ವಿಜಯೇಂದ್ರ ಬೆಂಗಾವಲಾಗಿ ಕೆಲಸ ಮಾಡುವೆ: ನಳಿನ್ ಕುಮಾರ್ ಕಟೀಲ್
ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬೆಂಗಾವಲಾಗಿ ಕೆಲಸ ಮಾಡುತ್ತೇನೆ ಎಂದು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬೆಂಗಳೂರು (ನ.16): ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬೆಂಗಾವಲಾಗಿ ಕೆಲಸ ಮಾಡುತ್ತೇನೆ ಎಂದು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಅವರು, ನಾಲ್ಕು ವರ್ಷಗಳ ಕಾಲ ಪಕ್ಷವನ್ನು ಯಶಸ್ವಿಯಾಗಿ ನಿಭಾಯಿಸಿದ ಸಮಾಧಾನ ನನಗಿದೆ. ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡಲಾಗುವುದು.
ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಕ್ಷದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿತ್ತು, ಇದನ್ನು ನಿಸ್ವಾರ್ಥವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆಂಬ ತೃಪ್ತಿಯಿದೆ ಎಂದರು. ರಾಜ್ಯಾಧ್ಯಕ್ಷನಾಗಿ ಕೆಲಸ ನಿರ್ವಹಿಸಿದ ವೇಳೆ ನನಗೆ ಸಹಕಾರ ನೀಡಿದಂತೆ ವಿಜಯೇಂದ್ರ ಅವರಿಗೂ ಸಹಕಾರ ನೀಡಬೇಕು ಎಂದು ಕೋರಿದರು. ನಾಲ್ಕು ವರ್ಷ ಮೂರು ತಿಂಗಳ ಕಾಲ ಅಧ್ಯಕ್ಷನಾಗಿ 18 ಬಾರಿ ರಾಜ್ಯದ ಪ್ರವಾಸ ಕೈಗೊಂಡಿದ್ದೇನೆ. ಎಲ್ಲರೂ ಜತೆಗೂಡಿ ವಿಜಯೇಂದ್ರ ಅವರಿಗೆ ಶಕ್ತಿ ತುಂಬಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿಯನ್ನು ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.
ಪಕ್ಷದ ಸಂಘಟನೆಗಾಗಿ ಶ್ರದ್ಧೆಯಿಂದ ದುಡಿದಿದ್ದೇನೆ: ನಿರ್ಗಮಿತ ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್
ಬಿಜೆಪಿ ಅಧಿಕಾರಕ್ಕೆ ತರಲು ವಿಜಯೇಂದ್ರ ಜೊತೆ ಪ್ರವಾಸ: ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ಎಸ್.ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮತ್ತು ವಿಜಯೇಂದ್ರ ಜೊತೆಯಾಗಿಯೇ ಪಕ್ಷವನ್ನು ಮರಳಿ ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದು ನಿರ್ಗಮನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನಮ್ಮ ಜತೆ ಪ್ರವಾಸ ಮಾಡುತ್ತಿದ್ದವರು. ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿಯೂ ಓಡಾಟ ನಡೆಸಿದ ಅನುಭವಿ.
ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಸಂಭವ: ಸಿದ್ದರಾಮಯ್ಯ ಭವಿಷ್ಯ
ಅವರು ಉತ್ತಮ ರೀತಿಯಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತಾರೆ. ನಾನೂ ಅವರ ಜತೆಯಲ್ಲಿ ರಾಜ್ಯ ಓಡಾಟ ನಡೆಸುತ್ತೇವೆ ಎಂದಿದ್ದಾರೆ. ವಿಜಯೇಂದ್ರ ಆಯ್ಕೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳು ಕಂಡುಬರುತ್ತಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಈ ಎಲ್ಲದರ ವಿರುದ್ಧ ಹೋರಾಟ ಕೈಗೆತ್ತಿಕೊಂಡು ಪಾರ್ಟಿಯನ್ನು ತಳಮಟ್ಟದಿಂದ ಮತ್ತೆ ಸಂಘಟನೆ ಮಾಡುವ ಶಕ್ತಿ ವಿಜಯೇಂದ್ರಗೆ ಇದೆ. ಕಳೆದ ನಾಲ್ಕು ವರ್ಷ ಅವಧಿಯಲ್ಲಿ ರಾಜ್ಯಧ್ಯಕ್ಷನಾಗಿ ತೃಪ್ತಿ ಇದೆ ಎಂದರು. ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಾ ಎಂಬ ಪ್ರಶ್ನೆಗೆ ನಳಿನ್ ಕುಮಾರ್ ನಕ್ಕು ಸುಮ್ಮನಾದರು.