳಿದರು.
ಸಿಎಂ ಬದಲಾವಣೆ ಯಾವುದೇ ಚಿಂತನೆಯಿಲ್ಲ: ಕೇಂದ್ರ ಸಚಿವ ಜೋಶಿ
ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ಹರಿದು ಹಾಕಿದ ವಿಚಾರವಾಗಿ, ಆ ರೀತಿ ಯಾರೂ ಮಾಡಬಾರದು. ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್‌ಗೆ ಯಾರೂ ಹೋಲಿಸಬಾರದು. ಸೌಹಾರ್ದತೆ ಯಾರೂ ಹಾಳು ಮಾಡಬಾರದು. ಬ್ಯಾನರ್‌ಗಳ ಬಗ್ಗೆ ಆಕ್ಷೇಪಣೆ ಇದ್ದರೆ ಕಾನೂನಿನ ಮೂಲಕ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲಿ ಎಂದರು. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಕಾರ್ಪೊರೇಶನ್‌ಗೆ ಸೇರಿದ ಮೈದಾನ. ಅಲ್ಲಿ ಯಾರಿಗೆ ಪರ್ಮಿಷನ್ ಕೊಡಬೇಕು, ಬಿಡಬೇಕು ಎಂಬುದನ್ನು ಕಾರ್ಪೊರೇಶನ್‌ನವರು ತೀರ್ಮಾನ ಮಾಡುತ್ತಾರೆ ಎಂದು ಜೋಶಿ ಹೇಳಿದರು.
ಬೈಕ್ ಓಡಿಸಿ ರ್ಯಾಲಿಗೆ ಚಾಲನೆ: ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಹಾಗೂ 75ನೇ ಸ್ವಾತಂತ್ರ್ಯ ಅಮೃತೋತ್ಸವದ ಪ್ರಯುಕ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಯುವ ಘಟಕದ ಅಧ್ಯಕ್ಷ ಶಿವರಾಜ ಸಜ್ಜನ, ಪುರಸಭೆಯ ಅಧ್ಯಕ್ಷರು, ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರುಗಳು ಸೇರಿದಂತೆ ತಾಲೂಕಿನಲ್ಲಿ ನೂರಾರು ದ್ವಿಚಕ್ರ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವೆಂಕಯ್ಯ ನಾಯ್ಡುಗೆ ಬೀಳ್ಕೊಡಿಗೆ: ತುಂಬಿದ ಸಭೆಯಲ್ಲಿ ಕನ್ನಡ ಮಾತಾಡಿ ಗಮನಸೆಳೆದ ಪ್ರಲ್ಹಾದ್ ಜೋಶಿ
ಹರ್ ಘರ್ ತಿರಂಗಾಕ್ಕೆ ಉತ್ತಮ ಸ್ಪಂದನೆ: ಶನಿವಾರದಿಂದ ಮನೆ-ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನರಲ್ಲಿ ದೇಶಭಕ್ತಿ ಭಾವನೆ ಜಾಗ್ರತವಾಗಿದೆ ಎಂಬುದಕ್ಕೆ ಈ ಅಭಿಯಾನವೇ ಉದಾಹರಣೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ತಮ್ಮ ಮನೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಾಷ್ಟ್ರಧ್ವಜದ ಮಹತ್ವವನ್ನು ಭಾರತದ ವಿದ್ಯಾರ್ಥಿಗಳು ಸಾರಿದ್ದಾರೆ. ಭಾರತದ ಧ್ವಜ ಇದ್ದರೆ ಭಯವಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರು, ವೀರ ಸೇನಾನಿಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಧ್ವಜ ಹಾರಿಸದವರು ತಮ್ಮ ಮನೆಗಳಲ್ಲಿ ಹಾರಿಸುವಂತೆ ಅವರು ಮನವಿ ಮಾಡಿದರು.