Asianet Suvarna News Asianet Suvarna News

ಬಿಆರ್‌ಎಸ್‌ ಜತೆ ಸೇರಿ ಮುಂದಿನ ಚುನಾವಣೆ ಎದುರಿಸ್ತೇವೆ: ಕುಮಾರಸ್ವಾಮಿ

ಕೆಸಿಆರ್‌ ಪಕ್ಷಕ್ಕೆ ಮೊದಲಿನಿಂದಲೂ ಜೆಡಿಎಸ್‌ ಸಹಜ ಮಿತ್ರ, ತೆಲಂಗಾಣದಲ್ಲಿ ನಡೆದ ಸಮಾರಂಭದ ನಂತರ ಕುಮಾರಸ್ವಾಮಿ ಘೋಷಣೆ 

We Will Fight the Next Election Together with BRS Says HD Kumaraswamy grg
Author
First Published Oct 6, 2022, 12:00 AM IST

ಬೆಂಗಳೂರು(ಅ.06): ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಜತೆ ಜಾತ್ಯತೀತ ಜನತಾದಳವೂ ಮಿತ್ರಪಕ್ಷವಾಗಿ ಸಕ್ರಿಯವಾಗಿ ಕೆಲಸ ಮಾಡಲಿದೆ. ಮುಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ನಿನ್ನೆ(ಬುಧವಾರ) ಹೈದರಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷವನ್ನು ಬಿಆರ್‌ಎಸ್‌ ಹೆಸರಲ್ಲಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಣೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಮೊದಲಿನಿಂದಲೂ ಜೆಡಿಎಸ್‌ ಮತ್ತು ಟಿಆರ್‌ಎಸ್‌ ಪಕ್ಷಗಳು ಸಹಜ ಮಿತ್ರ ಪಕ್ಷಗಳಾಗಿದ್ದವು. ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಿಕೊಂಡು ಬಂದಿವೆ. ಈಗ ಟಿಆರ್‌ಎಸ್‌ ರಾಷ್ಟ್ರೀಯ ಪಕ್ಷವಾಗಿ ಬಿಆರ್‌ಎಸ್‌ ಹೆಸರಲ್ಲಿ ಹೊರಹೊಮ್ಮಿರುವುದನ್ನು ನಮ್ಮ ಪಕ್ಷವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದೆ. ಮುಂದಿನ ದಿನದಲ್ಲಿ ನಾವು ಚಂದ್ರಶೇಖರ್‌ ರಾವ್‌ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದರು.

ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷ ‘BRS’ ಉದಯ: ತೆಲಂಗಾಣ ಸಿಎಂ KCR ಜತೆ ಮಾಜಿ ಸಿಎಂ ಎಚ್‌ಡಿಕೆ ಭಾಗಿ..!

ಮುಂದಿನ ರಾಜ್ಯದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಮುಕ್ತ ರಾಜಕೀಯ ವಾತಾವರಣವಿದ್ದು, ಅದೇ ಸ್ಥಿತಿಯನ್ನು ಕರ್ನಾಟಕದಲ್ಲಿಯೂ ತರಲು ನಾನು ಮತ್ತು ಚಂದ್ರಶೇಖರ್‌ ರಾವ್‌ ಸೇರಿ ನಿರ್ಧಾರ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್‌ ಪರವಾಗಿ ಬಂದಲ್ಲಿ, 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವೂ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯ ಇತ್ತು. ಕೆಲವೇ ಪಕ್ಷಗಳ ರಾಜಕೀಯ ಏಕಸ್ವಾಮ್ಯತೆಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ಶಕ್ತಿ ಬೇಕಿತ್ತು. ಅದಕ್ಕೆ ಬಿಆರ್‌ಎಸ್‌ ಒಂದು ಪ್ರಬಲ ಪರ್ಯಾಯವಾಗಿದೆ. ಮುಂದಿನ ದಿನದಲ್ಲಿ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಪಕ್ಷಗಳ ನಾಯಕರು ಬಿಆರ್‌ಎಸ್‌ ಒಕ್ಕೂಟದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅಂತಹ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಜೆಡಿಎಸ್‌-ಬಿಆರ್‌ಎಸ್‌ ಮಿತ್ರಪಕ್ಷಗಳಾಗಿ ಮುನ್ನಡೆಯಲಿವೆ ಎಂದು ಹೇಳಿದರು.

ಬಿಆರ್‌ಎಸ್‌ ಸ್ಥಾಪನೆ ಬಗ್ಗೆ ಈ ಹಿಂದೆಯೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ನನ್ನ ಜತೆ ಚಂದ್ರಶೇಖರರಾವ್‌ ಸಮಾಲೋಚನೆ ನಡೆಸಿದ್ದರು. ಕೆಲ ದಿನಗಳ ಹಿಂದೆ ಸ್ವತಃ ನಾನೇ ಹೈದರಾಬಾದ್‌ಗೆ ಭೇಟಿ ನೀಡಿ ಚರ್ಚೆ ಮಾಡಿದ್ದೆ. ನಮ್ಮನ್ನು ಪರಿಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಈ ಹೆಜ್ಜೆ ಇರಿಸಿದ್ದಾರೆ ಎಂದ ಅವರು, ಚಂದ್ರಶೇಖರರಾವ್‌ ಅವರು ತಮ್ಮ ಆಡಳಿತಾವಧಿಯಲ್ಲಿ ರೈತ ಬಂಧು, ದಲಿತ ಬಂಧುನಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಪ್ರತಿ ನಾಗರಿಕನಿಗೂ ತಲುಪುವಂತೆ ಮಾಡಿದರು. ಇದೇ ರೀತಿ ಕರ್ನಾಟಕದಲ್ಲಿ ಜೆಡಿಎಸ್‌ ಸಹ ಮಾಡಿದ್ದು, ಮುಂದಿನ ದಿನದಲ್ಲಿ ಅಂತಹ ಜನಪರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುವುದು ಎಂದರು.
 

Follow Us:
Download App:
  • android
  • ios