Asianet Suvarna News Asianet Suvarna News

ಗ್ಯಾರಂಟಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ಸಿಂದ ಮೋಸ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ. 

Cheating by Congress in the name of Guarantee Schemes Says Pralhad Joshi gvd
Author
First Published Jun 4, 2023, 4:45 AM IST

ಹುಬ್ಬಳ್ಳಿ (ಜೂ.04): ರಾಜ್ಯ ಕಾಂಗ್ರೆಸ್‌ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ಪೂರ್ವದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತುಗಳಿಲ್ಲದೇ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳಿಕೆ ನೀಡಿತ್ತು. 

ಹಾಗೆಯೇ ನನಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ ಎಂದವರು ಈಗ ಏಕೆ ಈ ರೀತಿಯ ಹಲವು ಷರತ್ತುಗಳೊಂದಿಗೆ ಜಾರಿಗೊಳಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಗೃಹಜ್ಯೋತಿ ಹೆಸರಲ್ಲಿ ಮನೆಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಈಗ ಇದಕ್ಕೂ ಹಲವು ನಿಬಂಧನೆಗಳನ್ನು ಹಾಕಲಾಗಿದೆ. ಕಡ್ಡಾಯವಾಗಿ ಎಲ್ಲರಿಗೂ ಯಾವುದೇ ಷರತ್ತಿಲ್ಲದೇ 200 ವಿದ್ಯುತ್‌ ಉಚಿತ ನೀಡಬೇಕು ಎಂದು ಆಗ್ರಹಿಸಿದರು.

ಪ್ರವಾಹ ಅವಘಡ ತಡೆಗಟ್ಟಲು ಎಚ್ಚೆ​ತ್ತು​ಕೊ​ಳ್ಳಿ: ಆರಗ ಜ್ಞಾನೇಂದ್ರ

ಅಕ್ಕಿಯ ಗೊಂದಲ ಸರಿಪಡಿಸಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ಘೋಷಣೆ ಮಾಡಿತ್ತು. ಈಗಾಗಲೇ ಕೇಂದ್ರ ಸರ್ಕಾರದಿಂದ ಜನರಿಗೆ 5 ಕೆ.ಜಿ. ಅಕ್ಕಿ ಉಚಿತ ಪೂರೈಕೆ ಮಾಡಲಾಗುತ್ತಿದೆ. ಗ್ಯಾರಂಟಿಯಲ್ಲಿ ಘೋಷಿಸಿದಂತೆ ಕೇಂದ್ರದ 5 ಕೆ.ಜಿ. ಅಕ್ಕಿ ಹೊರತುಪಡಿಸಿ ರಾಜ್ಯ ಸರ್ಕಾರದಿಂದ 10 ಕೆ.ಜಿ. ಅಕ್ಕಿ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳುವುದೋ ಅಥವಾ ಕೇಂದ್ರದ 5 ಕೆ.ಜಿ., ರಾಜ್ಯದ 5 ಕೆ.ಜಿ. ಅಕ್ಕಿ ಸೇರಿಸಿ ಪೂರೈಕೆ ಮಾಡುವುದೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.

ಈ ಹಿಂದೆ ನಿರುದ್ಯೋಗಿಗಳಿಲ್ಲವೇ?: ಯುವನಿಧಿ ಯೋಜನೆಯಡಿ ರಾಜ್ಯದಲ್ಲಿರುವ ಎಲ್ಲ ನಿರುದ್ಯೋಗಿ ಪದವೀಧರರಿಗೆ .3000 ಹಾಗೂ ಡಿಪ್ಲೋಮಾ ಪದವೀಧರರಿಗೆ .1500 ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿತ್ತು. ಆದರೆ, ಈಗ ಅಧಿಕಾರಕ್ಕೆ ಬಂದ ನಂತರ ಕೇವಲ 2022-23ನೇ ಸಾಲಿನಲ್ಲಿ ಕಲಿತು ನಿರುದ್ಯೋಗಿಗಳಾದವರಿಗೆ ಮಾತ್ರ ಕೇವಲ 24 ತಿಂಗಳುಗಳ ಕಾಲ ಯುವನಿಧಿ ನೀಡುವುದಾಗಿ ತಿಳಿಸಿದ್ದಾರೆ. ಏಕೆ 2022ರ ಪೂರ್ವದಲ್ಲಿ ಯಾವುದೇ ಪದವೀಧರರು ನಿರುದ್ಯೋಗಿಗಳಿಲ್ಲವೇ? ಇಂತಹ ತಾರತಮ್ಯ ಕೈಬಿಡಬೇಕು. ಕೊಡುವುದಾದರೆ ಎಲ್ಲ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಲಿ ಎಂದು ತಾಕೀತು ಮಾಡಿದರು.

ಗೊಂದಲದಲ್ಲಿ ಗೃಹಲಕ್ಷ್ಮಿ: ಗೃಹಲಕ್ಷ್ಮೇ ಯೋಜನೆಯೂ ಗೊಂದಲದಲ್ಲಿದೆ. ಬಿಪಿಎಲ್‌, ಎಪಿಎಲ್‌ ಹೊಂದಿರುವ ಮನೆಯ ಯಜಮಾನಿಗೆ ಆಗಸ್ಟ್‌ 15ರ ನಂತರ ಪ್ರತಿ ತಿಂಗಳು .2000 ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದಾರೆ. ಇದೂ ಗೊಂದಲದಲ್ಲಿದೆ. ಯಾವುದೇ ಅರ್ಜಿ ಕರೆಯದೇ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್‌ನಲ್ಲಿಯೇ ಎಲ್ಲ ಗ್ಯಾರಂಟಿ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಜುಲೈ, ಆಗಸ್ಟ್‌ಗೆ ಜಾರಿಯಾಗಲಿದೆ ಎನ್ನುತ್ತಿದ್ದಾರೆ. ಜಾರಿಗೊಳಿಸುವ ಪೂರ್ವದಲ್ಲಿಯೇ ಇದರ ಬಗ್ಗೆ ಯೋಚನೆ ಮಾಡಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳಿನ ಮನೆ ಕಟ್ಟುತ್ತಿರುವ ಕಾಂಗ್ರೆಸ್‌: ಕಾಂಗ್ರೆಸ್‌ ಸರ್ಕಾರ ಪದೇ ಪದೇ ಇಂತಹ ಸುಳ್ಳು ಆಶ್ವಾಸನೆ, ಹೇಳಿಕೆ ನೀಡುವ ಮೂಲಕ ಜನರು ಗೊಂದಲದಲ್ಲಿ ಜೀವನ ನಡೆಸುವಂತೆ ಮಾಡುತ್ತಿದೆ. ಇವರ ಸುಳ್ಳು ಗ್ಯಾರಂಟಿಯನ್ನು ಜನತೆ ನಂಬಿ ಈ ಬಾರಿ ಅಧಿಕಾರ ನೀಡಿದ್ದಾರೆ. ಆದರೆ, ಇವರು ಅಧಿಕಾರಕ್ಕೆ ಬಂದ ನಂತರ ತಾವು ನೀಡಿರುವ ಭರವಸೆ ಈಡೇರಿಸದೇ ಸುಳ್ಳಿನ ಘೋಷಣೆಗಳಿಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರಹಂಕಾರದ ಹೇಳಿಕೆ ಕೈಬಿಡಿ: ಬಜರಂಗದಳದ ನಿರುದ್ಯೋಗಿಗಳಿಗೂ ವಿದ್ಯುತ್‌ ಫ್ರೀ ಎಂದು ಕಾಂಗ್ರೆಸ್‌ ಮಾಡಿರುವ ಟ್ವೀಟ್‌ಗೆ ಉತ್ತರಿಸಿದ ಪ್ರಹ್ಲಾದ ಜೋಶಿ, ಸಾಮಾನ್ಯವಾಗಿ ಕಾಂಗ್ರೆಸ್‌ ಹಿಂದುತ್ವದ ವಿರೋಧಿ ಪಾರ್ಟಿ. ಹಾಗಾಗಿ ಎಲ್ಲದರಲ್ಲೂ ಬಜರಂಗದಳ ತರುತ್ತಾರೆ. ಕಾಂಗ್ರೆಸ್‌ ಇಷ್ಟುದಿನ ಎಲ್ಲ ಕಡೆ ನಿರುದ್ಯೋಗಿಗಳಾಗಿದ್ದರು. ಇದೀಗ ಕರ್ನಾಟಕದಲ್ಲಿ ಕೆಲಸ ಸಿಕ್ಕಿದೆ ಎಂದು ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಇಷ್ಟುಅಹಂಕಾರ ಒಳ್ಳೆಯದಲ್ಲ. ಕಾಂಗ್ರೆಸ್ಸಿಗೆ ಕೆಲವು ಕಡೆ ವಿರೋಧ ಪಕ್ಷದ ಅರ್ಹತೆಯೂ ಇಲ್ಲ. ಇದನ್ನು ಅವರು ಅರ್ಥೈಸಿಕೊಳ್ಳಬೇಕು ಎಂದರು.

ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ

ಹೊಂದಾಣಿಕೆ ಮಾಡುತ್ತೀರಿ: ಹಾಗೋ ಹೀಗೋ ಮಾಡಿ ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದರೆ, ಇದಕ್ಕೆ ಎಷ್ಟುಅನುದಾನ ಬೇಕಾಗಲಿದೆ? ಇದನ್ನು ಎಲ್ಲಿಂದ ಹೊಂದಾಣಿಕೆ ಮಾಡಲಿದ್ದಾರೆ? ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿಲ್ಲ. ಹಾಗೆಯೇ ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಹಿಡಿದಿದ್ದಾರೆ. ಏಕೆ? ಆ ಕಾಮಗಾರಿಗಳಲ್ಲೂ ಇವರಿಗೆ ಕಮಿಷನ್‌ ಬೇಕೇ? ಎಂಬುದನ್ನು ಸ್ಪಷ್ಟಪಡಿಸಲಿ ಎಂದರು. ಈ ಹಿಂದೆ ನಾವು ಜನತೆ ಬಳಕೆ ಮಾಡುತ್ತಿರುವಷ್ಟೇ ವಿದ್ಯುತ್‌ ನೀಡುತ್ತೇವೆ. ಹೆಚ್ಚಿನ ವಿದ್ಯುತ್‌ ಬಳಸಿದಲ್ಲಿ ಅದಕ್ಕೆ ಹಣ ಪಡೆಯುವುದಾಗಿ ಹೇಳುತ್ತಿದ್ದಾರೆ. ತಾವು ಮೊದಲೇ ಹೇಳಿರೋದು ಏನು ಈಗ ಹೇಳುತ್ತಿರುವುದೇನು ಎಂಬುದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳಬೇಕು.

Follow Us:
Download App:
  • android
  • ios