ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ಯಾವಾಗ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟಮಾಹಿತಿ ಹೊರಬಿದ್ದಿಲ್ಲ. ಶನಿವಾರ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆಯಾದರೂ ಖಚಿತವಾಗಿಲ್ಲ. ಆದರೆ, ಅದಕ್ಕೆ ಪೂರಕವಾಗಿ ಶುಕ್ರವಾರದಿಂದ ಭಾನುವಾರದವರೆಗೆ ಪೂರ್ವಭಾವಿ ಸಭೆಗಳು ಸತತವಾಗಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರು(ಏ.07): ಪ್ರಸಕ್ತ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಇದೀಗ ಹೈಕಮಾಂಡ್ ಅಂಗಳ ತಲುಪಿದ್ದು, ಆಕಾಂಕ್ಷಿಗಳ ಎದೆಬಡಿತ ತೀವ್ರಗೊಂಡಿದೆ. ಆದರೆ, ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ಯಾವಾಗ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟಮಾಹಿತಿ ಹೊರಬಿದ್ದಿಲ್ಲ. ಶನಿವಾರ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆಯಾದರೂ ಖಚಿತವಾಗಿಲ್ಲ. ಆದರೆ, ಅದಕ್ಕೆ ಪೂರಕವಾಗಿ ಶುಕ್ರವಾರದಿಂದ ಭಾನುವಾರದವರೆಗೆ ಪೂರ್ವಭಾವಿ ಸಭೆಗಳು ಸತತವಾಗಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಾಹ್ನವೇ ದೆಹಲಿಯಿಂದ ನಿರ್ಗಮಿಸಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಚರಿಸಲಿದ್ದಾರೆ. ಅವರು ವಾಪಸ್ ದೆಹಲಿ ತಲುಪುವುದು ಭಾನುವಾರ ಸಂಜೆಯೇ. ಹೀಗಾಗಿ, ಮೋದಿ ಅವರ ಸಮಯದ ಲಭ್ಯತೆ ನೋಡಿಕೊಂಡು ಸಂಸದೀಯ ಮಂಡಳಿ ಸಭೆ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ 42 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್: ಬಂಡಾಯ ಶುರು..!
ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಂದರೆ, ಸಂಜೆ ಹೊತ್ತಿಗೆ ದೆಹಲಿಯಲ್ಲಿ ಇರುತ್ತಾರೆ. ಶುಕ್ರವಾರ ರಾತ್ರಿಯೇ ಸಭೆ ನಡೆದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಸಿದ್ಧವಾದರೂ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಹೋದ ನಂತರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಅಂದರೆ, ಭಾನುವಾರ ರಾತ್ರಿ ಅಥವಾ ಸೋಮವಾರ ಪಟ್ಟಿಹೊರಬೀಳಬಹುದು ಎಂಬ ಮಾತು ಕೇಳಿಬರುತ್ತಿದೆ.
ಕಳೆದ ಎರಡು ದಿನಗಳ ಕಾಲ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ರಾಜ್ಯ ಕೋರ್ ಕಮಿಟಿ ಹಾಗೂ ಚುನಾವಣಾ ಸಮಿತಿಗಳ ಸಭೆ ಸುದೀರ್ಘ ಕಾಲ ನಡೆದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಮೂವರು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಪಟ್ಟಿಸಿದ್ಧಪಡಿಸಿದೆ. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಈ ಪಟ್ಟಿಯನ್ನು ದೆಹಲಿಗೆ ಕೊಂಡೊಯ್ದಿದ್ದಾರೆ.
ಈ ಪಟ್ಟಿಯನ್ನು ಇಟ್ಟುಕೊಂಡು ಸಂಸದೀಯ ಮಂಡಳಿ ಸಭೆಗೂ ಮೊದಲು ಹಲವು ಬಾರಿ ಪೂರ್ವಭಾವಿ ಸಭೆಗಳು ನಡೆಯುವ ಸಾಧ್ಯತೆಯಿದೆ. ಶುಕ್ರವಾರ ರಾಜ್ಯ ನಾಯಕರು ದೆಹಲಿ ತಲುಪಿದ ಬಳಿಕ ಒಂದು ಸುತ್ತು ಪೂರ್ವಭಾವಿ ಸಭೆಗಳು ನಡೆದು ಗೊಂದಲವಿರುವ ಕ್ಷೇತ್ರಗಳ ಬಗ್ಗೆ ಮತ್ತೊಂದು ಹಂತದ ಚರ್ಚೆ ನಡೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರಿಗೆ ಸಿಂಹಪಾಲು..!
ಈಗಾಗಲೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸ್ಥಳೀಯ ಮುಖಂಡರ ಹಾಗೂ ಜಿಲ್ಲಾ ಕೋರ್ ಕಮಿಟಿಗಳ ಸದಸ್ಯರ ಅಭಿಪ್ರಾಯ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಆ ಮಾಹಿತಿಯನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯ ಮಟ್ಟದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಇದೀಗ ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಆಗಿರುವ ಚರ್ಚೆಯ ಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಸಮಾಲೋಚನೆ ನಡೆಯುವ ಸಂಭವವಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
