Asianet Suvarna News Asianet Suvarna News

ಹುಬ್ಬಳ್ಳಿ ಕೇಸ್‌ ರದ್ದು ತುಷ್ಟೀಕರಣದ ರಾಜಕಾರಣ: ಜೆಡಿಎಸ್‌, ಬಿಜೆಪಿ ಆಕ್ರೋಶ

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದಿದ್ದ ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಸಂಬಂಧ ದಾಖಲಿಸಿದ್ದ 40ಕ್ಕೂ ಹೆಚ್ಚು ಕೇಸುಗಳನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಇದೀಗ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
 

Cancellation of Hubballi case is politics of appeasement JDS BJP angry gvd
Author
First Published Oct 14, 2024, 6:59 AM IST | Last Updated Oct 14, 2024, 6:59 AM IST

ಬೆಂಗಳೂರು (ಅ.14): ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದಿದ್ದ ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಸಂಬಂಧ ದಾಖಲಿಸಿದ್ದ 40ಕ್ಕೂ ಹೆಚ್ಚು ಕೇಸುಗಳನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಇದೀಗ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಈ ಗಲಭೆಗೆ ಸಂಬಂಧಿಸಿ ಬಿಜೆಪಿ ಸುಳ್ಳು ಪ್ರಕರಣ ದಾಖಲಿಸಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತಿತರ ಕಾಂಗ್ರೆಸ್‌ ನಾಯಕರು ಆರೋಪಿಸಿದರೆ, ಎನ್‌ಐಎ ತನಿಖೆ ನಡೆಯುತ್ತಿರುವಾಗಲೇ ಕೇಸ್‌ ಹಿಂಪಡೆಯಲು ಮುಂದಾಗಿರುವುದು ತುಷ್ಟೀಕರಣದ ರಾಜಕಾರಣ, ಇದರ ಹಿಂದೆ ಮತ ಬ್ಯಾಂಕ್‌ನ ದುರುದ್ದೇಶ ಅಡಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಪ್ರತಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ತಿರುಪತಿ ಮಾದರಿಯಲ್ಲಿ ಸವದತ್ತಿ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ಸುಳ್ಳು ಪ್ರಕರಣ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸಂಪುಟ ಉಪಸಮಿತಿ ಪರಿಶೀಲಿಸಿ ಸುಳ್ಳು ಪ್ರಕರಣ ಎಂದು ತಿಳಿಸಿತ್ತು. ಆ ವರದಿ ಸಚಿವ ಸಂಪುಟದ ಮುಂದೆ ಬಂದಿದ್ದು, ಅದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಕೋರ್ಟ್‌ ಅನುಮತಿ ನೀಡಿದರೆ ಪ್ರಕರಣ ಹಿಂಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಇದನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ದಾಖಲಿಸಿದೆ. 

ಈ ಪ್ರಕರಣದಲ್ಲಿ ಹೆಸರಿದ್ದವರ‍್ಯಾರೂ ಗಲಭೆಯಲ್ಲಿ ಭಾಗಿಯಾಗಿಯೇ ಇಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ. ಇನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕೂಡ ಸಚಿವ ಸಂಪುಟದ ಉಪ ಸಮಿತಿ ನಿರ್ಧಾರದ ಮೇಲೆ ಹಳೇಹುಬ್ಬಳ್ಳಿ ಗಲಭೆ ಸೇರಿ 42 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳಿಂದ ಇಂಥ ಎಷ್ಟೋ ಘಟನೆಗಳಾಗಿವೆ. ಆದರೆ ಅವುಗಳ ಬಗ್ಗೆ ಬಿಜೆಪಿ ನಾಯಕರು ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ-ಜೆಡಿಎಸ್‌ ಆಕ್ರೋಶ: ಹಳೇ ಹುಬ್ಬಳ್ಳಿ ಪ್ರಕರಣ ಹಿಂಪಡೆಯುವ ಸರ್ಕಾರದ ಕ್ರಮಕ್ಕೆ ಜೆಡಿಎಸ್‌-ಬಿಜೆಪಿ ನಾಯಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದರ ಹಿಂದೆ ಮತ ಬ್ಯಾಂಕ್‌ನ ದುರುದ್ದೇಶ ಅಡಗಿದೆ. ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಇಷ್ಟವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸರ್ಕಾರದ ಕ್ರಮದ ವಿರುದ್ಧ ತೀವ್ರ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಳೇ ಹುಬ್ಬಳ್ಳಿ ಪೊಲೀಸ್‌ ಸ್ಟೇಷನ್ ಮೇಲಿನ ದಾಳಿ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದೆ. 

ಆದರೂ ಏಕಾಏಕಿ ರಾಜ್ಯ ಸರ್ಕಾರ ಕೇಸ್‌ ವಾಪಸ್‌ ಪಡೆಯಲು ಮುಂದಾಗುವ ಮೂಲಕ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ, ರಾಜ್ಯದ ಮೇಲಿನ ದಾಳಿ. ಇದು ಗಂಭೀರ ಪ್ರಕರಣ. ಈ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಿಧ್ವಂಸಕ ಕೃತ್ಯ ನಡೆಸಿದ ೧೫೭ ಮಂದಿ ಮೇಲಿನ ರಾಷ್ಟ್ರದ್ರೋಹದ ಪ್ರಕರಣ ಹಿಂಪಡೆಯುವ ಮೂಲಕ ಅಪರಾಧಿಗಳ ರಕ್ಷಣೆಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ನೀಡಿದೆ ಎಂದಿದ್ದಾರೆ.

ಸುಳ್ಳು ಪ್ರಕರಣಗಳು, ಹೋರಾಟಗಳಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದರೆ ಅವುಗಳನ್ನು ಪರಿಶೀಲಿಸಲೆಂದೇ ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಆ ಉಪ ಸಮಿತಿ ಈ ಪ್ರಕರಣಗಳು ಸುಳ್ಳು ಎಂದು ಹೇಳಿದ್ದನ್ನು ಒಪ್ಪಿಕೊಂಡಿದ್ದೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ. ಇದರ ತನಿಖೆಯನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್‌ ಶೀಟ್ ಆಗಿದೆ. ಈ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ವಾಪಸ್‌ ಪಡೆಯಲು ಮುಂದಾಗುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಬಿಜೆಪಿ ಸರ್ಕಾರ ರಾಜಕೀಯ ಪ್ರೇರಿತವಾಗಿ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ದಾಖಲಿಸಿದೆ. ಪ್ರಕರಣದಲ್ಲಿ ಹೆಸರಿದ್ದವರ‍್ಯಾರೂ ಗಲಭೆಯಲ್ಲಿ ಭಾಗಿಯಾಗಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್, ಬಜರಂಗದಳದ ಮೇಲೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ದಾಖಲಾಗಿದ್ದ ಹಲವು ಪ್ರಕರಣ ಹಿಂಪಡೆದಿದ್ದಾರೆ.
- ಡಿ.ಕೆ.ಶಿವಕುಮಾ‌ರ್‌, ಉಪಮುಖ್ಯಮಂತ್ರಿ

ವಿಜಯದಶಮಿ ದಿನವೇ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ತೆರಿಗೆ ಸಮರ ಕರೆ

ಇದರ ಹಿಂದೆ ಮತ ಬ್ಯಾಂಕ್‌ನ ದುರುದ್ದೇಶ ಅಡಗಿದೆ. ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಸ್ವಾಸ್ಥ್ಯ ಕಾಪಾಡುವುದೇ ಇಷ್ಟವಿಲ್ಲ.
- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

Latest Videos
Follow Us:
Download App:
  • android
  • ios