Council Election Ramanagar : ಆತಂಕದಲ್ಲಿಯೇ ಅಭ್ಯರ್ಥಿಗಳು : ಬೆಂಬಲಿಗರೊಂದಿಗೆ ಗೆಲುವಿನ ಲೆಕ್ಕಾಚಾರ
- ಆತಂಕದಲ್ಲಿಯೇ ಅಭ್ಯರ್ಥಿಗಳು : ಬೆಂಬಲಿಗರೊಂದಿಗೆ ಗೆಲುವಿನ ಲೆಕ್ಕಾಚಾರ
- ಗೆಲುವಿಗಾಗಿ ದೇವರ ಮೊರೆ ಹೋದ ಬೆಂಬಲಿಗರು
- ಗೆಲ್ಲುವ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಜೋರು
ವರದಿ : ಎಂ. ಅಫ್ರೋಜ್ ಖಾನ್
ರಾಮನಗರ (ಡಿ.12): ಬೆಂಗಳೂರು (Bengaluru) ಗ್ರಾಮಾಂತರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಚುನಾವಣೆ (MLC Election) ನಂತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಫಲಿತಾಂಶ ಏನಾಗುತ್ತದೊ ಎಂಬ ಆತಂಕದಲ್ಲಿಯೇ ವಿಶ್ರಾಂತಿಗೆ ಶರಣಾಗಿದ್ದರೆ, ಕೆಲವರು ವಿಶ್ರಾಂತಿಯನ್ನು ಬಯಸದೆ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿ ಕಳೆದ ಒಂದು ತಿಂಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ, ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಅವರು ಪಕ್ಷದ ನಾಯಕರ ಜತೆಗೂಡಿ ಗೆಲುವಿಗಾಗಿ ಮತಬೇಟೆ ನಡೆಸಿದ್ದರು. ಈಗ ಮತದಾನ ಮುಗಿಯುತ್ತಿದ್ದಂತೆ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ಅಭ್ಯರ್ಥಿಗಳು ಮನೆ ಮಂದಿ ಜತೆ ಸೇರಿ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಾರೆ. ಅದರ ಜತೆಗೆ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಈ ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈಗಿನಷ್ಟು ಪ್ರಯಾಸ ಪಟ್ಟಿರಲಿಲ್ಲ. ಕಾಂಗ್ರೆಸ್ (Congress), ಬಿಜೆಪಿ ಹಾಗೂ ಜೆಡಿಎಸ್ (JDS) ಪಕ್ಷಗಳ ನಾಯಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲವಿಗಾಗಿ ಅಬ್ಬರದ ಪ್ರಚಾರ ನಡೆಸಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಮೂವರು ಬೆಂಗಳೂರು (bengaluru) ವಾಸಿಗರು. ಪಕ್ಷದ ಟಿಕೆಟ್ ಪಡೆಯುವುದರಿಂದ ಹಿಡಿದು ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮುಗಿಸಿ, ಮತದಾನ ಪೂರ್ಣಗೊಳ್ಳುವವರೆಗೂ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದರು.
ಮತದಾನದ ದಿನದವರೆಗೂ ಒಬ್ಬರನ್ನೊಬ್ಬರು ದೂಷಿಸುತ್ತಾ ಮತದಾರರನ್ನು ಸೆಳೆಯುವುದಕ್ಕೆ ಮೇಲಾಟ ನಡೆಸುತ್ತಿದ್ದ ಅಭ್ಯರ್ಥಿಗಳು ನಿದ್ದೆ ಇಲ್ಲದೆ ರಾತ್ರಿಗಳನ್ನು ಕಳೆಯಬೇಕಾಯಿತು. ಇದೀಗ ಅಭ್ಯರ್ಥಿಗಳು ಶುಕ್ರವಾರ ಮತದಾನ ಮುಗಿದ ತರುವಾಯ ರಾತ್ರೋರಾತ್ರಿ ಕ್ಷೇತ್ರ ತೊರೆದು ತಮ್ಮ ತಮ್ಮ ಗೂಡು ಸೇರಿಕೊಂಡಿದ್ದಾರೆ.
ಸೋಲು ಗೆಲುವಿನ ಲೆಕ್ಕಾಚಾರ:
ಕೆಲ ಅಭ್ಯರ್ಥಿಗಳು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಕ್ಷೇತ್ರದಲ್ಲಿ ಸ್ಥಾಪನೆಯಾಗಿದ್ದ ಬೂತ್‌ಗಳಲ್ಲಿ ನಡೆದಿರುವ ಶೇಕಡವಾರು ಮತದಾನ ಪ್ರಮಾಣ ಹಾಗೂ ಯಾವ ಮತದಾರರು ಮತದಾನ (Voting) ಮಾಡಿದ್ದಾರೆ ಎಂಬ ಪಟ್ಟಿ ಹಿಡಿದು ಗೆಲವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮತದಾನದ ಮುನ್ನಾ ದಿನವಾದ ಗುರುವಾರ ರಾತ್ರಿ ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಯಕರ್ತರು, ಮತದಾರನ ಕೈಗೆ ಬಾಗಿಲಿಗೆ ಉಡುಗೊರೆ ಜತೆಗೆ ಗರಿ ಗರಿ ನೋಟುಗಳು ತಲುಪಿದರು. ಕೆಲವೆಡೆ ಮತದಾರನ ಕೈಗೆ ಹಣ ಮತ್ತು ಬಳುವಳಿಗಳ ಜತೆಗೆ ದೇವರ ಫೋಟೋ, ಅರಿಶಿನ ಕುಂಕುಮದ ಪ್ಯಾಕೆಟ್, ಎಲೆ ಅಡಿಕೆ ಇರಿಸಿ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಅಭ್ಯರ್ಥಿ ಬೆಂಬಲಿಗರಿಂದ ದೇವರ ಮೊರೆ : ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುನ್ನಾ ಗೆಲವಿಗೆ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದರು. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಮತದಾನ ಮುಗಿಯುತ್ತಿದ್ದಂತೆ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಬೇಡುತ್ತಿದ್ದಾರೆ. ಕೆಲವರು ರಾಜಕೀಯ ಭವಿಷ್ಯ ಕೇಳಲು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಬೆಟ್ಟಿಂಗ್ ಜೋರು
ವಿಧಾನ ಪರಿಷತ್ ಚುನಾವಣೆಯ (MLC Election) ಸೋಲು ಗೆಲುವಿನ ಚರ್ಚೆಗಳು, ಊಹಾಪೋಹದ ಮಾತುಗಳ ಜತೆಗೆ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆದಿದೆ.
ಚುನಾವಣೆಯಲ್ಲಿ ಇಂತಹ ಅಭ್ಯರ್ಥಿಯೇ ಗೆಲ್ಲುತ್ತಾರೆ. ಈ ಅಭ್ಯರ್ಥಿಯು ಇಷ್ಟೇ ಮತಗಳ ಅಂತರದಲ್ಲಿ ಪರಾಭವಗೊಳ್ಳುತ್ತಾರೆ ಎಂಬ ಇತ್ಯಾದಿ ವಿಚಾರಗಳ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಎಸ್ .ರವಿ ಮತ್ತು ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಅವರು ಬೆಟ್ಟಿಂಗ್ ಆಡುವವರ ಪಾಲಿಗೆ ರೇಸ್ ಕುದುರೆಯಾಗಿದ್ದಾರೆ.
ಫಲಿತಾಂಶ ಬಂದಾಗ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಈಗ ಬೆಟ್ಟಿಂಗ್ ಆಡುವವರ ಪಾಲಿಗಂತೂ ಇವರ ಗೆಲ್ಲುವ ಫೇವರೆಟ್ ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ, ಮತಗಟ್ಟೆಯಲ್ಲಿ ಫಲಿತಾಂಶ ಭದ್ರವಾಗಿದ್ದರೂ ಬೆಟ್ಟಿಂಗ್ ಆಡುವವರು ಮಾತ್ರ ದೇವರ ಮೇಲೆ ಭಾರ ಹಾಕಿ ಹಣ ಕಟ್ಟುತ್ತಿದ್ದಾರೆ.