ಪಿಎಸೈ ಅಕ್ರಮದಲ್ಲಿ ನಿಮ್ಮ ಪಕ್ಷದವರೇ ರೂವಾರಿಗಳು: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
ಎಸ್ಸಿ, ಎಸ್ಟಿ ಹಾಸ್ಟೆಲಿನ ದಿಂಬು ಚದ್ದರಿನಲ್ಲೂ ಹಣ ಹೊಡೆದಿರುವ ಕಾಂಗ್ರೆಸ್ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಾಚಿಕೆಯಾಗಲ್ವೆ ಎಂದ ಬಸವರಾಜ ಬೊಮ್ಮಾಯಿ
ಯಾದಗಿರಿ(ಅ.20): ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸ್ಸಿ, ಎಸ್ಟಿ ಹಾಸ್ಟೆಲಿನ ದಿಂಬು ಚದ್ದರಿನಲ್ಲೂ ಹಣ ಹೊಡೆದಿರುವ ಕಾಂಗ್ರೆಸ್ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಾಚಿಕೆಯಾಗಲ್ವೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಜಿಲ್ಲೆಯ ಹುಣಸಗಿಯಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ, ಕೆಕೆಆರ್ಡಿಬಿ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ) ಹಣ ಪೂರ್ಣ ಜನರಿಗೆ ಮುಟ್ಟಿಲ್ಲ. ನಾನು ಉಸ್ತುವಾರಿಯಾಗಿದ್ದಾಗ 2010 ರಲ್ಲಿ ನರೇಗಾದಲ್ಲಿ ಕಾಂಗ್ರೆಸ್ ಶಾಸಕರು ನೂರಾರು ಕೋಟಿ ರು.ಗಳನ್ನು ಹೊಡೆದಿದ್ದರಷ್ಟೇ ಅಲ್ಲ, ಪ್ರಶಸ್ತಿ ಪಡೆಯಲೂ ಹೊರಟಿದ್ದರು. ಕೊನೆಗೆ ಸಿಬಿಐ ವಿಚಾರಣೆ ಆಯ್ತು. ಕಾಂಗ್ರೆಸ್ಸಿನವರು ನರೇಗಾದ ದುಡ್ಡು ಬಿಡಲಿಲ್ಲ, ಬಡವರ ದುಡ್ಡೂ ಬಿಟ್ಟಿಲ್ಲ, ಎಸ್ಸಿ, ಎಸ್ಟಿಹಾಸ್ಟೆಲ್ ಬಿಡಲಿಲ್ಲ, ದಿಂಬು ಚಾದರಿನಲ್ಲಿ ಹಣ ಹೊಡೆದಿದ್ದೀರಿ ನಾಚಿಕೆಯಾಗುದಿಲ್ಲವೇ? ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಬೆಂಗಳೂರು ನೆಲದಲ್ಲಿ ದುಡ್ಡು ಮಾಡಿದ್ದೀರಿ, ನೆಲದಲ್ಲಿ ದುಡ್ಡು ಹೊಡೆದಿದ್ದೀರಿ, ನೀರಾವರಿ ನೀರಿನಲ್ಲಿ ದುಡ್ಡು ಹೊಡೆದಿದ್ದೀರಿ, ಬಂಧುಗಳಿಗ ನೌಕರಿ ಕೊಡುವಲ್ಲಿ ದುಡ್ಡು ಹೊಡೆದಿದ್ದೀರಿ ಎಂದ ಸಿಎಂ ಬೊಮ್ಮಾಯಿ ಅವರು, ಇದೇ ಗುಲ್ಬರ್ಗದಲ್ಲಿ ಪೊಲೀಸ್ ನೌಕರಿ ಕೊಡುವಾಗ ದುಡ್ಡು ಹೊಡೆದಿದ್ದೀರಿ. ಈಗಲೂ ಪಿಎಸೈ ನೌಕರಿ ಕೊಡುವಲ್ಲಿ ದುಡ್ಡು ಹೊಡೆದವರು ನಿಮ್ಮ ಪಕ್ಷದವರೇ ರೂವಾರಿಗಳೇ ಎಂದು ವಾಕ್‌ಪ್ರಹಾರ ನಡೆಸಿದರು.
ಕೆಳಮಟ್ಟದ ಪದ ಬಳಕೆ ಮಾಡಿದ ರಾಜಕೀಯ ನಾಯಕರು: ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಅನ್ನೋದೇ ದುರಂತ..!
ಇಷ್ಟು ವರ್ಷ ರಾಜಕೀಯ ಮಾಡಿದ ಈ ಭಾಗದ ಕಾಂಗ್ರೆಸ್ ಮಹಾನ್ ನಾಯಕರು ಜನರ ಮಧ್ಯೆ ಬಹಳ ದೊಡ್ಡ ನಾಯಕರು ಎಂದೆನಿಸಿಕೊಂಡಿದ್ದಾರೆ. ಈ ಭಾಗದ ಜನರ ಋುಣದಿಂದ ಮಂತ್ರಿಗಳು ಹಾಗೂ ದೊಡ್ಡ ನಾಯಕರು ಆಗಿದ್ದಾರೆ. ಆದರವರು ಕಲ್ಯಾಣ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಖರ್ಗೆ, ಧರಂರ ಬಗ್ಗೆ ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ನಾಲ್ಕೈದು ದಶಕಗಳ ಕಾಲ ಹೆಗಲು ಮೇಲೆ ಮೆರೆಸಿದ್ದೀರಿ, ಅವರ ಮೇಲೆ ನೀವು ವಿಶ್ವಾಸ ಇಟ್ಟರೂ ಹಿಂದುಳಿದವರೇ ಆಗಿರುವುದು ಅಚ್ಚರಿ ಮೂಡಿಸಿದೆ ಎಂದರು.
371(ಜೆ) ಬೇಡುವಂತಹ ಪರಿಸ್ಥಿತಿ ಬಂತು. ನಾಲ್ಕು ದಶಕಗಳ ಕಾಲ ಅಭಿವೃದ್ಧಿ ಕಾಣಲಿಲ್ಲ, ನಂಜುಂಡಪ್ಪ ವರದಿ 2002 ರಲ್ಲಿ ಬಂದಾಗ ಬಿಎಸ್ವೈಬಂದ ಮೇಲೆ ಅನುದಾನ ಕೊಟ್ಟರು. ಅಲ್ಲಿವರೆಗೆ ಆಳಿದವರು ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. ಅದೇ ರೀತಿ 371 (ಜೆ) ಐದು ವರ್ಷ ಯಾವುದೇ ಅನುದಾನ ಬಂದಿರಲಿಲ್ಲ. ಹೀಗಾಗಿ, ಈ ಭಾಗ ಈ ಹಿಂದುಳಿದವಾಗಿಯೇ ಉಳಿದಿತ್ತು ಎಂದರು.
ಈ ಭಾಗದರ ರೈತರು ಮುಂದೆ ಬರಲಿ, ಆರ್ಥಿಕವಾಗಿ ಸಬಲರಾಗಲಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಮಾಡಿಲ್ಲ. ಈ ಭಾಗದಲ್ಲಿ ಸನ್ನತಿ, ಭೀಮಾ ಪ್ಲಾಂಕ್ ಯೋಜನೆಗಳಿಗೆ ವಿಶೇಷ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ. ಅಲ್ಲದೆ, ಇವತ್ತು ಯಾದಗಿರಿಗೆ ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ. ಬರುವ ಶೈಕ್ಷಣಿಕ ವರ್ಷದಿಂದ ಅಡ್ಮಿಷನ್ ಆರಂಭವಾಗಲಿದೆ. ಇದೇ ವರ್ಷದಿಂದಲೇ ನಡೆಸುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನ ಆಗ ಕಾಂಗ್ರೆಸ್ ಯಾಕೆ ಮಾಡಲಿಲ್ಲ, ಅವರಿಗೆ ಇಚ್ಛಾಶಕ್ತಿ ಇರಲಿಲ್ಲ. ಅಲ್ಲದೆ, ಜನರನ್ನು ಕತ್ತಲಲ್ಲಿಡುವ ಪ್ರಯತ್ನ ನಡೆಯಿತು. ಓದಿ ಬುದ್ಧಿವಂತರಾದರೆ ನಮ್ಮನ್ನು ಪ್ರಶ್ನೆ ಮಾಡ್ತಾರೆ ಎಂಬ ಭಾವನೆ ಕಾಂಗ್ರೆಸ್ನವರಿಗೆ ಕಾಡಿತ್ತೇನೋ ಎಂದು ಬೊಮ್ಮಾಯಿ ಮಾತಿನ ಚಾಟಿ ಬೀಸಿದರು.
ರಾಯಚೂರಿನಲ್ಲಿ ವಿಮಾನ ನಿಲ್ದಾಣ, ಯಾದಗಿರಿ-ಕಲಬುರಗಿಯಲ್ಲಿ ಟೆಕ್ಸಟೈಲ್ ಪಾರ್ಕ್, ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್ ಹೀಗೆ ಸಮಗ್ರ ಅಭಿವೃದ್ಧಿ ಬಗ್ಗೆ ಕಲ್ಪನೆ ಇದೆ ಎಂದು ಸಿಎಂ ಹೇಳಿದರು.
ಈ ಭಾಗದ ಋುಣದಲ್ಲಿ ಕಾಂಗ್ರೆಸ್ ನಾಯಕರು :
ಈ ಭಾಗದ ಜನರ ಋುಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ನಾವು ನಿಮ್ಮ ಋುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಾಮಾಜಿಕ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ನ್ಯಾಯ ಕೂಡ ಇರಬೇಕು. ಭಾಷಣ ಮಾಡಿ ನಾವು ದೀನ ದಲಿತರ ಪರವಾಗಿ, ಹಿಂದುಳಿದದವರ ಅಲ್ಪಸಂಖ್ಯಾತರ ಪರವಾಗಿ ಎಂದು ಹೇಳಿ ಹೇಳಿ 70 ವರ್ಷ ರಾಜಕಾರಣ ಮಾಡಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಹಿಂದುಳಿದ ವರ್ಗಕ್ಕೂ ನ್ಯಾಯ: ಹಿಂದುಳಿದವರಿಗೂ ನ್ಯಾಯ ಕೊಡಬೇಕು, ಕನಕದಾಸರ ಹುಟ್ಟಿದ ಊರಿನಿಂದ ನಾನು ಬಂದಿದ್ದೇನೆ. ಈ ಭಾಗದವರನ್ನು ಕರೆದುಕೊಂಡ ಬನ್ನಿ ಎಂದ ಸಿಎಂ ಬೊಮ್ಮಾಯಿ, ಎಸ್ಟಿಸಮುದಾಯಕ್ಕೆ ನಿಗಮ ಮಾಡಿರುವುದು ಬಿಜೆಪಿ, ವಾಲ್ಮೀಕಿ ಜಯಂತಿ ಆಚರಣೆಗೆ ಚಾಲನೆ ನೀಡಿರುವುದು ಬಿಜೆಪಿ, ಅಲ್ಲದೆ ಬೇರೆ ವಿಭಾಗ ಮಾಡಿರುವುದು ನನ್ನ ಸರ್ಕಾರ. ಮಾತಲ್ಲಿ ಅಲ್ಲ ಕೃತಿಯಲ್ಲಿ ಇವೆಲ್ಲವನ್ನೂ ತೋರಿಸಿದ್ದೇನೆ ಎಂದರು.
ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿಲ್ಲ, ಚೀಲ ಮಾತ್ರ: ಸಚಿವ ಕಾರಜೋಳ
ಇಲ್ಲಿನ ಇತಿಹಾಸ ದೊಡ್ಡದಿದೆ. ಔರಂಗಜೇಬನ್ನು ಹಿಮ್ಮೆಟ್ಟಿಸಿದ ನಾಯಕರ ಶೌರ‍್ಯತನ ಇಲ್ಲಿನದ್ದು. ಈ ದುಷ್ಟಶಕ್ತಿಗಳಿಗೆ ತಕ್ಕ ಪಾಠ ಕಲಿಸುವ ರೀತಿಯಲ್ಲಿ ಎಲ್ಲರೂ ಒಂದಾಗಿ ಈ ಬಾರಿ ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳಿಸಿ ಎಂದು ಜನರಲ್ಲಿ ಸಿಎಂ ಮನವಿ ಮಾಡಿದರು.
ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದೆ, ಯಾರೂ ಮಾಡಿರಲಿಲ್ಲ. ನಾಲ್ಕೇ ತಾಸುಗಳಲ್ಲಿ ಮಾಡಿದ್ದೇನೆ. ಕೂಲಿಕಾರರ ಮಕ್ಕಳಿಗೂ ವಿದ್ಯಾನಿಧಿ, ನೇಕಾರರಿಗೆ, ಮೀನುಗಾರರ ಮಕ್ಕಳಿಗೂ ಇದು ಅನ್ವಯಿಸುತ್ತದೆ. ಬಾಬುರಾವ್ ಚಿಂಚನಸೂರು ಇಲ್ಲಿದ್ದಾರೆ. ಆ ಜನರಿಗೆ ನ್ಯಾಯ ಕೊಡಿಸಲು ಜೀವನವನ್ನೇ ತ್ಯಾಗ ಮಾಡಿದ್ದಾರೆ, ಹೋರಾಟ ಮಾಡಿದ್ದಾರೆ. ಆದರೆ, ಕಾಂಗ್ರೆಸ್ಸಿನಲ್ಲಿ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮಲ್ಲಿ ಬಂದಿದ್ದಾರೆ. ಬರುವ ದಿನಗಳಲ್ಲಿ ಆ ವರ್ಗಕ್ಕೆ ನ್ಯಾಯ ಕೊಡುತ್ತೇವೆ ಎನ್ನುವ ಮೂಲಕ ಸಿಎಂ, ಕೋಲಿ ಸಮಾಜಕ್ಕೆ ಎಸ್ಟಿಸೇರ್ಪಡೆ ಕುರಿತ ಒತ್ತಾಯಕ್ಕೆ ಸಕಾರಾತ್ಮಕ ಪ್ರತಿಕ್ರಿಯಿಸಿದಂತಿತ್ತು.