ಕೇಂದ್ರ ಸರ್ಕಾರದ ರಾಜಕೀಯದಿಂದಾಗಿ ಯೋಜನೆ ಜಾರಿ ವಿಳಂಬ: ಸಿಎಂ ಸಿದ್ದರಾಮಯ್ಯ, 3 ದಿನದಿಂದ ಕೇಂದ್ರ ಆಹಾರ ಸಚಿವರ ಭೇಟಿಗೆ ಅವಕಾಶವೇ ಸಿಗುತ್ತಿಲ್ಲ: ಸಚಿವ ಮುನಿಯಪ್ಪ ಕಿಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನವದೆಹಲಿ(ಜೂ.22): ಅಕ್ಕಿ ವಿಚಾರವಾಗಿ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ‘ಡರ್ಟಿ ಪಾಲಿಟಿಕ್ಸ್‌’ ನಿಂದಾಗಿ ಯೋಜನೆ ಜಾರಿ ಸ್ವಲ್ಪ ವಿಳಂಬ ಆಗಬಹುದು ಎಂದು ತಿಳಿಸಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಅಕ್ಕಿ ಪೂರೈಕೆ ಸಂಬಂಧ ಚರ್ಚಿಸಲು ಕಳೆದ ಮೂರು ದಿನಗಳಿಂದ ಕೇಂದ್ರ ಆಹಾರ ಸಚಿವ ಪಿಯೂಷ್‌ ಗೋಯಲ್‌ ಭೇಟಿಗೆ ಮನವಿ ಮಾಡುತ್ತಿದ್ದೇನೆ. ಆದರೆ, ಭೇಟಿಗೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ದೆಹಲಿ ಭೇಟಿಯಲ್ಲಿರುವ ಸಿದ್ದರಾಮಯ್ಯ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದರು. ಜುಲೈ 1ಕ್ಕೆ ಉಚಿತ ಅಕ್ಕಿ ನೀಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ತೆಲಂಗಾಣ, ಪಂಜಾಬ್‌ ಸೇರಿ ಎಲ್ಲಾ ಕಡೆ ಕೇಳಿದ್ದೇವೆ. ತೆಲಂಗಾಣದವರು ಕೇವಲ ಗೋಧಿ ಮಾತ್ರ ಕೊಡುವುದಕ್ಕೆ ಸಾಧ್ಯ ಎಂದಿದ್ದಾರೆ. ಆಂಧ್ರದಿಂದ ತಂದರೆ ಒಂದು ಕೆಜಿಗೆ 42 ರು. ಆಗುತ್ತೆ. ಛತ್ತಿಸ್‌ಗಢದವರು ಒಂದು ತಿಂಗಳ ಮಟ್ಟಿಗೆ 1 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಕೊಡಲು ಸಾಧ್ಯ ಎಂದಿದ್ದಾರೆ ಎಂದರು.

ಕೇಂದ್ರಕ್ಕೆ ಯಡಿಯೂರಪ್ಪ ಪತ್ರ ಬರೆದು ಅಕ್ಕಿ ಕೊಡಿ​ಸ​ಲಿ: ಸಚಿವ ಪ್ರಿಯಾಂಕ್‌ ಖರ್ಗೆ

ಕರ್ನಾಟಕದಲ್ಲಿ ಬಹಳ ಅಕ್ಕಿ ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಖರೀದಿ ಮಾಡಬೇಕಿದ್ದರೆ ಟೆಂಡರ್‌ ಕರೆಯಬೇಕು. ಈ ಪ್ರಕ್ರಿಯೆಗೆ ಸುಮಾರು 2 ತಿಂಗಳ ಸಮಯ ಹಿಡಿಯುತ್ತೆ. ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಕೇಂದ್ರೀಯ ಭಂಡಾರ, ಎನ್‌ಸಿಸಿಎಫ್‌, ನಾಫೆಡ್‌ನಿಂದ ಕೇಳಿದ್ದೇವೆ. ಗುರುವಾರ ಕೊಟೇಷನ್‌ ನೀಡುವುದಾಗಿ ತಿಳಿಸಿದ್ದಾರೆ. ಬಳಿಕ, ಈ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ. ಇದರಿಂದ ಯೋಜನೆ ಜಾರಿ ಸ್ವಲ್ಪ ವಿಳಂಬ ಆಗಬಹುದು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರ ಭೇಟಿಗೆ ಅವಕಾಶ ಸಿಗುತ್ತಿಲ್ಲ:

ಇದೇ ವೇಳೆ, ಸುದ್ದಿಗಾರರ ಜೊತೆ ಮಾತನಾಡಿದ ಕೆ.ಎಚ್‌.ಮುನಿಯಪ್ಪ, ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಭೇಟಿ ಸಾಧ್ಯವಾಗುತ್ತಿಲ್ಲ. ಗುರುವಾರ ಬೆಳಗ್ಗೆ 10 ಗಂಟೆಗೆ ಕೇಂದ್ರದ ರಾಜ್ಯ ಖಾತೆ ಸಚಿವರು ಭೇಟಿಗೆ ಕಾಲಾವಕಾಶ ನೀಡಿದ್ದರು. ಆದರೀಗ ಗುರುವಾರದ ಭೇಟಿಗೂ ಅವಕಾಶ ನಿರಾಕರಿಸಿದ್ದಾರೆ. ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಾವು ಜನರಿಗೆ ನೀಡಿರುವ ಭರವಸೆಯಂತೆ ಅಕ್ಕಿಯನ್ನು ನೀಡುತ್ತೇವೆ. ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಛತ್ತೀಸ್‌ಗಢ, ಪಂಜಾಬ್‌ಗಳು ಅಕ್ಕಿ ನೀಡಲು ಮುಂದೆ ಬಂದಿವೆ. ಆದರೆ, ಅಕ್ಕಿಯ ದರದಲ್ಲಿ ಹೆಚ್ಚಳವಾಗುತ್ತಿದ್ದು, ಅದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಜನರ ಬೇಡಿಕೆಯಂತೆ 8 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿ ಅಥವಾ ಜೋಳವನ್ನು ನೀಡುತ್ತೇವೆ. ಹೀಗಾಗಿ, ಉಚಿತ ಅಕ್ಕಿ ನೀಡುವ ಯೋಜನೆ ತಡವಾಗಲಿದೆ. ಈ ಮೊದಲು ಜು.1ರಿಂದ ಯೋಜನೆ ಜಾರಿಗೊಳಿಸುವ ಉದ್ದೇಶವಿತ್ತು. ಆದರೆ, ಆಗಸ್ಟ್‌ ಒಳಗಾಗಿ ಅಕ್ಕಿ ನೀಡುತ್ತೇವೆ ಎಂದು ಹೇಳಿದರು.