ಬೆಂಗಳೂರು, (ಡಿ.6): ಅಂತೂ ಇಂತೂ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಇದೇ ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಖಚಿತವೆಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಘೋಷಿಸಿದ್ದಾರೆ.

"

ಸಚಿವ ಸಂಪುಟ ವಿಸ್ತರಣೆ ಈಗ ಬೇಡ. ಅದು ಇದೆ. ಇದು ಇದೆ ಎನ್ನುತ್ತಲೇ ಸರಿ ಸುಮಾರು ಏನಿಲ್ಲ ಅಂದ್ರೂ 10 ದಿನಾಂಕಗಳನ್ನ ಮುಂದೂಡಲಾಗಿದೆ. ಇದೀಗ ಅಧಿವೇಶನ ಬಳಿಕ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಮಾಡಲಾಗಿದೆ.

ಡಿಸೆಂಬರ್ 22 ರಂದು  ರಾಜ್ಯ ಸಂಪುಟ ವಿಸ್ತರಣೆ ಫಿಕ್ಸ್, ಯಾರಿಗೆ ಸ್ಥಾನ?

ಇದ್ರಿಂದ ಕಾಂಗ್ರೆಸ್ ಕೆಲ ಸಚಿವಾಕಾಂಕ್ಷಿಗಳು ಅಸಮಧಾನಗೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ನ ಹಿರಿಯ ನಾಯಕ ರಾಮಲಿಂಗರೆಡ್ಡಿ ಗರಂ ಆಗಿದ್ದಾರೆ.

ಡಿಸೆಂಬರ್ 22 ಕ್ಕೂ ಸಹ ಯಾವುದೇ ಸಂಪುಟ ವಿಸ್ತರಣೆ ಆಗೋದಿಲ್ಲ. ಯಾಕಂದ್ರೇ ಶೂನ್ಯ ಮಾಸ ನಡೆಯುತ್ತಿದೆ. ನನ್ನ ಅಭಿಪ್ರಾಯದಂತೆ ಎಂಪಿ ಎಲೆಕ್ಷನ್ ವರೆಗೂ ಯಾವುದೇ ರೀತಿ ಸಚಿವ ಸಂಪುಟ ವಿಸ್ತರಣೆ ಆಗೋದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಶಾಸಕರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಮಾಡುತ್ತೇವೆ ಮಾಡುತ್ತೇವೆ ಅಂತಾರೆ. ಸುಮ್ಮನೆ ಮಾಡೋದಿದ್ರೆ ಮಾಡಬೇಕು ಎಂದು ಸ್ವಪಕ್ಷದ ಹೈಕಮಾಂಡ್ ನಡೆಗೆ ಬೇಸರ ವ್ಯಕ್ತಪಡಿಸಿದರು.

ನಾನು ಇದು ವರೆಗೂ ಯಾವುದೇ ಸ್ಥಾನ‌ಮಾನ ಕೇಳಿ ಯಾರಿಗೂ ಕೇಳಿಲ್ಲ. ಹಾಗೇ ಸಚಿವ ಸಂಪುಟ ವಿಸ್ತರಣೆಗೂ ಅಧಿವೇಶನಕ್ಕೂ ಯಾವುದೇ ಸಂಬಂಧ ಇಲ್ಲ. ಎಲ್ಲರೂ ಹಾಜರಾಗುತ್ತಾರೆ ಎಂದರು.

ಸಂಪುಟದಲ್ಲಿ ಒಟ್ಟು 8 ಸ್ಥಾನಗಳು ಖಾಲಿ ಇವೆ. ಇದರಲ್ಲಿ 6 ಸ್ಥಾನ ಕಾಂಗ್ರೆಸ್ ಪಾಲಿನದ್ದಾಗಿದ್ದರೆ ಇನ್ನುಳಿದ ಎರಡು ಸ್ಥಾನ ಜೆಡಿಎಸ್‌ಗೆ ಸೇರಿದ್ದು. ಜೆಡಿಎಸ್ ನಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೂ ಕಾಂಗ್ರೆಸ್‌ನಲ್ಲಿ 6 ಸ್ಥಾನಗಳಿಗೆ ಭಾರೀ ಪೈಪೋಟಿ ಇದೆ.