ಸಿಬಿಐ ದಾಳಿ: ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್
ಇಂದು (ಸೋಮವಾರ) ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಡೆದ ಸಿಬಿಐ ದಾಳಿ ಮತ್ತು ಶೋಧದ ನಂತರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ಮಾತನಾಡಿದರು
ಬೆಂಗಳೂರು, (ಅ.05) : ಸಿಬಿಐ ದಾಳಿ ಮತ್ತು ಶೋಧದ ನಂತರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್, ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದೇ ಒಂದು ಮಾತಾಡದ ರಾಜ್ಯ ಬಿಜೆಪಿ ಸರ್ಕಾರ ತನ್ನ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಯಾವುದೇ ರಾಜಕಾರಣಿ, ಶಾಸಕ ಮಂತ್ರಿ ಏನು ಮಾಡಿಲ್ವಾ..? ಎಲ್ಲರ ದಾಖಲೆ ನನ್ನ ಬಳಿ ಇದೆ, ಸಮಯ ಸಂದರ್ಭ ನೋಡಿಕೊಂಡು ಎಲ್ಲವನ್ನು ಬಹಿರಂಗಪಡಿಸುವೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದರು.
ಡಿಕೆಶಿ ಕುಟುಂಬಸ್ಥರ ವಿರುದ್ಧ ಮತ್ತೊಂದು ಕೇಸ್ ಬುಕ್, ದಾಳಿಯ ವಿವರಣೆ ಕೊಟ್ಟ ಸಿಬಿಐ
ಸಿಬಿಐನವರು ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ. ಅವರು ತನಿಖೆ ಮುಂದುವರಿಸಲಿ, ನನಗೆ ಯಾವ ಪ್ರಶ್ನೆಯನ್ನಾದರೂ ಕೇಳಲಿ, ಸಮರ್ಥವಾದ ಉತ್ತರ ನೀಡುತ್ತೇನೆ, ಕದ್ದು ಓಡಿ ಹೋಗುವ ಜಾಯಮಾನ ನನ್ನದಲ್ಲ ಎಂದರು.
ಸಿಬಿಐ ದಾಳಿಗೆ ರಾಜ್ಯದ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆಂದು ಆರೋಪಿಸಿದ ಶಿವಕುಮಾರ್, ಸಿಬಿಐ ದಾಳಿಗೆ ಅನುಮತಿ ಕೊಟ್ಟಿರುವುದು ರಾಜ್ಯದ ಮುಖ್ಯಮಂತ್ರಿಗಳು, ಅಡ್ವೊಕೇಟ್ ಜನರಲ್ ಹೇಳಿದರೂ ಒಪ್ಪದೆ ಅನುಮತಿ ನೀಡಿದ್ದಾರೆ. ನನ್ನ ನಿವಾಸ, ಕಚೇರಿಗಳ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ. ಉತ್ತರ ಪ್ರದೇಶದ ಘಟನೆ ಬಗ್ಗೆ ತುಟಿ ಬಿಚ್ಚದ ಇವರು, ಚುನಾವಣೆ ವೇಳೆ ಗಮನ ಬೇರೆಡೆ ಸೆಳೆಯಲು ದಾಳಿ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.