ಕುಮಾರಸ್ವಾಮಿ ಅವರು ತಾವು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಸುತ್ತಲಿನ ರಾಜ್ಯ ರಾಜಕಾರಣದ ಚರ್ಚೆಗಳು ಮಾತ್ರ ನಿಂತಿಲ್ಲ. ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರಾ? ಎಂಬ ಪ್ರಶ್ನೆಗೆ ಈಗ ಸ್ವತಃ ಕುಮಾರಸ್ವಾಮಿ ಅವರೇ ಅಚ್ಚರಿಯ ಉತ್ತರ ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ರಾಜ್ಯಕ್ಕೆ ಬರ್ತೀನಿ, ಆದ್ರೆ ಈಗಲೇ ಅಲ್ಲ
ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಅಂದ ಕೂಡಲೇ ಅದು ಈಗಲೇ ಎಂದು ಅರ್ಥವಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ. ಹಾಗಾಗಿ ನಾಳೆಯೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಜ್ಜು
ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ನಮ್ಮ ಅಪೇಕ್ಷೆ. ಈ ಬಗ್ಗೆ ಈಗಾಗಲೇ ಎನ್‌ಡಿಎ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ಅಲ್ಲಿ ನಮ್ಮ ಪಕ್ಷದ ಇಚ್ಛೆಯಂತೆ ಸ್ಪರ್ಧೆ ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನವಾಗಲಿದೆ ಎಂದರು.
ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ
ಇದೇ ವೇಳೆ ಹೆಚ್‌ಎಂಟಿ (HMT) ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಹೆಚ್‌ಎಂಟಿ ಪಕ್ಕದಲ್ಲೇ ಏರ್ ಫೋರ್ಸ್ ಇದೆ, ಅದಕ್ಕೆಲ್ಲಾ ನಮ್ಮ ಬಳಿ ದಾಖಲೆ ಇದೆ. ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ, ಕೋರ್ಟ್ ಸ್ಟೇ ನೀಡಿದೆ. ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿ ಎರಡು ವರ್ಷದಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆಯೂ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.
ಬೆಂಗಳೂರು ಉದ್ದಾರಕ್ಕೆ ಹಣ ಎಲ್ಲಿದೆ?
ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ. ನೀಡುತ್ತೇವೆ ಎಂಬ ಸರ್ಕಾರದ ಘೋಷಣೆಯನ್ನು ಲೇವಡಿ ಮಾಡಿದ ಕುಮಾರಸ್ವಾಮಿ, ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಸಾಲ ಹೊರಿಸುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಸರ್ಕಾರದ 15 ಲಕ್ಷ ಸಸಿ ನೆಡುವ ಗಿನ್ನೆಸ್ ದಾಖಲೆಯ ಪ್ರಯತ್ನದ ಬಗ್ಗೆ ಕುಹಕವಾಡಿದ ಹೆಚ್‌ಡಿಕೆ, 15 ಲಕ್ಷ ಸಸಿ ನೆಟ್ಟು ಚೊಂಬಿನಲ್ಲಿ ನೀರು ಬಿಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಅಂತಾರೆ, ಇದಕ್ಕಾಗಿ ಭತ್ತ ನೆಡುವವರನ್ನು ಕರೆದುಕೊಂಡು ಬಂದಿದ್ದರೇನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಕಾಲದ ಟೆಂಡರ್ ಕ್ಯಾನ್ಸಲ್ ಮಾಡಿ ಡಿ.ಕೆ. ಶಿವಕುಮಾರ್ ಮರು ಟೆಂಡರ್ ಮಾಡಿರುವ ವಿಚಾರದ ಬಗ್ಗೆ ಈಗಲೇ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಇಂದು ನಾನು ಈ ಬಗ್ಗೆ ಏನೂ ಮಾತನಾಡಲ್ಲ. ಅದಕ್ಕೆ ಸರಿಯಾದ ಸಮಯ ಬರಲಿ, ಆಗ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು. ಒಟ್ಟಿನಲ್ಲಿ ಕುಮಾರಸ್ವಾಮಿ ಅವರು ತಾವು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ.


