ಕರ್ನಾಟಕದಲ್ಲಿ ಸುಭದ್ರ ಸರ್ಕಾರ ರಚನೆ ಬೆನ್ನಲ್ಲೇ ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!
ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಕಾಂಗ್ರೆಸ್ ಸುಭದ್ರ ಸರ್ಕಾರ ರಚಿಸಿದೆ. ಆದರೆ ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರ ಅಲುಗಾಡುತ್ತಿದೆ. ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧದ ಸಮರ ಸಾರಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಗಡುವು ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಜೈಪುರ್(ಮೇ.23): ಕರ್ನಾಟಕದಲ್ಲಿ 135 ಸ್ಥಾನ ಗೆಲ್ಲುವ ಮೂಲಕ ಇತಿಹಾಸ ಬರೆದ ಕಾಂಗ್ರೆಸ್ ಸುಭದ್ರ ಸರ್ಕಾರ ರಚಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಲವು ಮಿತ್ರ ಪಕ್ಷಗಳು ಪಾಲ್ಗೊಂಡು ಶಕ್ತಿ ಪ್ರದರ್ಶನವನ್ನೂ ನಡೆಸಿತ್ತು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಬಾವುಟ ನೆಟ್ಟ ಹೈಕಮಾಂಡ್‌ಗೆ ಇದೀಗ ರಾಜಸ್ಥಾನದ ತಲೆನೋವು ಜೋರಾಗುತ್ತಿದೆ. ರಾಜಸ್ಥಾನದ ಸರ್ಕಾರವೇ ಅಲುಗಾಡಲು ಆರಂಭಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಮರ ಆರಂಭಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಇದೀಗ ಬೇಡಿಕೆ ಈಡೇರಿಕೆಗೆ ಅಂತಿಮ ಗಡುವು ನೀಡಿದ್ದಾರೆ. ಇತ್ತ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ನಡುವಿನ ಗುದ್ದಾಟ ತೀವ್ರಗೊಳ್ಳುತ್ತಿದ್ದಂತೆ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸುಖ್‌ಜಿಂದರ್ ಸಿಂಗ್ ರಾಂಧವ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕುರಿತು ಯಾವುದೇ ವಿಚಾರಗಳಿದ್ದರೆ ಮಾತನಾಡುತ್ತೇನೆ. ಇದು ಪೈಲೆಟ್ ಹಾಗೂ ಅಶೋಕ್ ಗೆಹ್ಲೋಟ್ ನಡುವಿನ ವಿಚಾರ ಎಂದು ವಿವಾದಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದಾರೆ.
ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ಸೇರಿದಂತೆ ಕೆಲ ಬೇಡಿಕೆ ಮುಂದಿಟ್ಟು ಸಚಿನ್ ಪೈಲೆಟ್ ತಮ್ಮದೇ ಸರ್ಕಾರದ ವಿರುದ್ದ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಯಾತ್ರೆ ನಡೆಸುತ್ತಿದ್ದಾರೆ. ಈ ಮೂಲಕ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಇರಿಸು ಮುರಿಸು ತಂದಿದ್ದಾರೆ. ಇವರಿಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ, ವಿವಾದಿಂದ ದೂರ ಉಳಿಯುವ ಪ್ರಯತ್ನವನ್ನು ರಾಂಧವ ಮಾಡಿದ್ದಾರೆ. ತಮ್ಮ ಪಕ್ಷದ ನಾಯಕರು ಕಿತ್ತಾಡಿಕೊಳ್ಳುತ್ತಿದ್ದರೂ, ಇದು ಸರ್ಕಾರ ಹಾಗೂ ಸಚಿನ್ ಪೈಲೆಟ್ ನಡುವಿನ ವಿಚಾರ. ಪಕ್ಷದ ವಿಚಾರವಲ್ಲ ಎಂದಿದ್ದಾರೆ.
ಭ್ರಷ್ಟಾಚಾರ ಇದ್ದಲ್ಲಿ ಜನ ಸರ್ಕಾರ ಉಳಿಸಲ್ಲ: ಬೊಮ್ಮಾಯಿ ಸರ್ಕಾರ ತೋರಿಸಿ ಗೆಹ್ಲೋಟ್‌ಗೆ ಸಚಿನ್ ಪೈಲಟ್ ಎಚ್ಚರಿಕೆ!
ಸಚಿನ್ ಪೈಲೆಟ್ ಪ್ರಶ್ನೆಗಳು ಅಥವಾ ಆರೋಪಗಳು ಕಾಂಗ್ರೆಸ್ ಪಕ್ಷದ ಕುರಿತು ಆಗಿದ್ದರೆ, ನಾನು ಪ್ರತಿಕ್ರಿಯಿಸುತ್ತೇನೆ. ಇಲ್ಲಿ ಪೈಲೆಟ್ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ. ಇದಕ್ಕೆ ಸಿಎಂ ಅಶೋಕ್ ಗೆಹ್ಲೋಟ್ ಉತ್ತರಿಸಲಿದ್ದಾರೆ ಎಂದು ರಾಂಧವ ಹೇಳಿದ್ದಾರೆ.
ಇತ್ತೀಚೆಗೆ ಸಚಿನ್ ಪೈಲೆಟ್ ನೀಡಿದ ತಿರುಗೇಟಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ತತ್ತರಿಸಿತ್ತು. ‘2020ರಲ್ಲಿ ವಿಪಕ್ಷ ನಾಯಕಿ ವಸುಂಧರಾ ರಾಜೇ ಮತ್ತು ಇತರೆ ಇಬ್ಬರು ಬಿಜೆಪಿ ನಾಯಕರು ನೆರವು ನೀಡಿ ನನ್ನ ಸರ್ಕಾರ ಉಳಿಸಿದ್ದರು’ ಎಂಬ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರ ಕಡುವೈರಿ ಸಚಿನ್ ಪೈಲಟ್, ‘ಈ ಹೇಳಿಕೆ ಗಮನಿಸಿದರೆ ಪೈಲಟ್‌ರ ನಾಯಕಿ ಸೋನಿಯಾ ಗಾಂಧಿ ಅಲ್ಲ, ಬದಲಾಗಿ ವಸುಂಧರಾ ರಾಜೆ ಅನ್ನಿಸುತ್ತದೆ’ ಎಂದು ಟಾಂಗ್ ನೀಡಿದ್ದರು.
Sachin Pilot Vs Ashok Gehlot 2.0: ಕಾಂಗ್ರೆಸ್ ಸರ್ಕಾರದ ವಿರುದ್ಧ ಉಪ ಮುಖ್ಯಮಂತ್ರಿಯಿಂದಲೇ ಉಪವಾಸ
2020ರಲ್ಲಿ ತಮ್ಮದೇ ಸರ್ಕಾರದ ವಿರುದ್ಧ 20 ಶಾಸಕರೊಂದಿಗೆ ಬಂಡೆದಿದ್ದ ಸಚಿನ್ ಆ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕಳೆದುಕೊಂಡ ಬಳಿಕ ಪದೇ ಪದೇ ಸಿಎಂ ಗೆಹ್ಲೋಟ್ ವಿರುದ್ಧ ಬಹಿರಂಗ ಸಮರ ಸಾರುತ್ತಲೇ ಬಂದಿದ್ದಾರೆ. ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಗೆಹ್ಲೋಟ್ ತನಿಖೆ ನಡೆಸಲು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದ್ದರು.