ಬೆಂಗಳೂರು(ಅ.31): ವಿಧಾನಪರಿಷತ್‌ ಚುನಾವಣೆ ಮತ್ತು ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸಚಿವ ಸಂಪುಟ ವಿಸ್ತರಣೆ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದ್ದು, ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ಕುರಿತು ನಿರ್ಣಯ ಕೈಗೊಳ್ಳಲಿದ್ದಾರೆ.

"

ಉಪಚುನಾವಣೆ ತರುವಾಯ ದೆಹಲಿಗೆ ತೆರಳುತ್ತೇನೆ. ಅಲ್ಲಿಗೆ ಹೋಗಿ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ತೆರಳುವ ಮೊದಲು ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಪಚುನಾವಣೆ ಬಳಿಕ ಎಲ್ಲವೂ ಬದಲಾವಣೆಯಾಗುವುದು ನಿಶ್ಚಿತ. ಸಂಪುಟ ವಿಸ್ತರಣೆ ಸಂಬಂಧ ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗಿ ವರಿಷ್ಠರ ಜತೆ ಮಾತುಕತೆ ನಡೆಸಿ ಬರುತ್ತೇನೆ. ತರುವಾಯ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಡಿಸಿಎಂ ಪರಮೇಶ್ವರ್‌ ಅಣ್ಣನ ಮಗಳ ಹೆಸರಲ್ಲಿ ವಂಚಿಸುತ್ತಿದ್ದವಳ ಬಂಧನ

ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸುತ್ತದೆ. ಹೀಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮುಖಭಂಗವಾಗುತ್ತದೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಯಾರ ಬಗ್ಗೆಯೂ ಒಂದೇ ಒಂದು ಶಬ್ದ ಬಳಸಿಲ್ಲ, ಯಾರ ಹೆಸರೂ ಬಳಸಿಲ್ಲ. ಚುನಾವಣೆ ಮುಗಿದ ಮೇಲೆ ಅವರೇ ಉತ್ತರ ಕೊಡಲಿ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಉಪಚುನಾವಣೆಯ ಪ್ರಚಾರಕ್ಕೆ ನಾನು ಹೋಗಬೇಕು ಎಂಬ ಉದ್ದೇಶ ಮೊದಲು ಇರಲಿಲ್ಲ. ಆದರೆ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿಯಾಗಿ ನಾನು ಹೋಗದಿದ್ದರೆ ತಪ್ಪಾಗುತ್ತದೆ. ಹೀಗಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಶಿರಾ ಚುನಾವಣೆ ಪ್ರಚಾರದ ಬಳಿಕ ಶನಿವಾರ ಆರ್‌.ಆರ್‌.ನಗರದಲ್ಲಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.