ಪಾದಯಾತ್ರೆ ಮುಕ್ತಾಯದ ಬಳಿಕ ತಮ್ಮ ಬೆಂಬಲಿಗ 15 ಶಾಸಕರೊಂದಿಗೆ ಸೋಮವಾರ ಇಲ್ಲಿ ರಾಜ್ಯ ಸರ್ಕಾರದ ವಿರುದ್ಧ ರ‍್ಯಾಲಿ ನಡೆಸಿದ ಸಚಿನ್‌ ಪೈಲಟ್‌ ಈ ತಿಂಗಳ ಅಂತ್ಯದೊಳಗೆ ಸರ್ಕಾರ ಬೇಡಿಕೆಗಳನ್ನು ಪೂರೈಸಬೇಕು ಎಂದು ಹೇಳಿದರು.

ಜೈಪುರ (ಮೇ 16, 2023): ಈ ತಿಂಗಳ ಅಂತ್ಯದೊಳಗೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿರುವ ಪಕ್ಷದ ನಾಯಕ ಸಚಿನ್‌ ಪೈಲಟ್‌ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಭ್ರಷ್ಟಾಚಾರದ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಹೋದಲ್ಲಿ ಕರ್ನಾಟಕದಲ್ಲಿನ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಆದ ಗತಿಯೇ ನಮ್ಮ ಸರ್ಕಾರಕ್ಕೂ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ಅಜ್ಮೇರ್‌ನಿಂದ ಜೈಪುರದದವರೆಗಿನ 125 ಕಿ.ಮೀ ಪಾದಯಾತ್ರೆ ಮುಕ್ತಾಯದ ಬಳಿಕ ತಮ್ಮ ಬೆಂಬಲಿಗ 15 ಶಾಸಕರೊಂದಿಗೆ ಸೋಮವಾರ ಇಲ್ಲಿ ರಾಜ್ಯ ಸರ್ಕಾರದ ವಿರುದ್ಧ ರ‍್ಯಾಲಿ ನಡೆಸಿದ ಅವರು, ಈ ತಿಂಗಳ ಅಂತ್ಯದೊಳಗೆ ಸರ್ಕಾರ ಬೇಡಿಕೆಗಳನ್ನು ಪೂರೈಸಬೇಕು ಎಂದು ಹೇಳಿದರು. ಭ್ರಷ್ಟಾಚಾರದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು, ರಾಜಸ್ಥಾನ ಲೋಕ ಸೇವಾ ಆಯೋಗವನ್ನು ವಿಸರ್ಜನೆ ಮಾಡಬೇಕು ಮತ್ತು ಪಶ್ನೆ ಪತ್ರಿಕೆ ಸೋರಿಕೆಯಿಂದ ತೊಂದರೆಗೊಳಗಾದವರಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನು ಸಚಿನ್‌ ಪೈಲಟ್‌ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಇದನ್ನು ಓದಿ: Sachin Pilot Vs Ashok Gehlot 2.0: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಉಪ ಮುಖ್ಯಮಂತ್ರಿಯಿಂದಲೇ ಉಪವಾಸ

ಇಲ್ಲಿಯವರೆಗೆ ನಾವು ಉಪವಾಸ ಸತ್ಯಾಗ್ರಹ ಮತ್ತು ಸರ್ಕಾರದ ವಿರುದ್ಧ ಯಾತ್ರೆ ನಡೆಸಿದ್ದೇನೆ. ಆದರೂ ಸಹ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾನು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇನೆ. ನಾವು ಗ್ರಾಮಗಳ ಜನರೊಂದಿಗೆ ಪಾದಯಾತ್ರೆಯನ್ನು ಮಾಡಿ ಅವರಿಗೆ ನ್ಯಾಯ ದೊರಕಿಸಿಕೊಡಲಾಗುತ್ತದೆ ಎಂದೂ ಹೇಳಿದರು.

ನನ್ನ ಕೊನೆ ಉಸಿರಿರುವವರೆಗೆ ನಾನು ರಾಜಸ್ಥಾನದ ಜನರಿಗಾಗಿ ಕೆಲಸ ಮಾಡುವುದಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳಿದ್ದೆ. ನಾನು ಯಾವುದೇ ಹುದ್ದೆಯಲ್ಲಿರಲಿ ಅಥವಾ ಇಲ್ಲದಿರಲಿ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದೂ ರಾಜಸ್ಥಾನ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿದರು.

ಇದನ್ನೂ ಓದಿ: Ashok Gehlot vs Sachin Pilot: ರಾಜಸ್ಥಾನ ಕಾಂಗ್ರೆಸ್ಸಲ್ಲಿ ಮತ್ತೆ ಮೆಗಾ ಬಿಕ್ಕಟ್ಟು: ಸಚಿನ್‌ ಪೈಲಟ್‌ರಿಂದ ನಾಳೆ ಉಪವಾಸ

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಯುವ ನಾಯಕ ಸಚಿನ್‌ ಪೈಲಟ್‌ ಮತ್ತೆ ಸಮರ ಸಾರಿದ್ದು, ಮಂಗಳವಾರ ತಮ್ಮದೇ ಸರ್ಕಾರದ ವಿರುದ್ಧ ಏಪ್ರಿಲ್ ತಿಂಗಳಲ್ಲಿ 1 ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ರು. ಮಂಗಳವಾರ ಜ್ಯೋತಿಬಾ ಫುಲೆ ಅವರ ಜನ್ಮದಿನ ಇದ್ದು, ಅಂದೇ ಶಹೀದ್‌ ಸ್ಮಾರಕದಲ್ಲಿ ಸಚಿನ್‌ ಪೈಲಟ್‌ ಉಪವಾಸ ಮಾಡಿದ್ರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಮುಂದಾಗಿಲ್ಲ ಎಂಬುದು ಸಚಿನ್‌ ಪೈಲಟ್‌ ಅಳಲಾಗಿದೆ.

ಈ ಬಗ್ಗೆ ವಾಗ್ದಾಳಿ ನಡೆಸಿದ್ದ ಸಚಿನ್‌ ಪೈಲಟ್‌, ‘ವಸುಂಧರಾ ರಾಜೇ ಜೊತೆ ಅಶೋಕ್‌ ಗೆಹ್ಲೋಟ್‌ ‘ಡೀಲ್‌’ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಅವಧಿಯ ಭ್ರಷ್ಟಾಚಾರ ತನಿಖೆಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಈ ಬಗ್ಗೆ ನಾನು ಪತ್ರ ಬರೆದರೂ ಅಶೋಕ್‌ ಗೆಹ್ಲೋಟ್‌ ಪ್ರತಿಕ್ರಿಯಿಸಿಲ್ಲ ಎಂದೂ ಕಳೆದ ತಿಂಗಳು ಆರೋಪಿಸಿದ್ದರು. 

ಇದನ್ನೂ ಓದಿ: ತನ್ನದೇ ಸರ್ಕಾರದ ವಿರುದ್ಧ ಸಚಿನ್ ಪೈಲಟ್‌ 5 ದಿನಗಳ ಜನ ಸಂಘರ್ಷ ಯಾತ್ರೆ