ರಾಜ್ಯದಲ್ಲಿ ವಾಡಿಕೆಗಿಂತ ಶೇ.24 ಹೆಚ್ಚು ಮಳೆ: 48 ಜನರ ಸಾವು, 46 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ!
ರಾಜ್ಯದಲ್ಲಿ ವಾಡಿಕೆಗಿಂತ ಶೇ.24 ಹೆಚ್ಚು ಮಳೆಯಾಗಿದ್ದು, ಈವರೆಗೆ 48 ಜನರು ಸಾವನ್ನಪ್ಪಿದ್ದು, 46 ಸಾವಿರ ಹೆಕ್ಟೇರ್ ಕೃಷಿ ಬೆಳೆ ನಷ್ಟವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಕೊಡಗು (ಜು.31): ರಾಜ್ಯದಲ್ಲಿ ವಾರ್ಷಿಕ ವಾಡಿಕೆಗಿಂದ ಜುಲೈ ಅಂತ್ಯಕ್ಕೆ ಶೇ.24ರಷ್ಟು ಹೆಚ್ಚಿನ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿದಿವೆ. ನಿರಂತರ ಮಳೆಯಿಂದಾದ ಪ್ರವಾಹ ಪರಿಸ್ಥಿತಿಯಿಂದ ರಾಜ್ಯದಲ್ಲಿ ಬರೋಬ್ಬರಿ 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ನಷ್ಟವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಶಾಲನಗರದ ತಾಲ್ಲೂಕಿನ ಅತ್ತೂರಿನಲ್ಲಿ ಮನೆ ಕಳೆದುಕೊಂಡಿದ್ದ ಕನ್ನಿಕೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಈ ವರ್ಷದ ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ 24 ರಷ್ಟು ಹೆಚ್ಚು ಮಳೆಯಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ 25 ರಷ್ಟು ಹೆಚ್ಚು ಮಳೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ದುರಂತಗಳು ಎದುರಾಗಿವೆ ಎಂದು ತಿಳಿಸಿದರು.
ಮೈಲಾರಲಿಂಗೇಶ್ವರನ ಕಾರ್ಣಿಕ ಸಂಪಾಯಿತಲೇ ಪರಾಕ್ ಭವಿಷ್ಯವಾಣಿ ನಿಜವಾಯ್ತು
ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ 46 ಸಾವಿರ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಇದುವರೆಗೆ ನಷ್ಟವಾಗಿವೆ. ಮಳೆಯಿಂದ ವಿವಿಧ ರೀತಿಯಲ್ಲಿ 48 ಜನರು ಮೃತಪಟ್ಟಿದ್ದಾರೆ. ರಸ್ತೆ ಮತ್ತು ಮನೆಗಳಿಗೆ ಅಪಾಯ ಹಾನಿಯಾಗಿದೆ. ಜನರಿಗೆ ಮನೆಗೆ ಹಾನಿಗೆ ಈಗ ಕೊಡುತ್ತಿರುವ ಪರಿಹಾರವೇ ಅಂತಿಮ ಅಲ್ಲ. ಪರಿಹಾರದ ಜೊತೆಗೆ ಮನೆಯನ್ನು ಕಟ್ಟಿಕೊಡಲಾಗುವುದು. ಎನ್ ಡಿಆರ್ ಎಫ್ ಪರಿಹಾರವೂ ಸೇರಿದರೆ ಉತ್ತಮ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಆಗಲಿದೆ. ಈ ಕುರಿತು ವಾರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಮತ್ತೊಂದೆಡೆ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಂಲೆಯಾಗುತ್ತೆ ಅಂತ ಮುನ್ಸೂಚನೆ ಇತ್ತು. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕೊಡಗು ಹಾಗೂ ಚಿಕ್ಕಮಗಳೂರುಗಳಲ್ಲಿ ಎನ್ ಡಿಆರ್ ಎಫ್ ತಂಡ ನಿಯೋಜಿಸಲಾಗಿದೆ. ಇದರ ನಡುವೆ ಮಲೆನಾಡು ಪ್ರದೇಶಗಳಲ್ಲಿ ಹಾನಿಯಾಗುತ್ತಿವೆ. ಅಂತಹ ಪ್ರದೇಶಗಳಿಗೆ ಸ್ವತಃ ಭೇಟಿ ನೀಡುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದಾರೆ. ರಸ್ತೆ ಹಾಳಾಗಿರುವ ಪ್ರದೇಶಗಳಲ್ಲಿ ಅವುಗಳನ್ನು ಸರಿ ಮಾಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ಜಿಎಸ್ಐ ಕಡೆಯಿಂದ ಗುಡ್ಡ ಕುಸಿಯುವ ಮುನ್ಸೂಚನೆ ಸಿಗುತ್ತಿದ್ದಂತೆ ಗುಡ್ಡ ಕುಸಿಯುವ ಕಡೆಗೆ ತಡೆಗೋಡೆ ನಿರ್ಮಿಸಲು ಚಿಂತಿಸಲಾಗಿದೆ. ಇದಕ್ಕಾಗಿ 300 ಕೋಟಿ ರೂ. ಅನುದಾನ ನೀಡಲು ಚಿಂತಿಸಲಾಗಿದೆ. ಆದಷ್ಟು ಶೀಘ್ರವಾಗಿ ಕಾಮಗಾರಿ ಮಾಡಲಾಗುವುದು ಎಂದರು.
ಕಣ್ಣಮುಂದೆ ಹೆಂಡ್ತಿ, ಮೊಮ್ಮಗ ಕೊಚ್ಚಿಕೊಂಡು ಹೋಗ್ತಿದ್ದರೂ ರಕ್ಷಿಸೋಕೆ ಆಗಲಿಲ್ಲ; ವಯನಾಡ್‌ನಲ್ಲಿ ಕನ್ನಡಿಗನ ಅಳಲು
ವೈನಾಡಿನಲ್ಲಿ ಗುಡ್ಡ ಕುಸಿದು ದುರಂತ ಪ್ರಕರಣದ ಬಗ್ಗೆ ಮಾತನಾಡಿ, ಇದರಿಂದ ನಾವು ಸಾಕಷ್ಟು ಎಚ್ಚೆತ್ತುಕೊಳ್ಳಬೇಕಾಗಿದೆ. ಬೆಟ್ಟಗುಡ್ಡಗಳಲ್ಲಿ ಬಡಾವಣೆಗಳ ನಿರ್ಮಿಸಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ನಾವು ಏನೆಲ್ಲಾ ಮಾಡುತ್ತಿದ್ದೇವೆ. ನಮ್ಮ ಆಸೆಗಳಿಗೆ ನಾವು ಕಡಿವಾಣ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕಾಲಿಗೆ ನಾವೇ ಕೊಡಲಿಪೆಟ್ಟು ಹಾಕಿಕೊಂಡಂತೆ. ನಾವು ಪರಿಸರದ ಬಗ್ಗೆ ಎಚ್ಚರವಹಿಸಬೇಕು. ಜಿಲ್ಲಾಧಿಕಾರಿಗಳಿಗೆ ನಿಷ್ಠೂರವಾಗಿ ಸೂಚಿಸಿದ್ದೇನೆ. ಎಲ್ಲಿ ದುರ್ಘಟನೆ ಆಗುತ್ತೆ ಎನ್ನುವ ಅಂದಾಜಿದ್ದರೆ ಅಲ್ಲಿಂದ ಜನರನ್ನು ಸ್ಥಳಾಂತರಿಸಬೇಕು. ಜನರು ವಿರೋಧ ಮಾಡಿದರೂ ಅದಕ್ಕೆ ತಲೆಬಾಗಬಾರದು. ನಾಳೆ ದುರಂತ ಆದರೆ ಸರ್ಕಾರವೂ ಇದಕ್ಕೆ ಜವಾಬ್ದಾರಿ ಆಗಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿರುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಜಿಲ್ಲಾಡಳಿತಗಳು ಗಮನಹರಿಸಬೇಕು. ಕೂಡಲೇ ಅಪಾಯದ ಮುನ್ಸೂಚನೆಗಳು ಸಿಕ್ಕಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಈಗಾಗಲೇ ವಿಜ್ಞಾನಿಗಳ ಸೂಚನೆ ಮತ್ತು ಸ್ಥಳೀಯರ ಅಂದಾಜಿನಂತೆ ಜನರನ್ನು ಸ್ಥಳಾಂತರಿಸಬೇಕು. ಗುಡ್ಡಗಳ ತುದಿಯಲ್ಲಿ ಬದುಕುತ್ತಿದ್ದರೆ ಅವರನ್ನು ಸ್ಥಳಾಂತರಿಸಬೇಕು. ಜನರ ಪ್ರಾಣ ಓದ ಮೇಲೆ ಪರಿಹಾರ ನೀಡಿದರೆ ಅದು ಸರಿಯಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತಗಳು ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.