ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿಲ್ಲ, ಚೀಲ ಮಾತ್ರ: ಸಚಿವ ಕಾರಜೋಳ
ನಶಿಸುತ್ತಿರುವ ಕಾಂಗ್ರೆಸ್ ಉಳಿಸಲು ಭಾರತ್ ಜೋಡೋ: ನೀರಾವರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯ
ಔರಾದ್(ಅ.19): ಕಾಂಗ್ರೆಸ್ ನಶಿಸಿ ಹೋಗುವ ಸಂದರ್ಭದಲ್ಲಿ ಹೊಸ ನಾಟಕಗಳನ್ನು ಪ್ರದರ್ಶಿಸುವ ಕಾರ್ಯ ಮಾಡುತ್ತಿದ್ದು ಅದರಲ್ಲೊಂದು ಈ ಭಾರತ ಜೋಡೋ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಔರಾದ್‌ನಲ್ಲಿ ಜನ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಜೋಡೊ ಯಾತ್ರೆ ಜಮ್ಮು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಕ್ಕೂ ವರ್ಚಸ್ಸು ಕಳೆದುಕೊಂಡ ರಾಹುಲ್ ಗಾಂಧಿಯವರನ್ನು ಮತ್ತೆ ಹೊಳಪಿಸುವ ಹೊಸ ನಾಟಕ ಪ್ರಯೋಗ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಜನ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿರುವ ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದೆ. ಕಾಂಗ್ರೆಸ್ ವಿಳಾಸ ಸಿಗದಂತಹ ಹಾಗೂ 2023ರ ಚುನಾವಣೆ ನಂತರ ಕಾಂಗ್ರೆಸ್ ಕಚೇರಿಗೆ ದೀಪ ಹಚ್ಚಲೂ ಯಾರೂ ಸಿಗದಂತಹ ಸಂದರ್ಭದಲ್ಲಿ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಿರುವುದು ವಿಚಿತ್ರವಾಗಿದೆ. ಏನೇ ಗಿಮಿಕ್ ಮಾಡಿದರೂ ಕಾಂಗ್ರೆಸ್ ಅಸ್ತಿತ್ವದಲ್ಲಿ ಉಳಿಯಲ್ಲ ಎಂದರು.
ಬೇಲ್ ಮೇಲಿರುವ ರಾಹುಲ್, ಭ್ರಷ್ಟಾಚಾರದ ಮಾತು: ಸಿಎಂ ಬೊಮ್ಮಾಯಿ ವ್ಯಂಗ್ಯ
ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿಲ್ಲ. ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು, ಒಳಗಿರುವ ಅಕ್ಕಿ ನರೇಂದ್ರ ಮೋದಿ ಅವರದ್ದು, ಎಸ್ಸಿ/ಎಸ್ಟಿಮೀಸಲಾತಿ ಹೆಚ್ಚಿಸುವ ಯಾವ ಪ್ರಯತ್ನವನ್ನೂ ಮಾಡದೇ ಬರೀ ತೋರಿಕೆಗೆ ಮಾತ್ರ ಎಸ್ಸಿ/ಎಸ್ಟಿಜನರನ್ನು ಬಳಸಿಕೊಂಡ ಕಾಂಗ್ರೆಸ್ ದೀನ ದಲಿತರನ್ನು ತುಳಿಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಸಿಎಂ ಬೊಮ್ಮಾಯಿ ಅವರು ಐತಿಹಾಸಿಕ ನಿರ್ಣಯ ತೆಗೆದುಕೊಂಡು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿಸುವ ಮೂಲಕ 11,133 ಜನರಿಗೆ ನೌಕರಿ ನೀಡಿ ಆದೇಶಿಸಿದ್ದಾರೆ. ಕಾಂಗ್ರೆಸ್ ಏನೇ ನಾಟಕ ಮಾಡಿದ್ರೂ ಕಿವಿಗೊಡದೆ ಮತ್ತೊಮ್ಮೆ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.