ಕಾಂಗ್ರೆಸ್‌ಗೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಚಾಟಿ
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ, ಅವರ ಕನಸು ನನಸಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ.
ಉಡುಪಿ (ನ.08): ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ, ಅವರ ಕನಸು ನನಸಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ನಾಯಕರು ಮತ್ತೆ ಸರ್ಕಾರ ರಚಿಸುವ ಕನಸು ಬಿಟ್ಟು, ತಾವು ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಯತ್ನಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದೇ ವೇಳೆ, ‘ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ಬಚ್ಚಾ ಎಂದು ಈ ಹಿಂದೆಯೇ ಹೇಳಿದ್ದೇನೆ. ಅವರು ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷ ಸೋತಿರುವುದರಿಂದ ವಸ್ತುಸ್ಥಿತಿ ನೋಡಿಕೊಂಡೇ ಆ ಹೇಳಿಕೆ ನೀಡಿದ್ದೇನೆ. ಕಾಂಗ್ರೆಸಿಗರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆ ಬಿಟ್ಟುಬಿಡಲಿ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀಕ್ಷ$್ಣವಾಗಿ ಹೇಳಿದ್ದಾರೆ. ಬಿಜೆಪಿಯ ‘ಜನಸಂಕಲ್ಪ ಯಾತ್ರೆ’ಯ ಮೂರನೇ ಹಂತವಾಗಿ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಲ ಕಟ್ಟದಿದ್ದರೂ ರೈತರ ಆಸ್ತಿ ಜಪ್ತಿ ಮಾಡುವಂತಿಲ್ಲ: ಸಿಎಂ ಬೊಮ್ಮಾಯಿ
ಅಹಿಂದ ಹಿಂದೆ, ಸಿದ್ರಾಮಯ್ಯ ಮಾತ್ರ ಮುಂದೆ: ಸಿದ್ರಾಮಯ್ಯನವರೇ, ನಿಮ್ಮ ಅಹಿಂದ ಎಲ್ಲಿದೆ? ಎಲ್ಲಿದೆ ನಿಮ್ಮ ಸಾಮಾಜಿಕ ನ್ಯಾಯ? ಅಹಿಂದ ಮಾಡಿ ನೀವೊಬ್ಬರೇ ಮುಂದೆ ಹೋದಿರಿ, ಅಹಿಂದ ಹಿಂದೆ ಬಿಟ್ಟಿರಿ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ, ಯಡಿಯೂರಪ್ಪ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಆದರೆ, ಅವರಿಬ್ಬರೂ ಮುಖ್ಯಮಂತ್ರಿಗಳಾದರು. ಸಿದ್ದರಾಮಯ್ಯನವರೇ ಅಧಿಕಾರ ಕಳೆದುಕೊಂಡರು. ಅವರು ಅಧಿಕಾರ ನಡೆಸಿ, ಕಾರ್ಯಕ್ರಮ ಕೊಟ್ಟಾಗಲೇ ಜನ ಅವರನ್ನು ತಿರಸ್ಕರಿಸಿದ್ದಾರೆ. ಹೀಗಾಗಿ, ಅವರ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಖರ್ಗೆ ಹೇಳಿಕೆ ಹಾಸ್ಯಾಸ್ಪದ: 50 ವರ್ಷಗಳಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹಾಸ್ಯಾಸ್ಪದ. 50 ವರ್ಷಗಳ ಕಾಲ ಕಾಂಗ್ರೆಸ್‌ನ ಭ್ರಷ್ಟಸರ್ಕಾರವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರ ಆರಂಭವಾಗಿದೆ. ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಖರ್ಗೆಯವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ 3 ಪ್ರಕರಣಗಳ ತನಿಖೆ ನಡೆಯುತ್ತಿದೆ. ಮುಂದೆ ಇನ್ನಷ್ಟು ಪ್ರಕರಣಗಳು ಬಯಲಾಗುತ್ತವೆ ಎಂದು ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.
ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಕೊಡಲು ನಿಮಗೆ ದಮ್ ಇರಲಿಲ್ಲ. ನಾವು ಮೀಸಲಾತಿಯನ್ನು ಹೆಚ್ಚಿಸಿದೆವು. ಆದರೆ, ಕಾಂಗ್ರೆಸ್ ಅದಕ್ಕೂ ತಕರಾರು ತೆಗೀತಿದೆ. ಇದು ಕಾಂಗ್ರೆಸ್ ನೀತಿ ಎಂದು ಆರೋಪಿಸಿದರು. ಇದೇ ವೇಳೆ, ಎಸ್ಸಿ, ಎಸ್ಟಿಸಮುದಾಯ ಹಾಗೂ ದೈವ ನರ್ತಕರಿಂದ ಸಿಎಂ ಅವರನ್ನು ಸನ್ಮಾನಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಸಚಿವರುಗಳಾದ ಗೋವಿಂದ ಕಾರಜೋಳ, ವಿ.ಸುನಿಲ್ ಕುಮಾರ್, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ನಾರಾಯಣ ಗುರುಗಳಿಗೆ ಪೂಜೆ: ಇದಕ್ಕೂ ಮೊದಲು ಬೆಳಗ್ಗೆ ಉಡುಪಿಗೆ ಆಗಮಿಸಿದ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೂಡಿ ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಅಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಬಿಲ್ಲವರ ಸಮುದಾಯದ ನಾಯಕರು, ಸರ್ಕಾರ ಘೋಷಿಸಿರುವ ನಾರಾಯಣ ಗುರು ಅಭಿವೃದ್ಧಿ ಕೋಶ ಬೇಡ, ಅದಕ್ಕೆ ಬದಲಾಗಿ ಬಿಲ್ಲವ ಈಡಿಗ ನಿಗಮ ಸ್ಥಾಪಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಭಿವೃದ್ಧಿ ಕೋಶದ ಮೂಲಕ ನೀಡಲಾಗುವ ಪ್ರಯೋಜನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಜನರ ಮನದಾಳ ಅರಿವ ಮಾಧ್ಯಮಕ್ಕೆ ಯಶಸ್ಸು: ಸಿಎಂ ಬೊಮ್ಮಾಯಿ
ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ನಾನು ಚಾಮರಾಜನಗರದಿಂದ, ಬೊಮ್ಮಾಯಿಯವರು ಉತ್ತರ ಕರ್ನಾಟಕದಿಂದ ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ 140ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ತಂದು ಕೊಡುವುದು ನಮ್ಮ ಗುರಿ.
- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ