ಉಚಿತ ಯೋಜನೆಗಳಿಗೆ ಮಾರು ಹೋಗಿ ಕಾಂಗ್ರೆಸ್‌ಗೆ ಮತ ಹಾಕದಿರಿ: ಚಕ್ರವರ್ತಿ ಸೂಲಿಬೆಲೆ
ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತವು ಐದನೇ ದೊಡ್ಡ ಆರ್ಥಿಕ ರಾಷ್ಟ್ರದ ಸ್ಥಾನ ಪಡೆದಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಪ್ರತಿಪಾದಿಸಿದರು.
ಚನ್ನಗಿರಿ (ಫೆ.17): ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತವು ಐದನೇ ದೊಡ್ಡ ಆರ್ಥಿಕ ರಾಷ್ಟ್ರದ ಸ್ಥಾನ ಪಡೆದಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕು ಎಂದು ನಮೋ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರತಿಪಾದಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ನಮೋ ಭಾರತ ಬಹಿರಂಗ ಸಮಾವೇಶದಲ್ಲಿ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ತಂದು ಸರ್ಕಾರದ ಹಣ ಈ ಉಚಿತ ಯೋಜನೆಗಳಿಗೆ ವ್ಯಯ ಮಾಡುತ್ತಿದ್ದು ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗದೆ 15 ವರ್ಷ ಹಿಂದೆ ಉಳಿಯುವಂತೆ ಮಾಡುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಎಸ್‌ಸಿ, ಎಸ್.ಟಿ ಸಮುದಾಯಗಳ ಅಭಿವೃದ್ಧಿಗಾಗಿರುವ ಹಣ ಬಳಸುತ್ತಿದ್ದಾರೆ. ಉಚಿತ ಯೋಜನೆಗಳಿಗೆ ಮಾರು ಹೋಗಿ ಕಾಂಗ್ರೆಸ್‌ಗೆ ಮತಗಳ ಹಾಕದಿರಿ, ರಾಷ್ಟ್ರದ ಹಿತಾಸಕ್ತಿಗಾಗಿರುವ ನರೇಂದ್ರ ಮೋದಿಯವರಿಗೆ ಮತ ನೀಡಿ ಎಂದರು. ಪಾಕಿಸ್ತಾನವೂ ಪುಲ್ವಾಮ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರ ಹತ್ಯೆಗೈದಾಗ ಪ್ರತೀಕಾರದ ದಾಳಿಯಾಗಿ ಏರ್ ಸ್ಟ್ರೈಕ್ ನಡೆಸಿ 200ಕ್ಕೂ ಹೆಚ್ಚು ಪಾಕಿಸ್ತಾನ ಭಯೋತ್ಪಾದಕರ ಕೊಂದು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು ನರೇಂದ್ರ ಮೋದಿ.
ದೇಶದ ಕಿರೀಟದಂತಿರುವ ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದು ಗೊಳಿಸಿ ದೇಶದ ಎಲ್ಲಾ ನಾಗರಿಕರಿಗೂ ಮುಕ್ತ ಅವಕಾಶಗಳ ನೀಡಿದ್ದು ಹೆಮ್ಮೆಯ ಪ್ರಧಾನಿ ನಮೋ ಇಂತಹ ದಿಟ್ಟತನದ ವ್ಯಕ್ತಿ ಮತ್ತೊಮ್ಮೆ ಪ್ರಧಾನಿಯಾದಾಗ ಮಾತ್ರ ದೇಶದಲ್ಲಿ ಐಕ್ಯತೆ ಮತ್ತು ಭದ್ರತೆ ಒದಗಿಸಲು ಸಾಧ್ಯ ಎಂದರು. ಕೊರೋನಾ ವೈರಸ್ ಸಂದರ್ಭದಲ್ಲಿ ಇಡೀ ವಿಶ್ವವೇ ತಲ್ಲಣಗೊಂಡಿತ್ತು. ದೇಶದ 80ಕೋಟಿ ಬಡ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳ ವಿತರಿಸಿ ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತ ವ್ಯಾಕ್ಸಿನ್ ನೀಡಿದ್ದಲ್ಲದೆ ಬಡ ರಾಷ್ಟ್ರಗಳಿಗೆ ಉಚಿತ ಲಸಿಕೆ ನೀಡಿ ನಮ್ಮೊಂದಿಗೆ ಇತರರು ಸುರಕ್ಷಿತವಾಗಿರುವಂತೆ ನೋಡಿದವರು ನರೇಂದ್ರ ಮೋದಿಯವರು ಎಂದರು. ಈ ಕಾರ್ಯಕ್ರಮದಲ್ಲಿ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ಬ್ರಿಗೇಡ್ ನ ಪ್ರಮುಖರಾದ ಮಂಜುನಾಥ್, ರವಿಚಂದ್ರ, ವಸಂತ್, ಸಿದ್ದೇಶ್ ಸೇರಿ ಸಾರ್ವಜನಿಕರಿದ್ದರು.
ಶೀಘ್ರವೇ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನ: ಮಾಜಿ ಸಚಿವ ಮುರಗೇಶ್ ನಿರಾಣಿ
ರಾಹುಲ್ ಗಾಂಧಿ ತಮ್ಮ ಕುಟುಂಬದ ಹೆಸರು ಬಳಸಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ನರೇಂದ್ರ ಮೋದಿ ರಾಜಕಾರಣ ಹಿನ್ನಲೆ ಹೊಂದಿಲ್ಲದ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ ಸುಖಗಳನ್ನು ಹತ್ತಿರದಿಂದ ಅರಿತಿರುವ ವ್ಯಕ್ತಿ. ಗುಜರಾತ್ ನಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಎರಡು ಬಾರಿ ದೇಶದ ಪ್ರಧಾನಿಯಾಗಿ ಎಲ್ಲಾ ವರ್ಗದ ಜನರೂ ನೆಮ್ಮದಿಯಿಂದ ಜೀವಿಸುವಂತೆ ಮಾಡಿದವರು ನಮೋ.
-ಚಕ್ರವರ್ತಿ ಸೂಲಿಬೆಲೆ, ನಮೋ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ