ಚಿಕ್ಕಬಳ್ಳಾಪುರ ಜೆಡಿಎಸ್‌ನ ಭದ್ರಕೋಟೆ: ನಿಖಿಲ್ ಕುಮಾರಸ್ವಾಮಿ
ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಹಾಗೂ ಇಡೀ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ ಆಗಿದ್ದು 2023 ರ ಚುನಾವಣೆಯಲ್ಲಿ ಅದು ಸಾಭೀತು ಆಗಲಿದೆಯೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರ (ಮಾ.17): ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಹಾಗೂ ಇಡೀ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ ಆಗಿದ್ದು 2023 ರ ಚುನಾವಣೆಯಲ್ಲಿ ಅದು ಸಾಭೀತು ಆಗಲಿದೆಯೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಂಗರೇಖನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪಕ್ಷದ ಯುವ ಮುಖಂಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಹಣ ಹಾಗೂ ಸ್ವಾಭಿಮಾನಕ್ಕೆ ಹೋಲಿಸಿದರು.
ಬಚ್ಚೇಗೌಡರನ್ನು ಬೆಂಬಲಿಸಿ: ರಾಜಕಾರಣ ಅನ್ನುವುದು ನಿಂತ ನೀರಲ್ಲ. ಯಾರನ್ನು ಬೇಕಾದರೂ ಮೇಲೆ ಕೂರಿಸುತ್ತಾರೆ. ಯಾರನ್ನ ಬೇಕಾದರೂ ಕೆಳಗೆ ಇಳಿಸುವ ಶಕ್ತಿ ಮತದಾರರಲ್ಲಿ ಇದೆ. ಮತದಾನ ಎನ್ನುವುದು ಜನರಿಗೆ ಸಿಕ್ಕಿರುವ ಪವಿತ್ರವಾದ ಹಕ್ಕು. ಎಲ್ಲಾ ಪಕ್ಷಗಳ ಭವಿಷ್ಯ ಮತದಾರರ ಕೈಯಲ್ಲಿ ಇದೆ. ಇಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರು ಅತ್ಯಂತ ಪ್ರಾಮಾಣಿಕ ವ್ಯಕ್ತಿ ಜೊತೆಗೆ ಮುಗ್ದರು. ಈ ಹಿಂದೆ 2008 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಾಗ ಬಚ್ಚೇಗೌಡರಿಗೆ ನೂರಾರು ಕೋಟಿ ಹಣದ ಆಮಿಷ ನೀಡಿದರೂ. ಕೂಡ ಅವರು ಜೆಡಿಎಸ್ ಬಿಟ್ಟು ಹೋಗಲಿಲ್ಲ. ಕ್ಷೇತ್ರದಲ್ಲಿ ಸದಾ ಜನ ಸಾಮಾನ್ಯರ ಕೈಗೆ ಸಿಗುವ ವ್ಯಕ್ತಿಯನ್ನು ಕ್ಷೇತ್ರದ ಜನತೆ ಈ ಬಾರಿಯ ಚುನಾವಣೆಯಲ್ಲಿ ಉಳಿಸಿಕೊಳ್ಳುವ ಸಂಪೂರ್ಣ ವಿಶ್ವಾಸ ನಂಬಿಕೆ ನನಗಿದೆ ಎಂದರು.
ಬೆಲೆ ಏರಿಸಿ ಬದುಕು ಮೂರಾಬಟ್ಟೆ ಮಾಡುತ್ತಿರುವ ಬಿಜೆಪಿ: ಯತೀಂದ್ರ ಸಿದ್ದರಾಮಯ್ಯ
ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ಹೊಳೆ ಹರಿಸುತ್ತಿದ್ದಾರೆಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಒಂದು ಸ್ವಾಭಿಮಾನದ ಪ್ರಶ್ನೆ. ಕಳೆದ 48 ದಿನಗಳಿಂದ ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರು ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡಿ ಅರ್ಶೀವಾದ ಪಡೆಯುತ್ತಿದ್ದಾರೆ. ಇಂತಹ ಸರಳ ಸಜ್ಜನಿಕೆಯ, ಕಳಂಕ ರಹಿತ ವ್ಯಕ್ತಿ ಬಚ್ಚೇಗೌಡರಿಗೆ ಕ್ಷೇತ್ರದ ಜನ ಅರ್ಶೀವಾದ ಮಾಡುತ್ತಾರೆಂಬ ಸಂಪೂರ್ಣ ವಿಶ್ವಾಸ ನನಗಿದೆಯೆಂದರು.
ಇದೇ ವೇಳೆ ನಿಖಿಲ್ ಕುಮಾರಸ್ವಾಮಿ, ಅಂಗರೇಖನಹಳ್ಳಿಯ ಯುವ ಮುಖಂಡರಾದ ರವಿಕುಮಾರ್ ಹಾಗೂ ಮಂಚನಬಲೆ ಮಧುರನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮೊದಲನಿಂದಲೂ ರವಿಕುಮಾರ್ ಹಾಗೂ ಮಧು ಪಕ್ಷವನ್ನು ಈ ಭಾಗದಲ್ಲಿ ಕಟ್ಟಿಬೆಳೆಸಿದ ಯುವ ಪ್ರಭಾವಿ ಮುಖಂಡರು. ಆದ್ದರಿಂದ ಅವರ ಮನೆಗೆ ಹೋಗಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆಂದು ನಿಖಿಲ್ ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಮುಖಂಡರಾದ ಮುಕ್ತ ಮುನಿಯಪ್ಪ, ಪ್ರಭಾ ನಾರಾಯಣಗೌಡ, ಅಣ್ಣಯಮ್ಮ, ವೀಣಾರಾಮು, ವೆಂಕಟೇಶ್, ಕೆ.ಆರ್,ರೆಡ್ಡಿ, ಸಾಧಿಕ್, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್‌ನದ್ದು ಪುಕ್ಕಟ್ಟೆ ಕಾರ್ಡ್: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಲೇವಡಿ
ನಿಖಿಲ್‌ಗೆ ಅದ್ಧೂರಿ ಸ್ವಾಗತ: ಇದೇ ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರನ್ನು ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ನಡೆಸಿ ಭವ್ಯ ಸ್ವಾಗತ ಕೋರಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜೆಡಿಎಸ್ ಯುವ ಮುಖಂಡರು, ಕಾರ್ಯಕರ್ತರು ಅಂಗರೇಖನಹಳ್ಳಿಯಲ್ಲಿ ಸ್ವಾಗತ ಕೋರಿದರು. ನಂತರ ಬಚ್ಚೇಗೌಡ ಪರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.