ಮಾಜಿ ಸಚಿವ ಬೈರತಿ ಬಸರಾಜ್ ಬೆಂಬಲಿಗರಿಂದ ಸರ್ಕಾರಿ ಶಾಲೆ ಜಾಗ ಒತ್ತುವರಿ; ಶಿಕ್ಷಣ ಸಚಿವರಿಗೆ ದೂರು ಕೊಟ್ಟ ಎಎಪಿ
ಮಾಜಿ ಸಚಿವ ಬೈರತಿ ಬಸವರಾಜ್ ಬೆಂಬಲಿಗರಿಂದ ಕೆ.ಆರ್.ಪುರಂ ಸರ್ಕಾರಿ ಶಾಲೆಯ ಜಾಗ ಒತ್ತುವರಿ ಮಾಡಿಕೊಂಡಿದ್ದು, ಈ ಜಾಗ ಸಂರಕ್ಷಣೆ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಎಎಪಿ ಮುಖಂಡರು ದೂರು ನೀಡಿದ್ದಾರೆ.
ಬೆಂಗಳೂರು (ಜು.31): ಬೆಂಗಳೂರಿನ ಕೆಆರ್ ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭಟ್ಟರಹಳ್ಳಿ ಸರ್ವೆ ನಂ.19ರಲ್ಲಿ ಸರ್ಕಾರಿ ಶಾಲೆಗೆ ಸೇರಿದ 6 ಎಕರೆ 17 ಗುಂಟೆ ಜಮೀನು ಒತ್ತುವರಿಯಾಗಿದ್ದು, ಸರ್ಕಾರ ಅದನ್ನು ರಕ್ಷಣೆ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಕಳೆದ ಆರು ತಿಂಗಳಿನಿಂದ ಒತ್ತುವರಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ, ಮಾಜಿ ಸಚಿವ ಭೈರತಿ ಬಸವರಾಜ್ ರವರ ಪಟಾಲಮ್ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಖುದ್ದಾಗಿ ನಾವೇ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದೇವೆ, ಸ್ಥಳೀಯರನ್ನು ಮಾತನಾಡಿಸಿದಾಗ ಬೆಂಗಳೂರು-ಕೋಲಾರ ಹೆದ್ದಾರಿ ಪಕ್ಕದಲ್ಲೇ ಇರುವ ನೂರಾರು ಕೋಟಿ ಬೆಲೆ ಬಾಳುವ ಶಾಲೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿರುವುದು ಪತ್ತೆಯಾಗಿದೆ. 2020ರವರೆಗೂ ಪಹಣಿಯಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ್ದು ಎಂದು ತೋರಿಸುತ್ತಿದೆ. ಆದರೆ, ಈಗ 50 ವರ್ಷಗಳ ಹಿಂದೆ ಶಾಲೆಗಾಗಿ ಈ ಭೂಮಿಯನ್ನು ದಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವಾಡಿಕೆಗಿಂತ ಶೇ.24 ಹೆಚ್ಚು ಮಳೆ: 48 ಜನರ ಸಾವು, 46 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ!
ಇನ್ನು ಶಾಲೆ ನಿರ್ಮಾಣಕ್ಕಾಗಿ ಕೊಟ್ಟಿರುವ ಭೂಮಿಯನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಲೇಔಟ್ ಮಾಡಲು ಹೊರಟಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರಿಗೆ ಸರ್ಕಾರಿ ಆಸ್ತಿ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಕೂಡಲೇ ಅಡ್ವೊಕೇಟ್ ಜನರಲ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಸರ್ಕಾರಿ ಶಾಲೆಯ ಜಾಗ ವಾಪಸ್ ಪಡೆಯಬೇಕು. ಅಲ್ಲೊಂದು ಮಾದರಿ ಶಾಲೆ ನಿರ್ಮಾಣ ಆಗುವವರೆಗೂ ನಮ್ಮ ಆಮ್ ಆದ್ಮಿ ಪಕ್ಷ ಹೋರಾಟ ಮುಂದುವರೆಸುತ್ತದೆ ಎಂದರು.
ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಕುರಿ ಮಾಂಸ, ನಾಯಿ ಮಾಂಸವಲ್ಲ; ಆಹಾರ ಇಲಾಖೆ ಪರೀಕ್ಷಾ ವರದಿ ಬಹಿರಂಗ!
ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಮಾತನಾಡಿ, ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇರುವುದರಿಂದ, ಭೂಗಳ್ಳರ ಹಾವಳಿ ಮಿತಿ ಮೀರಿದೆ. ಬೆಂಗಳೂರು ನಗರ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು, ಕಂದಾಯ ಇಲಾಖೆ, ತಹಶೀಲ್ದಾರ್ ಸರ್ಕಾರಿ ಜಾಗಗಳ ರಕ್ಷಣೆ ಮಾಡಬೇಕು. 50 ವರ್ಷಗಳ ಹಿಂದೆ ಶಾಲೆಗಾಗಿ ದಾನ ಮಾಡಿದ ಜಮೀನಿಗೆ ಈಗ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸುವ ಸಂಚು ಮಾಡಿದ್ದಾರೆ. ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅಕ್ರಮವನ್ನು ಬಯಲುಮಾಡಲು ಹೊರಟ ಆಮ್ ಆದ್ಮಿ ಪಾರ್ಟಿ ಮುಖಂಡ ದಿಲೀಪ್ ಅವರಿಗೆ ಜೀವ ಬೆದರಿಕೆ ಹಾಕುವುದು, ಸುಳ್ಳು ಕೇಸ್ ಹಾಕಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ, ಅನ್ಯಾಯದ ವಿರುದ್ಧ ಆಮ್ ಆದ್ಮಿ ಪಾರ್ಟಿ ಹೋರಾಟ ನಡೆಯಲಿದೆ ಎಂದರು.