ವಿರೋಧ ಪಕ್ಷದವರು ಅಸತ್ಯ ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿತಪ್ಪಿಸದೇ ಸದನದ ಗೌರವ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಸುವರ್ಣವಿಧಾನಸೌಧ (ಡಿ.10): ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ನಿಲುವಳಿ ಸೂಚನೆ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಬರ ಪರಿಹಾರ ವಿಳಂಬದ ಟೀಕಾ ಪ್ರಹಾರಕ್ಕೆ ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ಷೇಪಿಸಿ, ಇದು ಸುಳ್ಳು ಎಂದು ಸ್ಪಷ್ಟನೆ ನೀಡಲು ಮುಂದಾದಾಗ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಗೌರವ ಎತ್ತಿಹಿಡಿಯಬೇಕು ಎಂದು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದ ಪ್ರಸಂಗವೂ ನಡೆಯಿತು.
ಅಶೋಕ್ ಮಾತನಾಡುತ್ತಾ, ಈ ಬಾರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷ ಬರ, ಎರಡನೇ ವರ್ಷ ಪ್ರವಾಹ, ಈಗ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಮೊದಲ ಬಾರಿಯ ಆಡಳಿತ ನಿರೀಕ್ಷಿಸಿದ್ದ ಜನರ ಭ್ರಮೆ, ಕನಸು ನುಚ್ಚುನೂರಾಗಿದೆ. ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಇದರಿಂದ ಬರ ಪರಿಹಾರ ಘೋಷಣೆಯಲ್ಲಿ 2 ತಿಂಗಳು ವಿಳಂಬ ಮಾಡಿದರು. ಪ್ರವಾಹದಿಂದಾದ ಬೆಳೆ, ಮನೆ ಹಾನಿಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
38 ಲಕ್ಷ ರೈತರಿಗೆ ಪರಿಹಾರ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ, ಬರ ಬಂದಾಗ ಇತಿಹಾಸದಲ್ಲೇ ದಾಖಲೆ ಎಂಬಂತೆ 38 ಲಕ್ಷ ರೈತರಿಗೆ 4300 ಕೋಟಿ ರು. ಪರಿಹಾರವನ್ನು ನಮ್ಮ ಸರ್ಕಾರ ನೀಡಿದೆ. ಈ ವರ್ಷ 21 ಲಕ್ಷ ರೈತರಿಗೆ 2249ಕೋಟಿ ರು. ಪರಿಹಾರ ಕೊಟ್ಟಿದ್ದೇವೆ. ಸದನಕ್ಕೆ ಸುಳ್ಳು ಮಾಹಿತಿ ಹೋಗಬಾರದು ಎಂದರು. ಈ ವೇಳೆ, ಅಶೋಕ್ ಸೇರಿ ಪ್ರತಿಪಕ್ಷದ ಅರವಿಂದ ಬೆಲ್ಲದ್, ಸುರೇಶ್ ಗೌಡ, ಸುನೀಲ್ ಕುಮಾರ್ ಮತ್ತಿತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಮೊದಲು ಪ್ರತಿಪಕ್ಷ ನಾಯಕರು ಮಾತನಾಡಲು ಬಿಡಿ. ನಂತರ ಸರ್ಕಾರ ಉತ್ತರ ಕೊಡಲಿ ಎಂದರು. ಈ ವೇಳೆ ಅಶೋಕ್ ಅವರು, ನೀವು ಪ್ರತಿ ಪಕ್ಷದಲ್ಲಿದ್ದಾಗ ಎಲ್ಲಾ ಸತ್ಯವನ್ನೇ ಹೇಳಿದ್ದೀರಾ? ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಸ್ಥಾನದಲ್ಲಿ ಇದ್ದಾಗ ಎಷ್ಟು ಹೊತ್ತು ಮಾತನಾಡಿದ್ದಾರೆ, ಎಷ್ಟು ಟೀಕೆ ಮಾಡಿದ್ದಾರೆ ಎಲ್ಲಾ ಸರಿಯಾಗಿಯೇ ಹೇಳಿದ್ದಾರಾ? ಎಂದರು.
ಆಗ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ವಿರೋಧ ಪಕ್ಷದವರು ಅಸತ್ಯ ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿತಪ್ಪಿಸದೇ ಸದನದ ಗೌರವ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ನಾವು ಹೇಳುವುದು ಸುಳ್ಳಾಗಿದ್ದರೆ ನಿಮ್ಮ ಉತ್ತರದ ವೇಳೆ ಹೇಳಿ. ಅದನ್ನು ಬಿಟ್ಟು ಹೀಗೆ ಅಡ್ಡಿಪಡಿಸುವುದಾದರೆ ನಾನು ಮಾತನಾಡುವುದೇ ಇಲ್ಲ. ಹೇಗೆ ಮಾತನಾಡಬೇಕು, ಎಷ್ಟು ನಿಮಿಷ ಮಾತನಾಡಬೇಕು ಎಲ್ಲಾ ನೀವೇ ಬರೆದುಕೊಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ತಹಬದಿಗೆ ಬರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು 10 ನಿಮಿಷ ಕಲಾಪ ಮುಂದೂಡಿದರು. ಬಳಿಕ ಸದನ ಸಮಾವೇಶಗೊಂಡಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಅಶೋಕ್ ಅವರು ಮಾತು ಮುಂದುವರೆಸಲು ಒಪ್ಪಿದರಾದರೂ ತಮಗೆ ಹೆಚ್ಚಿನ ಸಮಯ ಬೇಕಿರುವುದರಿಂದ ಗುರುವಾರ ಮಾತು ಮುಂದುವರೆಸುವುದಾಗಿ ಹೇಳಿದರು.
ವಿಪಕ್ಷದವರು ಅಸತ್ಯ ಹೇಳುವುದು ನಿಲ್ಲಿಸಬೇಕು
ವಿರೋಧ ಪಕ್ಷದ ನಾಯಕರು ಅಥವಾ ಸಭಾ ನಾಯಕರು ಮಾತನಾಡುವಾಗ ಮಧ್ಯೆ ಮಾತನಾಡುವುದು ಸರಿಯಲ್ಲ. ವಿಧಾನಮಂಡಲದಲ್ಲಿ ಗುಣಾತ್ಮಕ ಚರ್ಚೆಗಳು ಕಡಿಮೆಯಾಗುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಸಂವಿಧಾನಾತ್ಮಕವಾಗಿ ಮಾತನಾಡುವಾಗ ಅಡ್ಡಿಪಡಿಸಬಾರದು. ವಿರೋಧ ಪಕ್ಷದವರು ಮಾತನಾಡುವಾಗ ಸುಮ್ಮ ಸುಮ್ಮನೆ ಅಡ್ಡಿಪಡಿಸಬಾರದು. ವಿರೋಧ ಪಕ್ಷದ ನಾಯಕರು ಮಣಿದಾಗ ಮಾತ್ರ ಮಾತನಾಡಬೇಕು. ಯಾರೇ ಆದರೂ ಚರ್ಚೆಗೆ ಅಡ್ಡಿಪಡಿಸಬಾರದು ಎಂದರು.


