ತುರ್ತು ಪರಿಸ್ಥಿತಿ ವಿರುದ್ಧ ಬೀದಿಗಿಳಿದು ಹೋರಾಡಿದ್ದೆ: ಸಿಎಂ ಬೊಮ್ಮಾಯಿ
ತುರ್ತು ಪರಿಸ್ಥಿತಿ ದೇಶದ ರಾಜಕಾರಣ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಯಿತು. ಈಗ ಕಾಂಗ್ರೆಸ್ ಪರವಾಗಿ ಮಾತನಾಡುವವರು ಅಂದು ತುರ್ತು ಪರಿಸ್ಥಿತಿ ವಿರೋಧಿಸಿದ್ದನ್ನು ಒಪ್ಪಿಕೊಳ್ಳಬೇಕು, ಆತ್ಮವಂಚನೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು (ಜೂ.26): ತುರ್ತು ಪರಿಸ್ಥಿತಿ ದೇಶದ ರಾಜಕಾರಣ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಯಿತು. ಈಗ ಕಾಂಗ್ರೆಸ್ ಪರವಾಗಿ ಮಾತನಾಡುವವರು ಅಂದು ತುರ್ತು ಪರಿಸ್ಥಿತಿ ವಿರೋಧಿಸಿದ್ದನ್ನು ಒಪ್ಪಿಕೊಳ್ಳಬೇಕು, ಆತ್ಮವಂಚನೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
47 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಏರ್ಪಡಿಸಿದ್ದ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನು, ನನ್ನದು, ನನ್ನ ಕುಟುಂಬ ಎಂಬ ಭ್ರಮೆ ತುರ್ತು ಪರಿಸ್ಥಿತಿಗೆ ಕಾರಣವಾಗಿತ್ತು. ಕಾಂಗ್ರೆಸ್‌ನ ಅಧಿಕಾರ ದುರುಪಯೋಗಕ್ಕೆ ಇದು ಸ್ಪಷ್ಟಕೈಗನ್ನಡಿಯಾಗಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರಿಂದ ರಾಷ್ಟ್ರ ರಾಜಕಾರಣ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಯಾಯಿತು. ಈ ಸಂಘರ್ಷದಲ್ಲಿ ಕೊನೆಗೆ ಜನಶಕ್ತಿಯೇ ಜಯಗಳಿಸಿತು ಎಂದು ಅಭಿಪ್ರಾಯಪಟ್ಟರು.
ಐಕಿಯಾದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶ ಭರವಸೆ: ಸಿಎಂ ಬೊಮ್ಮಾಯಿ
ಏನು ಮಾಡಿದರೂ ವಿರೋಧ: ಪ್ರಸ್ತುತ ದೇಶದಲ್ಲಿ ಹೊಸ ಯೋಜನೆ, ನಿಯಮಗಳನ್ನು ಜಾರಿಗೆ ತಂದರೂ ವಿರೋಧ ವ್ಯಕ್ತವಾಗುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಾಗುತ್ತಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಹೀಗೆ ಹೇಳುತ್ತಿದ್ದಾರೆಂದರೆ ಎಲ್ಲವೂ ಸರಿಯಾಗಿದೆ ಎಂದೇ ಅರ್ಥ ಎಂದರು. ಕುರ್ಚಿ ಉಳಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಅಂದು ಏಕಾಏಕಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಇಡೀ ದೇಶವೇ ಒಂದಾಗಿತ್ತು. ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ತುರ್ತು ಪರಿಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಲಾಗಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲಾಗಿತ್ತು. ವಿರೋಧಿಸಿದವರನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು ಎಂದು ಸ್ಮರಿಸಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯವಿರಲಿಲ್ಲ. ತುರ್ತು ಪರಿಸ್ಥಿತಿ ವಿರೋಧಿಸಿದ ಸಂಘ-ಸಂಸ್ಥೆಗಳ ಮುಖಂಡರು, ವಿರೋಧ ಪಕ್ಷಗಳ ನಾಯಕರು, ಅಷ್ಟೇ ಏಕೆ ಸ್ವಪಕ್ಷೀಯರನ್ನೂ ಜೈಲಿನಲ್ಲಿಡಲಾಗಿತ್ತು. ಪತ್ರಿಕೆಗಳ ಪ್ರಕಟಣೆ ಮೇಲೆ ನಿರ್ಬಂಧ ಹೇರಲಾಗಿತ್ತು. ಆಗ ನಾನು ವಿದ್ಯಾರ್ಥಿಯಾಗಿದ್ದು ಭೂಗತ ಪತ್ರಿಕೆಗಳ ಮೂಲಕ ವಿಷಯಗಳನ್ನು ತಿಳಿದು ಹುಬ್ಬಳ್ಳಿಯಲ್ಲಿ ಸ್ನೇಹಿತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದ್ದೆ ಎಂದು ನೆನಪಿಸಿಕೊಂಡರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುರಕ್ಷಿತವಾಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಬಡವರು, ದನಿ ಇಲ್ಲದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದೇಶದ ಸರ್ವತೋಮುಖ ಉನ್ನತಿಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಅಭಿವೃದ್ಧಿ ಸಹಿಸದ ಕೆಲವರು ವಿನಾಕಾರಣ ಟೀಕೆ ಮಾಡುತ್ತಾರೆ. ದೊಡ್ಡ ಬದಲಾವಣೆಗಳಾಗುವಾಗ ಸಣ್ಣಪುಟ್ಟವಿರೋಧಗಳು ಸಹಜ ಎಂದು ಸಮರ್ಥಿಸಿಕೊಂಡರು.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ದೇವೇಗೌಡ
ದೇಶ ಕಟ್ಟಿ: ದೇಶವನ್ನು ಕಟ್ಟಲು ಎಲ್ಲರೂ ಭಾಗೀದಾರರಾಗಬೇಕು. ಜನ್‌ಧನ್, ಸ್ವಚ್ಛ ಭಾರತ್, ನೇರ ನಗದು ವರ್ಗಾವಣೆ, ಜಲ ಜೀವನ್ ಮಿಷನ್ ಮತ್ತಿತರ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ. ಜನಕಲ್ಯಾಣದ ಗುರಿಯೊಂದಿಗೆ ಹೊಸ ದಿಕ್ಸೂಚಿಯನ್ನು ತಂದು ಭಾರತವನ್ನು ವಿಶ್ವನಾಯಕ ಮಾಡಲು ಮುನ್ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು. ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವರನ್ನು ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಗೌರವಿಸಿದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.