ಪಟನಾ(ಅ.13): ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದಾಗಿ ಸಿ-ವೋಟರ್ಸ್‌ ಸಮೀಕ್ಷೆ ಭವಿಷ್ಯ ನುಡಿದಿದೆ.

ಒಟ್ಟಾರೆ 243 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 80 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟಾವಾಗಿದೆ. ಅಲ್ಲದೆ, ಸಿಎಂ ನಿತೀಶ್‌ ಕುಮಾರ್‌ ನಾಯಕತ್ವದ ಜೆಡಿಯು 70 ಕ್ಷೇತ್ರಗಳನ್ನು ಜಯಿಸಿಕೊಳ್ಳಲಿದೆ. ತನ್ಮೂಲಕ 243 ಸಂಖ್ಯಾಬಲದ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 160 ಸೀಟುಗಳು ಲಭಿಸಲಿದ್ದು, ನಿತೀಶ್‌ರ ಮುಖ್ಯಮಂತ್ರಿ ಸೀಟು ಭದ್ರವಾಗಿರಲಿದೆ ಎಂದು ಸಮೀಕ್ಷೆ ಹೇಳಿದೆ.

ಇನ್ನು ಪ್ರತಿಪಕ್ಷಗಳ ಮಹಾಮೈತ್ರಿಕೂಟದಲ್ಲಿರುವ ಕಾಂಗ್ರೆಸ್‌ಗೆ 15, ಲಾಲು ಪ್ರಸಾದ್‌ ಅನುಪಸ್ಥಿತಿಯಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಆರ್‌ಜೆಡಿಯು 76 ಕ್ಷೇತ್ರಗಳನ್ನಷ್ಟೇ ಜಯಿಸಲು ಸಾಧ್ಯವಾಗಲಿದೆ ಎಂದು ಸಿ-ವೋಟರ್ಸ್‌ ಸಮೀಕ್ಷೆ ಹೇಳಿದೆ.