ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಅಲ್ಲೋಲ, ಕಲ್ಲೋಲವಾಗಲಿದೆ ಎಂದಿರುವ ಅಹಿಂದ ಒಕ್ಕೂಟದ ಗೌರವ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ, 2028ರ ವರೆಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ಹೇಳಿದರು.

ಹುಬ್ಬಳ್ಳಿ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಅಲ್ಲೋಲ, ಕಲ್ಲೋಲವಾಗಲಿದೆ ಎಂದಿರುವ ಅಹಿಂದ ಒಕ್ಕೂಟದ ಗೌರವ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ, 2028ರ ವರೆಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ಹೇಳಿದರು.

ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಅಹಿಂದ ರಾಜ್ಯ ಒಕ್ಕೂಟದಿಂದ ಬುಧವಾರ ಆಯೋಜಿಸಿದ್ದ ಅಹಿಂದ ಜಾಗೃತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾವೇಶ ಅನಿವಾರ್ಯ:

75 ವರ್ಷಗಳಿಂದ ರಾಜಕೀಯವಾಗಿ ಅಹಿಂದ ಸಮುದಾಯವನ್ನು ತುಳಿಯುತ್ತಿದ್ದು ಇಂದಿಗೂ ಮುಂದುವರಿದಿದೆ. ಹಾಗಾಗಿ ಸಮಾಜ ಬಾಂಧವರಿಗೆ ನ್ಯಾಯ ದೊರೆಯಬೇಕೆನ್ನುವ ಉದ್ದೇಶದಿಂದ ಅಹಿಂದ ಜಾಗೃತಿ ಸಮಾವೇಶ ಅನಿವಾರ್ಯವಾಗಿದೆ. ನಾವೆಲ್ಲರೂ ಬಿಜೆಪಿ ಕೋಮುವಾದಿಗಳ ಪಕ್ಷ ಎನ್ನುತ್ತೇವೆ. ಆದರೆ, ಬಿಜೆಪಿಗಿಂತ ಕಾಂಗ್ರೆಸ್ಸಿನಲ್ಲಿಯೇ ಕೋಮುವಾದಿಗಳ ಸಂಖ್ಯೆ ಹೆಚ್ಚಾಗಿದ್ದು, ಇವರಿಗೆ ಅಹಿಂದ ಸಮಾಜದವರನ್ನು ಕಂಡರೆ ಆಗುವುದಿಲ್ಲ ಎಂದು ಆರೋಪಿಸಿದರು.

ಸಮಾವೇಶ ಹಿನ್ನಡೆಗೆ ಡಿಕೆಶಿ ಯತ್ನ:

ಈ ಸಮಾವೇಶದಲ್ಲಿ ಶಾಸಕರು, ಮುಖಂಡರು ಪಾಲ್ಗೊಳ್ಳದಂತೆ ಡಿಸಿಎಂ ಡಿ.ಕೆ. ಶಿವಕುಮಾರ ಮೌಖಿಕ ಆದೇಶ ನೀಡುವ ಮೂಲಕ ಸಮಾವೇಶ ಹಿನ್ನೆಡೆಯಾಗುವಂತೆ ಮಾಡಿದ್ದಾರೆ. ಜತೆಗೆ ಧಾರವಾಡ ಸೇರಿದಂತೆ ಅನ್ಯ ಜಿಲ್ಲೆಗಳಿಂದ ಸಮಾವೇಶಕ್ಕೆ ಬರುತ್ತಿದ್ದ ವಾಹನಗಳನ್ನು ಪೊಲೀಸರು ತಡೆಹಿಡಿದಿದ್ದಾರೆ. ಜ. 24ರಂದು ಹುಬ್ಬಳ್ಳಿಯಲ್ಲಿ ನಡೆಯುವ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಕುರುಬ ಸಮಾಜದವರನ್ನು ಬರದಂತೆ ತಡೆಹಿಡಿಯಲಾಗುತ್ತಿದೆ. ಕುರುಬರಿಗೆ ಕರೆತರಲು ವಾಹನ ನೀಡದಂತೆ ಡಿ.ಕೆ. ಶಿವಕುಮಾರ ಸೂಚನೆ ನೀಡಿದ್ದಾರೆ ಎಂದು ತೇಜಿ ದೂರಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬೀರಲಿಂಗೇಶ್ವರ ಪೂಜಾರಿ ಮಾತನಾಡಿ, ಈ ಸಮಾವೇಶವನ್ನು ಜ. 29ರಂದು ಅದ್ಧೂರಿ ಆಚರಣೆಗೆ ನಿರ್ಧರಿಸಲಾಗಿತ್ತು. ಆದರೆ, ಕೆಲವು ದಿನಗಳಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ನಡೆಯುತ್ತಿರುವುದನ್ನು ಮನಗಂಡು ತರಾತುರಿಯಾಗಿ ಈ ಸಮಾವೇಶ ಮಾಡಬೇಕಾಯಿತು. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆ, ತಾಲೂಕು, ಗ್ರಾಮಮಟ್ಟಗಳಲ್ಲಿ ಸಂಘಟನೆ ಮಾಡಿ ಮತ್ತೊಮ್ಮೆ ಇದೇ ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶ ಮಾಡುವುದಾಗಿ ತಿಳಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಪ್ರಭುಲಿಂಗ ದೊಡ್ಡಿಣಿ ಸೇರಿದಂತೆ ಹಲವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಈಚೆಗೆ ನಿಧನರಾದ ಕಾಗಿನೆಲೆಯ ಸಿದ್ದರಾಮನಂದಪುರಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಬಿರಾದಾರ, ಹು-ಧಾ ಘಟಕದ ಅಧ್ಯಕ್ಷ ವಸೀಮ್ ಹಕೀಮ್, ಯುವ ಘಟಕದ ಅಧ್ಯಕ್ಷ ಶಂಕರ ಹೆಗಡೆ, ಕರಿಯಪ್ಪ ಕರಿಗಾರ ಸೇರಿದಂತೆ ಹಲವರಿದ್ದರು.

ಮೂರಂಕಿ ದಾಟದ ಜನರು...

ಈ ಸಮಾವೇಶದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಭೈರತಿ ಸುರೇಶ, ಕೆ.ಎನ್. ರಾಜಣ್ಣ ಸೇರಿದಂತೆ ಹಲವು ಅಹಿಂದ ನಾಯಕರು, ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಿಂದ 15 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಆದರೆ, ಸಮಾವೇಶದಲ್ಲಿ ಕೇವಲ 100-200 ಜನರು ಮಾತ್ರ ಸೇರಿರುವುದು ಕಂಡುಬಂದಿತು.