Asianet Suvarna News Asianet Suvarna News

ಮೀಸಲು ಹೆಚ್ಚಳ ಕಾಂಗ್ರೆಸ್ಸಿಗೆ ಸಹಿಸಲಾಗ್ತಿಲ್ಲ: ಸಿಎಂ ಬೊಮ್ಮಾಯಿ

ತಾನೂ ಮಾಡಲಿಲ್ಲ, ಮಾಡಿರುವುದನ್ನೂ ಸಹಿಸಿಕೊಳ್ಳುತ್ತಿಲ್ಲ, ಜಗಳೂರು ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಬೊಮ್ಮಾಯಿ ಚಾಟಿ

CM Basavaraj Bommai Slams Congress grg
Author
First Published Nov 24, 2022, 6:54 AM IST

ಜಗಳೂರು(ನ.24):  ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ನಿರ್ಣಯಕ್ಕೆ ಅಪಸ್ವರ ಎತ್ತಿದ ಕಾಂಗ್ರೆಸ್‌ ತಾನೂ ಮಾಡಲಿಲ್ಲ, ಮಾಡಿರುವುದನ್ನೂ ಸಹಿಸಿಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಛೇಡಿಸಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಬುಧವಾರ ಬಿಜೆಪಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟಪಂಗಡದ ಮೀಸಲಾತಿಯನ್ನು ಶೇ.4ರಿಂದ 7ಕ್ಕೆ, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹೆಚ್ಚಿಸುವ ಮೂಲಕ ಸರಿಸಮಾನ ಮಾನ, ಸಮ್ಮಾನ ಕಲ್ಪಿಸಿದ್ದೇವೆ. ಮೀಸಲಾತಿ ಹೆಚ್ಚಳದಿಂದ ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ. ಇದನ್ನು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲ. ಎಲ್ಲಿವರೆಗೆ ಪರಿಶಿಷ್ಟರಿಗೆ ಶಿಕ್ಷಣ ಸಿಗುವುದಿಲ್ಲವೋ, ಅವರು ವಿದ್ಯಾವಂತರಾಗುವುದಿಲ್ಲವೋ ಅಲ್ಲಿವರೆಗೆ ತಮ್ಮ ಮತ ಬ್ಯಾಂಕ್‌ ಆಗಿ, ರಕ್ಷಣೆಯಾಗಿರುತ್ತಾರೆಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಪರಿಶಿಷ್ಟರು ಈಗ ಸಂಪೂರ್ಣ ಜಾಗೃತರಾಗಿದ್ದಾರೆ. ಸ್ವಾವಲಂಬಿ ಬದುಕನ್ನು ಈ ಜನರೂ ಕಾಣಬೇಕು ಎಂದು ತಿಳಿಸಿದರು.

JANA SANKALPA YATRE: ವರ್ಷದೊಳಗೆ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ: ಸಿಎಂ ಬೊಮ್ಮಾಯಿ

ಅಹಿಂದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟನಾಡಿನ ಜನತೆಗೆ ಭ್ರಮನಿರಸನವಾಗಿದೆ. ಹಿಂದುಳಿದ ವರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲುಮತದವರಿದ್ದಾರೆ. ಕುರಿ ಮೇಯಿಸುತ್ತಾ ಜೀವನ ಸಾಗಿಸುತ್ತಾರೆ. ಅಂತಹ ಕುರಿಗಾಹಿಗಳ ಸಂಘಕ್ಕೆ 5 ಲಕ್ಷ ನೀಡಲು 354 ಕೋಟಿ ರು. ನೀಡಿದ್ದೇವೆ. ಕುರಿಗಾಹಿಗಳಿಗೆ ನೆರವು ಸಾಧ್ಯವಿಲ್ಲವೆಂದಿದ್ದ ಸಿದ್ದರಾಮಯ್ಯನವರ ಮಾತನ್ನು ಸವಾಲಾಗಿ ಸ್ವೀಕರಿಸಿ, ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಬಡಿಗೇರ, ಕಮ್ಮಾರ, ಕುಂಬಾರ, ಮೇದಾರ ಸೇರಿ 23 ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ ನೆರವು ನೀಡುವ ಯೋಜನೆ ಶೀಘ್ರವೇ ಜಾರಿಗೊಳ್ಳಲಿದೆ ಎಂದು ಘೋಷಿಸಿದರು.

ಮಕ್ಕಳ ಹಾಸಿಗೆ, ದಿಂಬನ್ನೂ ಬಿಡಲಿಲ್ಲ:

ನೀವು ನಿಮ್ಮ ಕಾಲದಲ್ಲಿ ಎಷ್ಟೊಂದು ಭಾಗ್ಯ ಕೊಟ್ಟಿದ್ದೀರಿ. ಅನ್ನ ಭಾಗ್ಯದಲ್ಲಿ ಕನ್ನ ಹಾಕಿದ್ದೀರಿ. ಪರಿಶಿಷ್ಟರ ಯೋಜನೆಯಲ್ಲಿ ದಿಂಬು, ಹಾಸಿಗೆಯಲ್ಲೂ ಭ್ರಷ್ಟಾಚಾರ ಮಾಡಿದ್ರಿ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೀವೇ ಎಸ್ಸಿ-ಎಸ್ಟಿಮಕ್ಕಳ ದಿಂಬು, ಹಾಸಿಗೆಯನ್ನೂ ಬಿಡಲಿಲ್ಲ. ನಾಚಿಕೆಯಾಗಬೇಕು ನಿಮಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ಸಿನ ವಿರುದ್ಧ ಹರಿಹಾಯ್ದರು.

ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ

ಕಳೆದ ಎರಡೂವರೆ ದಶಕದಿಂದಲೂ ಸಾಮಾಜಿಕ ನ್ಯಾಯದ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿಕೊಂಡೇ ಬಂದಿದ್ದೇವೆ. ಹಿಂದೆ ಇದ್ದವರು ಹಿಂದೆಯೇ ಇದ್ದರೆ, ಸಾಮಾಜಿಕ ನ್ಯಾಯ ಅಂತಾ ಅಂದವರಷ್ಟೇ ಮುಂದೆ ಮುಂದೆ ಬಂದಿದ್ದಾರೆ. ಆದರೆ, ನಾವು ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸುವ ಮೂಲಕ ಹಿಂದೆ ಉಳಿದವರನ್ನೂ ಮುಂದೆ ತರುವ ಕೆಲಸ ಮಾಡುತ್ತಿದ್ದೇವೆ. ಇದಕ್ಕೂ ಸಾಮಾಜಿಕ ನ್ಯಾಯ, ಅಹಿಂದ ಎನ್ನುವ ನೀವು ಅಪಸ್ವರ ಎತ್ತುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

ರೈತರ ಮಕ್ಕಳಿಗೆ ಶಿಕ್ಷಣ ನೀಡಬೇಕು, ಅವಕಾಶಗಳನ್ನು ಕಲ್ಪಿಸಬೇಕು. ಭೂಮಿಯಂತೂ ಇದ್ದಷ್ಟೇ ಇದೆ. ಆದರೆ, ಅದೇ ಭೂಮಿ ಅವಲಂಬಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿಯೇ ರೈತ ವಿದ್ಯಾನಿಧಿ ಮಾಡಿದ್ದೇವೆ. ಶಿಕ್ಷಣ, ಉದ್ಯೋಗವನ್ನು ರೈತರ ಮಕ್ಕಳೂ ಮಾಡಬೇಕು. ಆ ರೈತರ ಮಕ್ಕಳೂ ಮುಖ್ಯವಾಹಿನಿಗೆ ಬರಲಿ ಎಂಬ ಕಾರಣಕ್ಕೆ, ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಯಾಗಲೆಂದು ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ 2 ಸ್ತ್ರೀಶಕ್ತಿ ಸಂಘಕ್ಕೆ ತಲಾ 5 ಲಕ್ಷ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.
 

Follow Us:
Download App:
  • android
  • ios