Asianet Suvarna News Asianet Suvarna News

3ನೇ ಬಾರಿ ಮೋದಿ ಪ್ರಧಾನಿಯಾಗಲು ಕುರುಡುಮಲೆ ಗಣಪತಿಗೆ ವಿಜಯೇಂದ್ರ ವಿಶೇಷ ಪೂಜೆ

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸಬೇಕೆಂದು ಕುರುಡುಮಲೆಯ ಗಣಪತಿಗೆ ಪ್ರಾರ್ಥನೆ ಸಲ್ಲಿಸಿರುವುದಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

BY Vijayendra special pooja to Kurudumale Ganapati for Modi to become PM for the 3rd time gvd
Author
First Published Nov 16, 2023, 5:43 AM IST

ಕೋಲಾರ (ನ.16): ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸಬೇಕೆಂದು ಕುರುಡುಮಲೆಯ ಗಣಪತಿಗೆ ಪ್ರಾರ್ಥನೆ ಸಲ್ಲಿಸಿರುವುದಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನೂತನ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ದ ಗಣಪತಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. 

ದೇವಾಲಯದಿಂದ ಹೊರ ಬರುತ್ತಿದ್ದಂತೆ ಶುಭ ಸೂಚನೆಯಂತೆ ಮಳೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಆಂಧ್ರದಲ್ಲಿ ಹೆಚ್ಚಿನ ಸಂಸದರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕೆಂದು ತಿಳಿಸಿದ ಅವರು, ದೇಶಕ್ಕೆ ಮೋದಿಯವರ ನಾಯಕತ್ವ ಅತ್ಯಗತ್ಯವಾಗಿದೆ ಎಂದರು. ಮೋದಿ ಪ್ರಧಾನಿಯಾಗಬೇಕೆನ್ನುವ ನಿಟ್ಟಿನಲ್ಲಿ ಆ ಭಗವಂತ ಎಲ್ಲಾ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಭಾರತ ಇಂದು ವಿಶ್ವಮಾನ್ಯವಾಗಲು ಮೋದಿಯವರ ಕಾರ್ಯಗಳೇ ಕಾರಣವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ: ಬಿ.ವೈ.ವಿಜಯೇಂದ್ರ

ಭಾರತ ಮತ್ತಷ್ಟು ಅಭಿವೃದ್ದಿಪಥದತ್ತ ಸಾಗಲು ಮೋದಿಯವರ ನಾಯಕತ್ವ ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಪಕ್ಷದಲ್ಲಿ ಹಿರಿಯರ ಆಶೀರ್ವಾದ ಕಿರಿಯರ ಸಹಕಾರ ಪಡೆದು ಪಡೆದು, ಪಕ್ಷವನ್ನ ಬಲಪಡಿಸುವುದರೊಂದಿಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದಾಗಿ ಹೇಳಿದ ಅವರು, ಇಷ್ಟು ದೊಡ್ಡ ವ್ಯಕ್ತಿಗಳು ನನ್ನನ್ನ ಆಯ್ಕೆ ಮಾಡಿದಾಗ ಯಾರೂ ಸಹ ವಿರೋಧ ಮಾಡುವುದಿಲ್ಲ ಎಲ್ಲರೂ ಸಂತೋಷದಿಂದ ಒಪ್ಪಿದ್ದಾರೆ ಎಂದರು. ಶುಕ್ರವಾರದಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಆ ಪಕ್ಷದಲ್ಲಿ ಎಲ್ಲಾ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದು ಸಭೆಯಲ್ಲಿ ಜೆಪಿ.ನಡ್ಡಾ ಅವರು ಸಹ ಭಾಗವಹಿಸುತ್ತಾರೆ ಎಂದರು. 

ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲದಿದ್ದರೂ ಸಹಸ್ರಾರು ಮಂದಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಕುರುಡುಮಲೆಯಲ್ಲಿ ಹಾಜರಿದ್ದು, ನೂತನ ಅಧ್ಯಕ್ಷರಿಗೆ ಜೈಕಾರದ ಮೂಲಕ ಶುಭ ಕೋರಿದರು. ಇದಾದ ನಂತರ ಮಲ್ಲಸಂದ್ರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ನಿವಾಸಕ್ಕೂ ತೆರಳಿದ್ದ ವಿಜಯೇಂದ್ರ, ಕಾರ್ಯಕರ್ತರು ವಿಧಾನಸಭೆ ಸೋಲಿಗೆ ಧೃತಿಗೆಡುವ ಅಗತ್ಯವಿಲ್ಲ, ಲೋಕಸಭೆಯಲ್ಲಿ ನಾವು ನಮ್ಮ ಶಕ್ತಿ ತೋರಿಸೋಣ ಎಂದರು.

ಹಿರಿಯರ ವಿಶ್ವಾಸ ಪಡೆದು ಮುನ್ನಡೆವೆ: ರಾಜ್ಯದಲ್ಲಿ ಇನ್ನೂ ಪಕ್ಷದ ಹಿರಿಯರಿದ್ದರೂ ಸಹ ನನಗೆ ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ. ಹೀಗಾಗಿ ಪಕ್ಷದಲ್ಲಿ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುವುದರ ಜತೆಗೆ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದುಕೊಳ್ಳಲು ಶ್ರಮಿಸುವುದಾಗಿ ತಿಳಿಸಿದರು. ‘ನನಗೆ ಪಕ್ಷದ ಎಲ್ಲಾ ಹಿರಿಯರು ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ, ವಿಶ್ವಾಸವಿದೆ, ಬಿಜೆಪಿ ಸಿದ್ದಾಂತಗಳಿರುವ ಪಕ್ಷವಾಗಿದೆ, ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾಜೀ, ಪ್ರಧಾನಿ ಮೋದೀಜಿ, ಅಮಿತ್ ಶಾಜೀ, ಸಂತೋಷ್‌ಜಿ ಮತ್ತಿತರ ಅಗ್ರಗಣ್ಯರ ತೀರ್ಮಾನದಿಂದ ನನಗೆ ಈ ಹುದ್ದೆ ಸಿಕ್ಕಿದೆ, ಆದ್ದರಿಂದ ಪಕ್ಷದಲ್ಲಿ ಅಸಮಾಧಾನದ ಮಾತಿಲ್ಲ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಪಕ್ಷವನ್ನು ಮುನ್ನಡೆಸುವೆ’ ಎಂದರು.

ವಿಜಯೇಂದ್ರ ಆಯ್ಕೆಯಿಂದ ಹಿರಿಯ ಬಿಜೆಪಿಗರಿಗೆ ಬೇಸರ: ಸಚಿವ ಶಿವರಾಜ ತಂಗಡಗಿ

ಮುಳಬಾಗಿಲು ದೋಸೆ ಸವಿದ ವಿಜಯೇಂದ್ರ: ದೇಶವ್ಯಾಪಿ ಖ್ಯಾತಿ ಗಳಿಸಿರುವ ಮುಳಬಾಗಿಲು ದೋಸೆ ಸವಿದ ವಿಜಯೇಂದ್ರರೊಂದಿಗೆ ಸಂಸದ ಎಸ್.ಮುನಿಸ್ವಾಮಿ, ಪಿ.ಸಿ.ಮೋಹನ್, ಡಿಎಸ್ ವೀರಯ್ಯ, ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ತಮ್ಮೇಗೌಡ, ವೈ.ಸಂಪಂಗಿ, ಚಿಂತಾಮಣಿ ಗೋಪಿ, ಸೀಕಲ್ ರಾಮಚಂದ್ರೇಗೌಡ, ಶಿಢ್ಲಘಟ್ಟ ರಾಜಣ್ಣ, ಮುಳಬಾಗಿಲು ಸೀಗೆಹಳ್ಳಿ ಸುಂದರ್, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಮುಖಂಡರಾದ ಪಿ.ಎಸ್.ಸತ್ಯನಾರಾಯಣರಾಜ್, ವಿಜಯಕುಮಾರ್, ಎಸ್.ಬಿ.ಮುನಿವೆಂಕಟಪ್ಪ, ಓಂಶಕ್ತಿ ಚಲಪತಿ, ತಿಮ್ಮರಾಯಪ್ಪ, ಗಾಂಧಿನಗರ ವೆಂಕಟೇಶ್, ಓಹಿಲೇಶ್, ಬಿ.ವಿ.ಮಹೇಶ್ ಇದ್ದರು.

Follow Us:
Download App:
  • android
  • ios