ಗ್ಯಾರಂಟಿ ಯೋಜನೆ ಜಾರಿಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್
ಬಿಜೆಪಿಯವರು ಟೀಕೆ ಮಾಡಿದಷ್ಟೂ ನಮ್ಮ ಗ್ಯಾರಂಟಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಸುತ್ತೇವೆ.
ಬೆಂಗಳೂರು (ಮೇ.29): ‘ಬಿಜೆಪಿಯವರು ಟೀಕೆ ಮಾಡಿದಷ್ಟೂ ನಮ್ಮ ಗ್ಯಾರಂಟಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಜೂನ್ 1ರಂದು ಸಚಿವ ಸಂಪುಟ ಸಭೆ ನಡೆಸುತ್ತೇವೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅಲ್ಲದೆ, ‘ನಮಗೆ ಹೇಳುವ ಮೊದಲು ಬಿಜೆಪಿಯವರು ನೀಡಿರುವ ಭರವಸೆಯಂತೆ ಲೋಕಸಭೆ ಚುನಾವಣೆಗೆ ಮೊದಲು ಎಲ್ಲರ ಖಾತೆಗೆ 15 ಲಕ್ಷ ರು. ಹಣ ಹಾಕಲಿ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ 1 ಲಕ್ಷ ರು. ಸಾಲ ಮನ್ನಾ, 10 ಗಂಟೆ ವಿದ್ಯುತ್ ಯಾಕೆ ನೀಡಿಲ್ಲ ಎಂದು ಉತ್ತರಿಸಲಿ’ ಎಂದು ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾಡಲು ಬೇರೆ ಕೆಲಸ ಇಲ್ಲದೆ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ನಮ್ಮ ಸರ್ಕಾರ 15 ದಿನಗಳ ಕೂಸು. ನಾವೆಲ್ಲವನ್ನೂ ನಿಯಮಬದ್ಧವಾಗಿ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ನಾವು ಬಸವಣ್ಣ ಹಾಗೂ ಕುವೆಂಪು ಅವರ ನಾಡಿನವರು. ಕೊಟ್ಟಮಾತಿಗೆ ಬದ್ಧವಾಗಿ ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.
ಸತೀಶ್ ಡಿಸಿಎಂ ಅಲ್ಲ, ಸಿಎಂ ಆಗಿಯೇ ಆಗ್ತಾರೆ: ಲಕ್ಷ್ಮೀ ಹೆಬ್ಬಾಳಕರ್
ಮಾರ್ಗಸೂಚಿ ಬೇಕು: ನೇರವಾಗಿ ಯೋಜನೆ ಅನುಷ್ಠಾನ ಮಾಡಲು ಆಗುವುದಿಲ್ಲ. ಕೆಲವು ಸಿದ್ಧತೆಗಳು ಬೇಕಿರುತ್ತವೆ. ಉದಾ: ಗೃಹ ಲಕ್ಷ್ಮೇ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರು. ನೀಡುತ್ತೇವೆ ಎಂದು ಹೇಳಿದ್ದೇವೆ. ಕೆಲವು ಮನೆಯಲ್ಲಿ ವ್ಯಕ್ತಿಯ ಪತ್ನಿ ಹಾಗೂ ತಾಯಿ ಇಬ್ಬರೂ ಇರುತ್ತಾರೆ. ಪತ್ನಿ ಖಾತೆಗೆ ಹಣ ಹಾಕಬೇಕೆ ಅಥವಾ ತಾಯಿಯ ಖಾತೆಗೆ ಹಣ ಹಾಕಬೇಕೆ ಎಂಬುದು ಮೊದಲು ತೀರ್ಮಾನ ಆಗಬೇಕು. ಅವರಿಗೆ ಬ್ಯಾಂಕ್ ಖಾತೆ ಇಲ್ಲದಿದ್ದರೆ ಮಾಡಿಸಬೇಕು. ಗೌರವವಾಗಿ ಯೋಜನೆ ತಲುಪಿಸಬೇಕು ಎಂದು ವಿವರಿಸಿದರು.
ವಿದ್ಯುತ್ ಬಿಲ್ 200 ಯುನಿಟ್‌ವರೆಗೆ ಕಟ್ಟಬೇಕಿಲ್ಲ ಎಂದು ಹೇಳಿದ್ದೆವು. ಬಾಡಿಗೆ ಮನೆಯಲ್ಲಿದ್ದರೂ ಅವರಿಗೆ ಪರಿಶೀಲಿಸಿ ಏನಾದರೂ ಅನುಕೂಲ ಮಾಡಬಹುದು. ಇವೆಲ್ಲವನ್ನೂ ಚರ್ಚೆ ಮಾಡಲು ಜೂ.1ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಎಲ್ಲವನ್ನೂ ಚರ್ಚಿಸಿ ಅನುಷ್ಠಾನ ಮಾಡುತ್ತೇವೆ ಎಂದರು.
ಅಯೋಧ್ಯೆ ರಾಮ ವಿಗ್ರಹ ಕೆತ್ತನೆಗೆ ರಾಜ್ಯದ ಇಬ್ಬರು: ಏಕಕಾಲಕ್ಕೆ 3 ಪ್ರತಿಮೆಗಳು ಸಿದ್ಧ
ಡಿಕೆಶಿ ಭೇಟಿಯಾದ ಟಿ.ಬಿ.ಜಯಚಂದ್ರ: ಇದಕ್ಕೂ ಮೊದಲು ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಸಚಿವ ಸ್ಥಾನ ವಂಚಿತ ಹಿರಿಯ ಸದಸ್ಯ ಟಿ.ಬಿ. ಜಯಂದ್ರ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ಕುಂಚಿಟಿಗ ಒಕ್ಕಲಿಗ ಮುಖಂಡರೊಂದಿಗೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಜಯಚಂದ್ರ ತಮಗೆ ಆಗಿರುವ ಅನ್ಯಾಯ ತೋಡಿಕೊಂಡರು ಎಂದು ತಿಳಿದುಬಂದಿದೆ.