ಇವಿಎಂ ಮತದಾನ ಪ್ರಕ್ರಿಯೆಯಲ್ಲಿ ‘ಮತ ಚೋರಿ’ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿರುವ ಹೊತ್ತಿನಲ್ಲೇ ರಾಜ್ಯ ಚುನಾವಣಾ ಆಯೋಗ ಈ ಬಾರಿ ಜಿಬಿಎ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಹಳೇ ಮತದಾನ ಪದ್ಧತಿಯಾದ ‘ಬ್ಯಾಲೆಟ್ ಪೇಪರ್’(ಮತಪತ್ರ) ಮೂಲಕ ನಡೆಸಲು ತೀರ್ಮಾನಿಸಿದೆ.
ಜಿ.ಎಸ್.ಸಂಗ್ರೇಶಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ
ಮೋಹನ ಹಂಡ್ರಂಗಿ
ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಭರದ ಸಿದ್ಧತೆಯಲ್ಲಿ ತೊಡಗಿದೆ. ಇನ್ನು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಎದುರು ನೋಡುತ್ತಿದೆ. ಪ್ರಸ್ತುತ ಚುನಾವಣೆಗಳ ‘ಎಲೆಕ್ಟ್ರಾನಿಕ್ ವೋಟಿಂಗ್ ಮಷನ್’ (ಇವಿಎಂ) ಮತದಾನ ಪ್ರಕ್ರಿಯೆಯಲ್ಲಿ ‘ಮತ ಚೋರಿ’ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿರುವ ಹೊತ್ತಿನಲ್ಲೇ ರಾಜ್ಯ ಚುನಾವಣಾ ಆಯೋಗ ಈ ಬಾರಿ ಜಿಬಿಎ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಹಳೇ ಮತದಾನ ಪದ್ಧತಿಯಾದ ‘ಬ್ಯಾಲೆಟ್ ಪೇಪರ್’(ಮತಪತ್ರ) ಮೂಲಕ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
*ಆಧುನಿಕ ಇವಿಎಂ ಮತದಾನ ವ್ಯವಸ್ಥೆ ಇರುವಾಗ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತ್ತೆ ಹಳೆಯ ಮತದಾನ ವ್ಯವಸ್ಥೆಯಾದ ಬ್ಯಾಲೆಟ್ ಪೇಪರ್ ಮುಖಾಂತರ ನಡೆಸುವ ನಿರ್ಧಾರಕ್ಕೆ ಬರಲು ಕಾರಣವೇನು?
ಇದಕ್ಕೆ ವಿಶೇಷ ಕಾರಣ ಏನೂ ಇಲ್ಲ. ಚುನಾವಣೆಗಳಲ್ಲಿ ಮತದಾನಕ್ಕೆ ಇವಿಎಂ ಮತ್ತು ಬ್ಯಾಲೆಟ್ ಪೇಪರ್ ಆಯ್ಕೆ ಮಾಡುವುದಕ್ಕೆ ಕಾನೂನಲ್ಲಿ ಅವಕಾಶವಿದೆ. ಆ ಪ್ರಕಾರ ನಾವು ಬ್ಯಾಲೆಟ್ ಪೇಪರ್ ಆಯ್ಕೆ ಮಾಡಿದ್ದೇವೆ. ಇದೇನು ಕಾನೂನು ಬಾಹಿರವಲ್ಲ. ನ್ಯಾಯಾಲಯಗಳು ಬ್ಯಾಲೆಟ್ ಪೇಪರ್ ನಿಷೇಧಿಸಿಲ್ಲ. ಕಾಯ್ದೆ ಪ್ರಕಾರವೇ ನಾವು ಬ್ಯಾಲೆಟ್ ಪೇಪರ್ ಮುಖಾಂತರ ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಿದ್ದೇವೆ. ರಾಜ್ಯದ ಸಹಕಾರಿ ಸಂಘಗಳು, ಹಾಲು ಉತ್ಪಾದಕರು ಸಹಕಾರ ಸಂಘಗಳು ಸೇರಿ ಇನ್ನೂ ಅನೇಕ ಚುನಾವಣೆಗಳಲ್ಲಿ ಪ್ರಸ್ತುತ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯುತ್ತಿದೆ. ಈ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳನ್ನೂ ಬ್ಯಾಲೆಟ್ ಪೇಪರ್ ಮುಖಾಂತರ ನಡೆಸಲಾಗುತ್ತಿದೆ. ಇದರಲ್ಲಿ ತಪ್ಪೇನು? ಬ್ಯಾಲೆಟ್ ಪೇಪರ್ ಬಳಕೆ ಕಾರಣಕ್ಕೆ ಶಿಲಾಯುಗಕ್ಕೆ ವಾಪಸ್ ಎಂದು ಹೇಳಲು ಸಾಧ್ಯವಿಲ್ಲ. ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ದೇಶಗಳ ಚುನಾವಣೆಗಳು ಇಂದಿಗೂ ಬ್ಯಾಲೆಟ್ ಪೇಪರ್ ಮುಖಾಂತರ ನಡೆಯುತ್ತಿವೆ. ಉದಾಹರಣೆಗೆ ಅಮೇರಿಕ, ಜರ್ಮನಿ, ಜಪಾನ್ ಮೊದಲಾದ ದೇಶಗಳ ಚುನಾವಣೆಯಲ್ಲಿ ಈ ಬ್ಯಾಲೆಟ್ ಪೇಪರ್ ಬಳಕೆಯಾಗುತ್ತಿದೆ. ಹಲವು ದೇಶಗಳು ಇವಿಎಂನಿಂದ ಬ್ಯಾಲೆಟ್ ಪೇಪರ್‌ಗೆ ವಾಪಸಾಗುತ್ತಿವೆ. ಇಲ್ಲಿ ಇವಿಎಂ ಬೇಕು ಅಥವಾ ಬೇಡ ಪ್ರಶ್ನೆಯಲ್ಲ. ಕಾನೂನಿನಲ್ಲಿ ಇರುವ ವ್ಯವಸ್ಥೆಯನ್ನು ನಾವು ಬಳಸುತ್ತಿದ್ದೇವೆ ಅಷ್ಟೇ.
*ಇವಿಎಂನಿಂದ ಬ್ಯಾಲೆಟ್ ಪೇಪರ್ ಮತದಾನಕ್ಕೆ ಅವಕಾಶ ನೀಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗುವುದಿಲ್ಲವೇ?
ಖರ್ಚು ಇಲ್ಲದ್ದು ಏನಿದೆ? ಇಲ್ಲಿ ಖರ್ಚಿನ ಪ್ರಶ್ನೆ ಬರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲದಕ್ಕೂ ಒಂದು ಚೌಕಟ್ಟು ಇರುತ್ತದೆ. ಆ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರ ಬೂತ್‌ಗಳಿವೆ. ರಾಜ್ಯ ಚುನಾವಣಾ ಆಯೋಗದ ಬಳಿ ಸುಮಾರು ಎಂಟು ಸಾವಿರ ಮೆಟಲ್ ಮತ ಪೆಟ್ಟಿಗೆಗಳಿವೆ. ಇವಿಎಂ ಮತದಾನಕ್ಕೆ ವಿವಿ ಪ್ಯಾಟ್ ಬೇಕು. ಅದಕ್ಕೂ ಖರ್ಚಾಗುತ್ತದೆ. ಇಲ್ಲಿ ಖರ್ಚು ಇಲ್ಲದ್ದು ಏನೂ ಇಲ್ಲ. ಚುನಾವಣೆ ಮಾಡುವಾಗ ಖರ್ಚು-ವೆಚ್ಚಗಳ ಪ್ರಶ್ನೆ ಉದ್ಭವಿಸುವುದಿಲ್ಲ. ಯಾವುದೇ ಕಾಯ್ದೆ ರೂಪಿಸುವಾಗ ಉಭಯ ಸದನಗಳಲ್ಲಿ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿಯೇ ಮಾಡಲಾಗುತ್ತದೆ. ರಾಜ್ಯಪಾಲರು ಸಹಿ ಸಹ ಹಾಕಿರುತ್ತಾರೆ. ರಾಜ್ಯ ಚುನಾವಣಾ ಆಯೋಗವು ಆ ಕಾಯ್ದೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
*ಈ ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆಗೆ ಹೆಚ್ಚಿನ ಮಾನವ ಸಂಪನ್ಮೂಲ ಬೇಕಾಗುವುದಿಲ್ಲವೇ?
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮಾನವ ಸಂಪನ್ಮೂಲ ಬೇಕೇ ಬೇಕು. ಇವಿಎಂ ಮತದಾನ ಮತ್ತು ಬ್ಯಾಲೆಟ್ ಪೇಪರ್ ಮತದಾನ ಈ ಎರಡೂ ಪ್ರಕ್ರಿಯೆಗಳಿಗೂ ಮಾನವ ಸಂಪನ್ಮೂಲ ಅತ್ಯಗತ್ಯ. ನನ್ನ ಪ್ರಕಾರ ಬ್ಯಾಲೆಟ್ ಪೇಪರ್ ಮತ ಎಣಿಕೆಗೆ ಕೊಂಚ ಹೆಚ್ಚಿನ ಮಾನವ ಸಂಪನ್ಮೂಲ ಬೇಕಾಗಬಹುದು. ಆದರೆ ಅದನ್ನು ಹೊಂದಿಸುವುದು ಕಷ್ಟವೇನಲ್ಲ. ಈ ವ್ಯವಸ್ಥೆ ಹೊಸದೇನಲ್ಲ. ಇವಿಎಂ ಬರುವ ಮುನ್ನ ಚಾಲ್ತಿಯಲ್ಲಿದ್ದು ಬ್ಯಾಲೆಟ್ ಪೇಪರ್ ವ್ಯವಸ್ಥೆ ಅಲ್ಲವೇ? ಹಾಗಾಗಿ ಯಾವುದೇ ತೊಂದರೆ ಇಲ್ಲ.
*ಬ್ಯಾಲೆಟ್ ಪೇಪರ್ ಮತ ಎಣಿಕೆಗೆ ಹೆಚ್ಚಿನ ಸಮಯ ಹಿಡಿಯುವುದರಿಂದ ಫಲಿತಾಂಶ ವಿಳಂಬ ಆಗುವುದಿಲ್ಲವೇ?
ಇವಿಎಂ ಮತ ಎಣಿಕೆಗೆ ಹೋಲಿಸಿದರೆ ನಾಲ್ಕೈದು ತಾಸು ಹೆಚ್ಚಿನ ಸಮಯ ಬೇಕಾಗಬಹುದು. ಇದರಿಂದ ಅಂತಹ ಸಮಸ್ಯೆ ಉದ್ಭವಿಸುವುದಿಲ್ಲ. ಫಲಿತಾಂಶ ಪ್ರಕಟಣೆಗೆ ದಿನಗಟ್ಟಲೇ ವಿಳಂಬವಾಗುವುದಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು
*ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆಯಲ್ಲಿ ಮತಗಟ್ಟೆಗಳಲ್ಲಿ ಚುನಾವಣಾ ಅಕ್ರಮಗಳಿಗೆ(ರಿಗ್ಗಿಂಗ್) ಅವಕಾಶ ಆಗುವುದಿಲ್ಲವೇ?
ಚುನಾವಣಾ ರಿಗ್ಗಿಂಗ್ ಬಗ್ಗೆ ಈ ಹಿಂದೆ ನಾನು ಸಹ ಕೇಳಿದ್ದೇನೆ. ಈಗ ಅದೆಲ್ಲಾ ಸಾಧ್ಯವಿಲ್ಲ. ಪ್ರತಿ ಮತಗಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರುತ್ತದೆ. ಹಿಂದೆ ಸಿಸಿಟಿವಿ ಕ್ಯಾಮೆರಾಗಳು ಇರುತ್ತಿರಲಿಲ್ಲ. ಮತಗಟ್ಟೆಗಳಿಗೆ ಪೊಲೀಸ್ ಬಗಿ ಬಂದೋಬಸ್ತ್ ಇರುತ್ತದೆ. ಜನರ ಕಣ್ಣು ತಪ್ಪಿಸಬಹುದು. ಆದರೆ, ಸಿಸಿಟಿವಿ ಕ್ಯಾಮೆರಾ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಯಾವುದೇ ಅಭ್ಯರ್ಥಿಗಳ ಪರ ಅಕ್ರಮಗಳಲ್ಲಿ ತೊಡಗಿಸಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ಅಂತಹ ಅಕ್ರಮ ಚಟುವಟಿಕೆಗಳು ನಡೆದ ಬೂತ್‌ನಲ್ಲಿ ಮರು ಮತದಾನ ನಡೆಸಲಾಗುವುದು. ಈಗ ಜನ ಕೂಡ ಬದಲಾಗಿದ್ದಾರೆ. ಪ್ರಜ್ಞಾವಂತರಾಗಿದ್ದಾರೆ. ಹೊರಗೆ ಜಿದ್ದಾಜಿದ್ದಿನ ಚುನಾವಣೆ ಮಾಡಬಹುದು. ಆದರೆ, ಮತಗಟ್ಟೆಗಳಲ್ಲಿ ಅಕ್ರಮಗಳಿಗೆ ಅವಕಾಶವಿಲ್ಲ.
*ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್) ನಡೆಯಲು ಸಿದ್ಧತೆ ನಡೆದಿದೆ. ಈ ನಡುವೆ ರಾಜ್ಯ ಚುನಾವಣಾ ಆಯೋಗ ಜಿಬಿಎ ಚುನಾವಣೆ ಪ್ರಕ್ರಿಯೆ ಆರಂಭಿಸಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗುವುದಿಲ್ಲವೇ?
ರಾಜ್ಯದಲ್ಲಿ ಶೀಘ್ರದಲ್ಲೇ ಎಸ್‌ಐಆರ್ ನಡೆಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರು ಹಾಗೂ ಪಂಚ ನಗರ ಪಾಲಿಕೆಗಳ ಆಯುಕ್ತರೊಂದಿಗೆ ಚರ್ಚಿಸುತ್ತೇನೆ. ಎಸ್‌ಐಆರ್ ಮತ್ತು ಜಿಬಿಎ ಚುನಾವಣೆ ನಡುವೆ ಗೊಂದಲ ಆಗದಂತೆ 2 ತಿಂಗಳ ಹಿಂದೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಎಸ್‌ಐಆರ್ ನಡೆಸುವ ಕುರಿತು ಯಾವುದೇ ನಿರ್ದೇಶನ ಬಂದಿಲ್ಲ. ಆದರೂ ಈ ವಿಚಾರದಲ್ಲಿ ಯಾವುದೇ ಗೊಂದಲ ಆಗದಂತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ.
*ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆಗೆ ಮರಳಿರುವುದರಿಂದ ಏನಾದರೂ ಸವಾಲುಗಳು ಎದುರಾಗಬಹುದೇ?
ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆ ಹೊಸದೇನಲ್ಲ. ಇವಿಎಂಗೂ ಮುನ್ನ ಇದೇ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯಿಂದ ಯಶಸ್ವಿಯಾಗಿ ಚುನಾವಣೆ ನಡೆಸಲಾಗಿದೆ. ಈಗಲೂ ನಡೆಸಲಾಗುತ್ತಿದೆ. ನನ್ನ ಪ್ರಕಾರ ಅಂತಹ ದೊಡ್ಡ ಸವಾಲುಗಳು ಏನೂ ಇಲ್ಲ. ಒಂದು ವೇಳೆ ಹೊಸ ಸವಾಲು ಎದುರಾದರೂ ಎದುರಿಸಲು ರಾಜ್ಯ ಚುನಾವಣಾ ಆಯೋಗ ಸರ್ವಶಕ್ತವಾಗಿದೆ.
*ಈ ಬಾರಿಯ ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏನಾದರೂ ಬದಲಾವಣೆ ಅಥವಾ ವಿಶೇಷತೆಗಳನ್ನು ಕಾಣಬಹುದೇ?
ಅಂಥ ಪ್ರಮುಖ ಬದಲಾವಣೆ ಆಥವಾ ವಿಶೇಷತೆಗಳು ಏನೂ ಇಲ್ಲ. ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ಹಾಗೂ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ. ಮತದಾನ ಕುರಿತು ಜಾಗೃತಿ ಅಭಿಯಾನ, ಕಾರ್ಯಾಗಾರಗಳು, ಬೀದಿ ನಾಟಕಗಳ ಮುಖಾಂತರ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗೆ ಸೆಳೆಯಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮತ ಹಕ್ಕಿನ ಬಗ್ಗೆ ಅರಿವು ಮೂಡಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು.
*ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯ ಪಂಚ ನಗರ ಪಾಲಿಕೆಗಳ ಚುನಾವಣಾ ಸಿದ್ಧತೆಗಳು ಹೇಗೆ ನಡೆಯುತ್ತಿವೆ?
ಜಿಬಿಎ ವ್ಯಾಪ್ತಿಯ ಪಂಚ ನಗರ ಪಾಲಿಕೆಗಳ ಚುನಾವಣೆ ಸಂಬಂಧ ಪ್ರಕ್ರಿಯೆಗಳು ಆರಂಭವಾಗಿವೆ. ಈಗಾಗಲೇ ವಾರ್ಡ್ ವಾರು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಸಲಹೆ, ಆಕ್ಷೇಪಣೆಗಳನ್ನು ಸ್ವೀಕರಿಸಿ ಪರಿಶೀಲಿಸಿ ಮತದಾರರ ಪಟ್ಟಿ ಅಂತಿಮ ಗೊಳಿಸಲಾಗುವುದು. ಈಗಾಗಲೇ ಸುಪ್ರೀಂ ಕೋರ್ಟ್ ಜೂನ್ ಅಂತ್ಯದೊಳಗೆ ಜಿಬಿಎ ಚುನಾವಣೆ ಮುಗಿಸಲು ಆದೇಶಿಸಿದೆ. ನ್ಯಾಯಾಲಯದ ಆದೇಶ ಪಾಲಿಸಲೇಬೇಕು. ನಿಗದಿತ ಅವಧಿಯೊಳಗೆ ಜಿಬಿಎ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಯಲ್ಲಿ ತೊಡಗಿದೆ.
*ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಚುನಾವಣೆಗಳು ಯಾವಾಗ ನಡೆಯಬಹುದು?
ರಾಜ್ಯ ಸರ್ಕಾರ ಇನ್ನೂ ಮೀಸಲಾತಿ ಪಟ್ಟಿ ಕೊಟ್ಟಿಲ್ಲ. ಈ ವಿಚಾರ ಹೈಕೋರ್ಟ್‌ನಲ್ಲಿದೆ. ಜ.30ಕ್ಕೆ ವಿಚಾರಣೆ ಇದೆ. ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟ ತಕ್ಷಣ ಗ್ರಾಮ, ತಾಲೂಕು ಹಾಗೂ ಜಿಪಂಗಳ ಚುನಾವಣೆ ಕೈಗೆತ್ತಿಕೊಳ್ಳಲಾಗುವುದು. ಶಾಲಾ-ಕಾಲೇಜುಗಳ ವೇಳಾಪಟ್ಟಿ, ಮಳೆಗಾಲ ಇವೆಲ್ಲವನ್ನೂ ನೋಡಿಕೊಂಡು ಚುನಾವಣೆ ನಡೆಸಲಾಗುವುದು.


