ಬೆಂಗಳೂರು, (ಅ.05):   ಡಿ.ಕೆ ಶಿವಕುಮಾರ್​ ಮನೆ ಮೇಲೆ ದಾಳಿ ಮಾಡಿದ ಬಳಿಕ ಸಿಬಿಐ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಡಿಕೆ ಶಿವಕುಮಾರ್​ ಹಾಗೂ ಅವರ ಕುಟುಂಬಸ್ಥರ ವಿರುದ್ಧ 74.93 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದೆ.

2020 ಮಾರ್ಚ್​ನಲ್ಲಿ ಈ ಕುರಿತು ಪ್ರಥಾಮಿಕ ತನಿಖೆ ಮಾಡಲಾಗಿತ್ತು. ಇದರ ಭಾಗವಾಗಿ ಇಂದು (ಸೋಮವಾರ) 14 ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಈ ವೇಳೆ 57 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಜೊತೆಗೆ, ಮಹತ್ವದ ದಾಖಲೆ, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸಹ ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಸಿಬಿಐ ಪರಿಶೀಲನೆ ಅಂತ್ಯ: ಸಂಸದ ಡಿಕೆ ಸುರೇಶ್ ಫಸ್ಟ್ ರಿಯಾಕ್ಷನ್...!

ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಹೆಸರಿನ ಮುಂಬೈ, ದೆಹಲಿ, ರಾಮನಗರ, ಬೆಂಗಳೂರು ಸೇರಿದಂತೆ ಒಟ್ಟು 14 ಕಡೆ  ಸಿಬಿಐ ಅಧಿಕಾರಿಗಳು ಸೋಮವಾರ ಬೆಳಗ್ಗೆ ದಾಳಿ ಮಾಡಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಿಬಿಐ ದಾಳಿಯ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಯಾವುದೇ ಹಣ ಸಿಕ್ಕಿಲ್ಲ ಎಂದು ತಿಳಿಸಿದ್ದರು. ಆದ್ರೆ, ಇದೀಗ ಸಿಬಿಐ 57 ಲಕ್ಷ ರೂಪಾಯಿ ಹಣ ಸಿಕ್ಕಿರುವುದಾಗಿ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.