ಪಟ್ನಾ, (ಅ.20): ಬಿಹಾರದ ವಿಧಾನಸಭೆ ಚುನಾವಣೆಯ ರಂಗು ಕಾವೇರಿದೆ. ಇದೀಗ ಮತದಾರನನ್ನು ತಮ್ಮೆಡೆಗೆ ಸೆಳೆಯಲು ಏನೆನು ಸರ್ಕಸ್​ ಮಾಡಬೇಕೋ ಎಲ್ಲವನ್ನೂ ಮಾಡಲಾಗುತ್ತಿದೆ.

ಆದರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ಸ್ವಲ್ಪ ಡಿಫರೆಂಟ್​ ಆಗಿ ಮತಯಾಚಿಸಿ ಇದೀಗ ಸುದ್ದಿಯಾಗಿದ್ದಾರೆ. ಗಯಾ ಕ್ಷೇತ್ರದ ರಾಷ್ಟ್ರೀಯ ಉಲೆಮಾ ಕೌನ್ಸಿಲ್ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಪರ್ವೇಜ್ ಮನ್ಸೂರಿ ಎಂಬುವರು ಎಮ್ಮೆ ಸವಾರಿ ಮಾಡಿ, ಬೀದಿ ಬೀದಿಗಳಿಗೆ ತೆರಳಿ ಮತಯಾಚಿಸಿದ್ದಾರೆ.

ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ: ಟೈಮ್ಸ್ ನೌ ಸಮೀಕ್ಷೆ!

ಮತಯಾಚನೆಯೇನೋ ಡಿಫರೆಂಟ್​ ಆಗಿಯೇ ಇತ್ತು. ಆದರೆ ಈ ರೀತಿ ಮಾಡುವುದು ಪ್ರಾಣಿ ಹಿಂಸೆ ಎನ್ನುವ ಕಾರಣಕ್ಕೆ, ಮೊಹಮ್ಮದ್ ಪರ್ವೇಜ್ ವಿರುದ್ಧ ಪ್ರಾಣಿಗಳ ವಿರುದ್ಧ ಹಿಂಸೆ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಮಾತ್ರವಲ್ಲದೇ ಗುಂಪಾಗಿ ಜನರು ಬಂದು ಮತಯಾಚಿಸಿದ್ದ ಹಿನ್ನೆಲೆಯಲ್ಲಿ ಕೊವಿಡ್ 19 ಕಾಯ್ದೆ ಉಲ್ಲಂಘನೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೂ ಪ್ರಕರಣ ದಾಖಲಾಗಿದೆ.

ಚುನಾವಣಾ ಪ್ರಚಾರ ಮಾಡುತ್ತಾ ಸ್ವರಾಜ್ ಪುರಿ ರಸ್ತೆಯ ಗಾಂಧಿ ಮೈದಾನ ಬಳಿ ಬಂದ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಹಮ್ಮದ್ ವಿರುದ್ಧ ಐಪಿಸಿ ಸೆಕ್ಷನ್ 269, 270 ಹಾಗೂ ಪ್ರಾಣಿಗಳ ವಿರುದ್ಧ ಹಿಂಸೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಸಿಟಿ ಲೇನ್ ಠಾಣೆಯಲ್ಲಿ ಎಫ್‌ಐಆರ್ ಹಾಕಲಾಗಿದೆ. ಆದರೆ, ನಿನ್ನೆ ಸಂಜೆ ಜಾಮೀನು ಪಡೆದು ಠಾಣೆಯಿಂದ ಆತ ಹೊರ ಬಂದಿರುವುದಾಗಿ ತಿಳಿದುಬಂದಿದೆ.