ಬೆಂಗಳೂರು(ಅ.31): ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರ ಅಣ್ಣನ ಮಗಳ ಸೋಗಿನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮಹಿಳೆಯೊಬ್ಬಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

"

ಜ್ಞಾನಗಂಗಾ ಲೇಔಟ್‌ ನಿವಾಸಿ ಪಲ್ಲವಿ (32) ಬಂಧಿತೆ. ಆರೋಪಿತೆ ಇದೇ ರೀತಿ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದು ವಿಚಾರಣೆ ಬೆಳಕಿಗೆ ಬಂದಿದೆ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ. ನಾಗದೇವನಹಳ್ಳಿ ನಿವಾಸಿ ಕ್ಯಾಬ್‌ ಚಾಲಕ ಯೋಗೇಶ್‌ ಎಂಬುವರಿಗೆ ಮಹಿಳೆ ತಾನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರ ಅಣ್ಣನ ಮಗಳಾಗಿದ್ದು, ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಿರುದ್ಯೋಗಿಗಳು ಸ್ವಂತ ಉದ್ಯೋಗ ಹಾಗೂ ವ್ಯವಹಾರ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ 10 ಲಕ್ಷ ಸಾಲ ಕೊಡಿಸುತ್ತೇನೆ ಎಂದು ರಾಜಶೇಖರ್‌ಗೆ ಹೇಳಿಕೊಂಡಿದ್ದಳು.

ಮೇ ತಿಂಗಳನಲ್ಲಿ ಕಾರು ಮಾಲೀಕ ರಾಜಶೇಖರ್‌ಗೆ ಕರೆ ಮಾಡಿದ್ದ ಪಲ್ಲವಿ, ಎರಡು ದಿನದ ಮಟ್ಟಿಗೆ ಕಾರು ಬಾಡಿಗೆಗೆ ಬೇಕು ಎಂದಿದ್ದಳು. ಹೀಗಾಗಿ ಪಲ್ಲವಿಯನ್ನು ಕಾರು ಚಾಲಕ ಯೋಗೇಶ್‌ ಸಂಪರ್ಕಿಸಿದ್ದ. ಆಕೆಯನ್ನು ಬೆಂಗಳೂರು, ತುಮಕೂರಿಗೆ ಕರೆದೊಯ್ದಿದ್ದ. ಎರಡು ದಿನದ ಬಾಡಿಗೆ ಹಣ ಕೊಟ್ಟು, ತಾನು ಕರೆದಾಗ ಬರುವಂತೆ ಯೋಗೇಶ್‌ಗೆ ಸೂಚಿಸಿದ್ದಳು. ಹೀಗೆ ಹಲವು ಬಾರಿ ಬಾಡಿಗೆಗೆ ಕರೆಯಿಸಿಕೊಂಡು ಹಣ ನೀಡಿರಲಿಲ್ಲ. ಬಾಕಿ ಹಣ ಕೇಳಿದಾಗ ಸಬೂಬು ಹೇಳತೊಡಗಿದ್ದಳು.

ಮೇಕಪ್ ರಾಣಿ ಆಂಟಿ ಪೂಜಾ..ಬ್ರಹ್ಮಚಾರಿ ಸೋಮು.. ಮಂಡ್ಯದ ಭಲೇ ಜೋಡಿ!

ಇದಾದ ಕೆಲ ದಿನಗಳ ಬಳಿಕ, ‘ನೀನು ತುಂಬ ಇಷ್ಟ. ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಯೋಗೇಶ್‌ಗೆ ಸಂದೇಶ ಕಳುಹಿಸಿದ್ದಳು. ಇದಕ್ಕೆ ಯೋಗೇಶ್‌ ನಿರಾಕರಿಸಿ, ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಆಕೆ ವಿವಾಹವಾಗದಿದ್ದಲ್ಲಿ ಅತ್ಯಾಚಾರ ಎಸಗಿರುವುದಾಗಿ ದೂರು ಕೊಡುವುದಾಗಿ ಯೋಗೇಶ್‌ಗೆ ಬೆದರಿಕೆವೊಡ್ಡಿದ್ದಳು. ಈಕೆ ವರ್ತನೆಯಿಂದ ಅನುಮಾನಗೊಂಡ ಕಾರು ಚಾಲಕ ಯೋಗೇಶ್‌ ಮತ್ತು ಜರ್ನಾದನ್‌ ಎಂಬುವರು ನೇರವಾಗಿ ಆಕೆಯನ್ನು ಸದಾಶಿವನಗರದಲ್ಲಿರುವ ಡಾ. ಜಿ.ಪರಮೇಶ್ವರ್‌ ನಿವಾಸಕ್ಕೆ ಕರೆದೊಯ್ದಿದ್ದರು. ಈಕೆಯನ್ನು ನೋಡಿದ ಪರಮೇಶ್ವರ್‌ ಪತ್ನಿ ‘ಈಕೆಯನ್ನು ನಾನು ನೋಡಿಲ್ಲ’ ಎಂದಿದ್ದರು. ಇಷ್ಟಕ್ಕೂ ಸುಮ್ಮನಾಗದೇ ಆಕೆಯನ್ನು ತುಮಕೂರಿನಲ್ಲಿದ್ದ ಪರಮೇಶ್ವರ್‌ ಬಳಿ ಕರೆದೊಯ್ಯಲಾಗಿತ್ತು. ‘ಈಕೆ ನನ್ನ ಅಣ್ಣನ ಮಗಳಲ್ಲ, ಕೂಡಲೇ ಪೊಲೀಸರಿಗೆ ಒಪ್ಪಿಸಿ, ದೂರು ದಾಖಲಿಸಿ’ ಎಂದು ಪರಮೇಶ್ವರ್‌ ಸೂಚಿಸಿದ್ದರು.

ಬಳಿಕ ಯುವತಿಯನ್ನು ಪೊಲೀಸರ ಸುರ್ಪದಿಗೆ ಒಪ್ಪಿಸಿದ್ದಾರೆ. ಯುವಕರನ್ನು ಪುಸಲಾಯಿಸಿ, ಹಣ ಸುಲಿಗೆ ಮಾಡುವುದು ಹಾಗೂ ಮುದ್ರಾ ಹೆಸರಿನಲ್ಲಿ ಹಲವು ಮಂದಿಗೆ ವಂಚನೆ ಮಾಡಿದ್ದಾಳೆ. ಈ ಬಗ್ಗೆ ವಂಚನೆಗೊಳಗಾದವರು ದೂರು ನೀಡಬಹುದು ಎಂದು ಪೊಲೀಸರು ಮನವಿ ಮಾಡಿದ್ದಾರೆ.