ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಘೋರ ಅನ್ಯಾಯ: ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ಮತ ಹಾಕಲು ಜನರು ತೀರ್ಮಾನ ಮಾಡಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಹಾಸನ (ಏ.10): ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ಮತ ಹಾಕಲು ಜನರು ತೀರ್ಮಾನ ಮಾಡಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ, ಶ್ರವಣಬೆಳಗೊಳದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಚುನಾವಣೆ ಇನ್ನೂ ಹದಿನೈದು ದಿನ ಇದೆ. ಚುನಾವಣೆ ಪ್ರತಿ ಐದು ವರ್ಷಕ್ಕೆ ಒಮ್ಮೆ ಬರುತ್ತದೆ. ಎಲ್ಲಾ ಚುನಾವಣೆಗೂ ಪ್ರಾಮುಖ್ಯತೆ ಸಿಗಲ್ಲ. ಈ ಚುನಾವಣೆ ಏನಾಗಬಹುದು ಎಂದು ದೇಶ ನೋಡುತ್ತಿದೆ. ಮೋದಿಯವರ ಹತ್ತು ವರ್ಷದ ಆಡಳಿತದ ಕನಸು ಮುಗಿಯಿತು. ಕೇಂದ್ರದಲ್ಲಿ ಆಡಳಿತ ಮಾಡಿದ ಬಿಜೆಪಿಯಿಂದ ಜನರಿಗೆ ಯಾವುದೇ ಸಹಕಾರ ಆಗಲಿಲ್ಲ’ ಎಂದು ಟೀಕಿಸಿದರು.
‘ಪ್ರತಿ ವಸ್ತುವಿನ ಮೇಲೆ ಟ್ಯಾಕ್ಸ್ ಹಾಕಿ ಕೆಟ್ಟ ಸ್ಥಿತಿಗೆ ತಂದ ಸರ್ಕಾರ ಇದ್ದರೆ ಅದು ಮೋದಿ ಸರ್ಕಾರ. ನಮ್ಮ ರಾಜ್ಯದ ಟ್ಯಾಕ್ಸ್ ತೆಗೆದುಕೊಂಡು ನಮಗೆ ಕೊಡ್ತಿಲ್ಲ. ಬಿಜೆಪಿ-ಜೆಡಿಎಸ್‌ಗೆ ಮತ ಕೇಳಲು ಯಾವುದೇ ನೈತಿಕತೆಯಿಲ್ಲ. ನಿಮ್ಮ ತೀರ್ಮಾನ ಅವರಿಗೆ ಎಚ್ಚರಿಕೆ ಗಂಟೆಯಾಗಬೇಕು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ಮತ ಹಾಕಲು ತೀರ್ಮಾನ ಮಾಡಬೇಕು’ ಎಂದು ಹೇಳಿದರು.
ಗಂಗಾವತಿಯಲ್ಲಿನ ಬಿಕ್ಕಟ್ಟು ಕಾಂಗ್ರೆಸ್ಸಿಗೆ ಲಾಭ: ಸಚಿವ ಶಿವರಾಜ ತಂಗಡಗಿ
‘ಶಿವಲಿಂಗೇಗೌಡರು ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದರೆ ಅರಸೀಕೆರೆ ಬಿಟ್ಟು ಬರುತ್ತಿರಲಿಲ್ಲ. ನಾವೂ ಪ್ರತಿ ತಿಂಗಳು ಎಲ್ಲಾ ಸೌಲಭ್ಯ ಕಲ್ಪಿಸುತ್ತೇವೆ. ಶ್ರೇಯಸ್ ಪಟೇಲ್‌ಗೆ ನೀಡುವ ಓಟಿನಿಂದ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಬರುತ್ತದೆ. ಲೋಕಸಭಾ ಚುನಾವಣೆ ರಂಗೇರುತ್ತಿದೆ. ಎಲ್ಲಾ ಜಿಲ್ಲೆಯ ಫಲಿತಾಂಶಕ್ಕೂ ಮುನ್ನ ಹಾಸನ ಜಿಲ್ಲೆಯ ಫಲಿತಾಂಶ ಮೊದಲು ಬರುತ್ತದೆ. ಜಿಲ್ಲೆಯ ಎಲ್ಲಾ ಜನರು ಶ್ರೇಯಸ್ ಪಟೇಲ್‌ಗೆ ಆಶೀರ್ವಾದ ಮಾಡ್ತಾರೆ. ಮಂಡ್ಯ, ಹಾಸನ ಎರಡನ್ನು ಗೆಲ್ತೀವಿ. ಇಲ್ಲಿ ಹೇಗೆ ಶ್ರೇಯಸ್ ಪಟೇಲ್ ಗೆಲ್ಲಿಸಬೇಕು ಎಂದು ಜನ ಅಂದುಕೊಂಡಿದ್ದಾರೋ, ಮಂಡ್ಯದಲ್ಲೂ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಬೇಕು ಅಂದುಕೊಂಡಿದ್ದಾರೆ’ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಚಿವರಾಗಿ ಏನು ಮಾಡಲು ಆಗುತ್ತೆ. ನಾವಿಲ್ಲವಾ ರಾಜ್ಯದಲ್ಲಿ, ಅವರು ಮಂತ್ರಿಯಾದರೆ ನಮ್ಮ ಜೊತೆ ಇರಬೇಕಾಗುತ್ತದೆ. ಪ್ರಹ್ಲಾದ್ ಜೋಶಿ ಅವರಿಗಿಂತ ಪ್ರಭಾವಿ ಮಂತ್ರಿ ಆಗಲು ಆಗುತ್ತಾ. ಅವರು ರಾಜ್ಯದಲ್ಲಿ ಏನು ಮಾಡಿದ್ದಾರೆ. ಶೋಭ ಕರಂದ್ಲಾಜೆ, ಸದಾನಂದಗೌಡ್ರು, ಖೂಬಾ ಅವರು ಮಂತ್ರಿ ಇದ್ದರೂ ಏನ್ ಮಾಡ್ತಾವ್ರೆ. ಅವರಂಗೆ ಇವರು ಒಬ್ಬರು ಮಂತ್ರಿ ಆಗ್ತಾರೆ. ಯಾವುದೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಬೈಪಾಸ್ ಮಾಡಲು ಆಗಲ್ಲ. ಎಲ್ಲವನ್ನೂ ರಾಜ್ಯ ಸರ್ಕಾರದ ಜೊತೆನೇ ಮಾಡಬೇಕಾಗುತ್ತದೆ. ನಾವೇ ಅಭಿವೃದ್ಧಿ ಮಾಡಲು ತಯಾರಾಗಿದ್ದೇವೆ. ಕೇಂದ್ರ ಸರ್ಕಾರದಿಂದ ಏನು ತರಬೇಕೋ ತರ್ತಿವಿ. ಅವರು ಮಂತ್ರಿಯಾಗುವುದು ವಿಶೇಷ ಏನು ಇಲ್ಲ. ಬಹಳಷ್ಟು ಜನ ಕೇಂದ್ರದಲ್ಲಿ ಮಂತ್ರಿ ಆಗಿ ಹೋಗಿದ್ದಾರೆ’ ಎಂದು ಹೇಳಿದರು.
ಪ್ರೀತಂಗೌಡರು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡದ ಕುರಿತು ಪ್ರತಿಕ್ರಿಯಿಸಿ, ‘ಅವರ ಪಕ್ಷದ ಇಂಟರ್‌ನಲ್ ವಿಚಾರ ಅದರ ಬಗ್ಗೆ ಮಾತನಾಡಲು ಹೋಗಲ್ಲ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಅಲೆಯನ್ಸ್ ಆಗಿತ್ತು. ಜನ ಒಪ್ಪಿದ್ರಾ, ಈ ಬಾರಿ ಜೆಡಿಎಸ್-ಬಿಜೆಪಿ ಅಲೆಯನ್ಸ್ ಜನ ಒಪ್ಪಲ್ಲ. ಇವರು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಟ್ಟರಾ? ಯಡಿಯೂರಪ್ಪ ವಿರುದ್ಧ ಎಷ್ಟು ಕೆಟ್ಟದಾಗಿ ನಡೆದುಕೊಂಡ್ರು. 2007ರಲ್ಲಿ ಯಡಿಯೂರಪ್ಪ ಅವರಿಂದ ಇವರು ಮುಖ್ಯಮಂತ್ರಿಯಾದರು?. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಅವರ ಅಲೆಯನ್ಸ್ ರಾಜ್ಯ ಮಟ್ಟದಲ್ಲೇ ಇರುತ್ತೆ ಹೊರತು ಜನರ ಮಟ್ಟಕ್ಕೆ ತಲುಪಲ್ಲ’ ಎಂದು ಹೇಳಿದರು.
Lok Sabha Election 2024: ಜಾತಿ ಆಧಾರದ ಮೇಲೆ ಚುನಾವಣೆ ನಡೆಯಲ್ಲ: ಪ್ರಲ್ಹಾದ್ ಜೋಶಿ
ಬಿಜೆಪಿ-ಜೆಡಿಎಸ್ ಅಲೆಯನ್ಸ್ ಮುಂದುವರಿಕೆ ಕುರಿತು ಪ್ರತಿಕ್ರಿಯಿಸಿ, ‘ಈ ಚುನಾವಣೆ ಆದ ಮೇಲೆ ಗೊತ್ತಾಗುತ್ತೆ. ದೇಶದಲ್ಲಿ ಪ್ರಧಾನ ಮಂತ್ರಿ ಮಾಡಿದವರ ಜೊತೆ ವಿಶ್ವಾಸ ಉಳಿಸಿಕೊಳ್ಳಲು ಆಗಲಿಲ್ಲ. 37 ಸೀಟ್ ಗೆದ್ದವರ ಮನೆ ಹತ್ತಿರ 80 ಸೀಟ್ ಗೆದ್ದವರು ಹೋಗಿ ಮುಖ್ಯಮಂತ್ರಿ ಮಾಡಿದವರ ಜೊತೆ ವಿಶ್ವಾಸ ಉಳಿಸಿಕೊಳ್ಳಲು ಆಗಲಿಲ್ಲ. ಇನ್ನೂ ಇವರ ಜೊತೆ ವಿಶ್ವಾಸ ಉಳಿಯುತ್ತಾ?. ಇದು ಆಗದೆ ಇರುವ ಕೆಲಸ. ಇವರಿಗೂ ಅವಶ್ಯಕತೆ ಇತ್ತು, ಅವರಿಗೂ ಅವಶ್ಯಕತೆ ಇತ್ತು ಅಲೆಯನ್ಸ್ ಮಾಡಿಕೊಂಡಿದ್ದಾರೆ’ ಎಂದು ಕುಟುಕಿದರು.