‘ಗ್ಯಾರಂಟಿ’ಯಂತ ಮೋಸಕ್ಕೆ ಅವಕಾಶ ನೀಡದೆ ಮೋದಿ ಗೆಲ್ಲಿಸಿ: ಡಾ.ಕೆ.ಸುಧಾಕರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಏ.10): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಗಳಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾತನಾಡಿ,ಲೋಕಸಭಾ ಚುನಾವಣೆಯು ದೇಶದ ಪ್ರಧಾನಮಂತ್ರಿಯನ್ನು ಆರಿಸುವ ಚುನಾವಣೆ. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣ್ಣಿನ ಮಗ ಎಚ್.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ ಎಂದರು.
ಬಡಜನರ ಕಣ್ಮಣಿ ಎಚ್ಡಿಕೆ: ಬಡಜನರ ಕಣ್ಮಣಿ ಎಂದು ಎಚ್.ಡಿ.ಕುಮಾರಸ್ವಾಮಿ ಹೆಸರಾಗಿದ್ದಾರೆ. ಅವರ ಕಾಲದಲ್ಲಿ ಹಾಗೂ ಬಿಜೆಪಿ ಸರ್ಕಾರದ ಕಾಲದಲ್ಲಿ ನೀಡಿದ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡಿದೆ. ವಿದ್ಯುತ್ ಉಚಿತ ನೀಡುತ್ತೇವೆಂದು ವಿದ್ಯುತ್ ಇಲ್ಲದಂತೆ ಮಾಡಿದ್ದಾರೆ. ರೈತರು ಒಂದು ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಳ್ಳಬೇಕೆಂದರೆ 4ರಿಂದ 5 ಲಕ್ಷ ರೂ. ನೀಡಬೇಕಿದೆ. ಬಿಜೆಪಿ ಕಾಲದಲ್ಲಿ ಕೇವಲ 25 ಸಾವಿರ ರೂ.ನಲ್ಲಿ ಈ ಕೆಲಸ ನಡೆಯುತ್ತಿತ್ತು. ದೇಶದಲ್ಲಿ 10 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಘೋರ ಅನ್ಯಾಯ: ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ನಿಮ್ಮ ಸಂಸದರು 400 ರಲ್ಲಿ ಇರಬೇಕಾ, ವಿರೋಧ ಪಕ್ಷದಲ್ಲಿ ಕೂರುವ 40 ರಲ್ಲಿ ಇರಬೇಕಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಆರೋಗ್ಯ ಸಚಿವನಾಗಿ, ಕೋವಿಡ್ ಹೋರಾಟದ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ನೂರಕ್ಕೆ ನೂರು ತರುತ್ತೇನೆ. ದೊಡ್ಡಬಳ್ಳಾಪುರಕ್ಕೆ ಈಗಾಗಲೇ ಜಿಲ್ಲಾಸ್ಪತ್ರೆ ನೀಡಲಾಗಿದೆ. ಜಕ್ಕಲಮಡಗು ಜಲಾಶಯದಿಂದ ದೊಡ್ಡಬಳ್ಳಾಪುರದ ಜನರಿಗೆ ಕುಡಿಯುವ ನೀರು ನೀಡಲಾಗುತ್ತಿದೆ ಎಂದು ವಿವರಿಸಿದರು.
ಭಯೋತ್ಪಾದಕರಿಗೆ ಮೃದು ಧೋರಣೆ: ಹೊಸಕೋಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್, ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರಿಗೆ ಮೃದು ಧೋರಣೆ ತೋರಿಸುತ್ತದೆ. ಈ ಸರ್ಕಾರ ಬಂದ ಬಳಿಕ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆದರೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹೋಗಿ ದಾಳಿ ಮಾಡುವ ಮಟ್ಟಿಗೆ ಎದೆಗಾರಿಕೆ ತೋರುತ್ತದೆ ಎಂದರು. ಕಾಂಗ್ರೆಸ್ ರಾಜ್ಯಕ್ಕೆ ಕಾಲಿಟ್ಟರೆ ಬರಗಾಲ ಬರುತ್ತದೆ, ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದಿಂದ ಬೆಳೆ ನಷ್ಟವಾದಾಗ, 48 ಗಂಟೆಯಲ್ಲಿ ಅಂದಾಜು ತಿಳಿದು ಒಂದೇ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಎರಡು ಪಟ್ಟು ಅಧಿಕ ಪರಿಹಾರ ನೀಡಲಾಗಿತ್ತು.
ಗಂಗಾವತಿಯಲ್ಲಿನ ಬಿಕ್ಕಟ್ಟು ಕಾಂಗ್ರೆಸ್ಸಿಗೆ ಲಾಭ: ಸಚಿವ ಶಿವರಾಜ ತಂಗಡಗಿ
ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಗ್ಯಾರಂಟಿಗೆ ಬಳಸಿದೆ. ಆದರೆ ಪ್ರಧಾನಿ ಮೋದಿ ಮಹಿಳೆಯರು, ಯುವಜನರು, ಮಕ್ಕಳಿಗೆ ಉತ್ತಮ ಯೋಜನೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಗ್ಯಾರಂಟಿಗೆ ಮತ ನೀಡಬೇಕೆಂದು ಜನರು ತೀರ್ಮಾನಿಸಿದ್ದಾರೆ ಎಂದರು. ಸಮಾವೇಶದಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ಮಾಜಿ ಸಚಿವ ಎಂಟಿಬಿ ನಾಗರಾಜ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಜೆ.ಕೆ.ಕೃಷ್ಣಾ ರೆಡ್ಡಿ, ಬಿ.ಮುನೇಗೌಡ, ಎಂ.ಎಲ್.ಸಿ.ಶರವಣ, ಕಾರ್ಯಕರ್ತರು ಇದ್ದರು.