ಕಾಂಗ್ರೆಸ್ ಸರ್ಕಾರವು ಹಾಲು, ಆಲ್ಕೋಹಾಲ್, ವಿದ್ಯುತ್ ದರ ಸೇರಿದಂತೆ ಎಲ್ಲ ಬೆಲೆಗಳನ್ನು ಹೆಚ್ಚಿಸಿದೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಬಿಜೆಪಿ ರಾಜ್ಯಾದ್ಯಂತ ಬೆಲೆ ಏರಿಕೆ ವಿರುದ್ಧ ಹೋರಾಟ ಆರಂಭಿಸಿದೆ. ಸರ್ಕಾರ ದಿವಾಳಿಯಾಗಿದ್ದು, ನೌಕರರಿಗೆ ಸಂಬಳ ನೀಡಲು ಹಣವಿಲ್ಲದ ಪರಿಸ್ಥಿತಿ ಬರಲಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಜಾತಿ ಗಣತಿ ವರದಿಯನ್ನು ಸರ್ಕಾರ ಮುಚ್ಚಿಟ್ಟಿದೆ ಎಂದು ಅವರು ಹೇಳಿದ್ದಾರೆ.

ಹಾವೇರಿ (ಏ.10): ನಮ್ಮ ರಾಜ್ಯದಲ್ಲಿ ಹಾಲು, ಅಲ್ಕೋಹಾಲು, ಎದ್ಯುತ್ ದರ ಹೆಚ್ಚಳ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರದಿಂದ ತೊಲಗುತ್ತದೆಯೋ ಎಂಬುದು ಜನರ ಭಾವನೆಯಾಗಿದೆ. ಅವರ ಭಾವನೆಯಂತೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾದ್ಯಂತ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊರಾಟ ಆರಂಭಿಸಿದೆ. ಪ್ರತಿ ಜಿಲ್ಲೆಯಲ್ಲಿ ಜನಾಕೋಶ ಯಾತ್ರೆ ಆರಂಭಿಸಿದೆ. ಹಾವೇರಿ ಜಿಲ್ಲೆಯಲ್ಲಿ ಅಹೋರಾತ್ರಿ ಹೋರಾಟ ಆರಂಭ ಮಾಡಿದ್ದೇವೆ. ಕರ್ನಾಟಕ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಸಿದೆ. ಹಾಲು, ಆಲೊಹಾಲು, ಎಲೆಕ್ಷಿಸಿಟಿ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳ ಮಾಡಿದೆ. ಸರ್ಕಾರ ದಿವಾಳಿಯಾಗಿದೆ. ಬರುವಂತಹ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು. ಭಷಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್‌ನ ಶಾಸಕರೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಅಂತ ಹೇಳಿದ್ದಾರೆ.

ರಾಜ್ಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಎಲೆಕ್ಟ್ರಿಕ್ ಕಾಂಟಾಕ್ಟರ್, ಅಬಕಾರಿ ಗುತ್ತಿಗೆದಾರರು ಎಲ್ಲರೂ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸರ್ಕಾರದ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ರಾಜ್ಯದಲ್ಲಿ ಬಡವರ ಬದುಕು ಭಾರವಾಗಿದೆ. ಗ್ಯಾರೆಂಟಿಯನ್ನೂ ಸರಿಯಾಗಿ ನೀಡದೇ ದೊಡ್ಡ ಪ್ರಮಾಣದ ತೆರಿಗೆಯ ಭಾರವನ್ನು ಜನರ ಮೇಲೆ ಹಾಕಿದ್ದಾರೆ. ಹಾಲಿನ ಸಬ್ಸಿಡಿ ರೈತರಿಗೆ ಕೊಡುವ ಬದಲು ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಅದರ ವಿರುದ್ಧ ಜನರ ಧ್ವನಿಯಾಗಿ ಹೋರಾಟ ನಡೆಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ 'ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ' ಅಭಿಯಾನ

ಮನೆಗೆ ವಿದ್ಯುತ್ ಪೂರೈಸಲು ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಬಹಳ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಎಲೆಕ್ಟ್ರಿಕ್ ಗುತ್ತಿಗೆದಾರರು ದಾಖಲೆ ಸಮೇತ ಹೇಳಿದ್ದಾರೆ. ನಮ್ಮದೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕೇವಲ 700 ರೂ. ಇರುವ ಸ್ಮಾರ್ಟ್ ಮೀಟರ್‌ಗಳಿಗೆ ನಮ್ಮ ರಾಜ್ಯದಲ್ಲಿ ಮಾತ್ರ 5,000 ದಿಂದ 6,000 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ, ಎಲ್ಲವನ್ನೂ ಜನರಿಂದ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರದಿಂದ ತೊಲಗುತ್ತದೆಯೋ ಎಂಬ ಭಾವನೆ ಜನರಲ್ಲಿ ಮೂಡಿದೆ. ಅವರ ಭಾವನೆಯಂತೆ ನಾವು (ಬಿಜೆಪಿ) ಬೆಲೆ ಏರಿಕೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಜಾತಿ ಗಣತಿ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ರಾಜ್ಯ ಸರ್ಕಾರ ಏನು ಮಾಡತ್ತದೆ ಮಾಡಲಿ. ಜಾತಿ ಗಣತಿ ವರದಿಯನ್ನು ಕೊಟ್ಟು ಒಂದು ವರ್ಷವಾಯಿತು. ಸಿಎಂ ಸಿದ್ದರಾಮಯ್ಯ ಅವರು ಅದನ್ನು ಯಾಕೆ ಮುಚ್ಚಿಟ್ಟುಕೊಂಡಿದ್ದಾರೊ ಗೊತ್ತಿಲ್ಲ. ಅವರು ಬಿಡುಗಡೆ ಮಾಡಲು ಏನು ಸಮಸ್ಯೆಯಾಗಿದೆ. ಅವರು ಬಿಡುಗಡೆ ಮಾಡಲಿ, ಆ ನಂತರ ಮಾತನಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಗವರ್ನರ್‌ಗೆ ಮತ್ತೊಂದು ದೂರು ಸಲ್ಲಿಕೆ

ಹಾವೇರಿಯ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಪ್ರತಿಭಟನಾ ಸಭೆಯಲ್ಲಿ ಬಸವರಾಜ ಬೊಮ್ಮಾಯಿರವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಸಚಿವ ಬಿ.ಸಿ ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನ, ವೀರುಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡ ಭರತ ಬೊಮ್ಮಾಯಿ, ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಪೂರ್ವದಲ್ಲಿ ಹುತಾತ್ಮ ಶ್ರೀ ಮೈಲಾರ ಮಹಾದೇವಪ್ಪ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.