ವಿಜಯೇಂದ್ರ ನೆಮ್ಮದಿಯಾಗಿ ಕೆಲಸ ಮಾಡಲು ಅವರ ಪಕ್ಷದವರೇ ಬಿಡಲ್ಲ: ಸಚಿವ ತಂಗಡಗಿ
ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ; ಅಸಮಾಧಾನವಿದೆ. ನೆಮ್ಮದಿಯಾಗಿ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವರ ಪಕ್ಷದವರೇ ಬಿಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳ (ನ.16): ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ; ಅಸಮಾಧಾನವಿದೆ. ನೆಮ್ಮದಿಯಾಗಿ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವರ ಪಕ್ಷದವರೇ ಬಿಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಅಪಹಾಸ್ಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ಸಿಗೆ ಕುಟುಂಬ ರಾಜಕಾರಣ ಅಂತ ಬಿಜೆಪಿಯವರು ಹೇಳುತ್ತಾರೆ. ಆದರೆ ಈಗ ಏನಾಗಿದೆ? ಬಿಜೆಪಿಯವರು ಯಡಿಯೂರಪ್ಪ ಹೆಸರನ್ನು ಹೇಳಿಕೊಂಡು ಹೊರಟಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ನೆಚ್ಚಿಕೊಂಡು ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಹಲವಾರು ಜನರು ಬರುತ್ತಿದ್ದಾರೆ. ಹಂತ ಹಂತವಾಗಿ ಎಲ್ಲ ಹೇಳುವೆ ಎಂದರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಚಾರವಾಗಿ, ಅವರು ದಂಡ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ. ಕರೆಂಟ್ ಕದ್ದಿರುವುದನ್ನು ಮಾಧ್ಯಮದವರು ತೋರಿಸಿದ್ದಾರೆ. ಜೆಡಿಎಸ್, ಬಿಜೆಪಿಯವರು ಹತಾಶೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸೂಚಿಸುತ್ತೇನೆ ಎಂದರು.
ಬಿವೈವಿ ಪದಗ್ರಹಣಕ್ಕೆ ಸೋಮಣ್ಣ, ಎಸ್‌ಟಿಎಸ್, ರವಿ, ಯತ್ನಾಳ, ಲಿಂಬಾವಳಿ, ಬೆಲ್ಲದ ಚಕ್ಕರ್!
ತ್ವರಿತಗತಿ ಪರಿಹಾರ ನೀಡಲು ಕ್ರಮ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭತ್ತ ಬೆಳೆ ನಾಶವಾಗಿದೆ. ಮಳೆಯಿಲ್ಲದೇ ಒಣ ಬೇಸಾಯ ಪ್ರದೇಶ ಹಾನಿಯಾಗಿದೆ. ಕೂಡಲೇ ಸರ್ಕಾರ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ಬೆಳೆ ಹಾನಿ ಮತ್ತು ಬರಪರಿಹಾರ ಕುರಿತು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಈಗಾಗಲೇ ಗಂಗಾವತಿ ತಾಲೂಕಿನಲ್ಲಿ 2955 ಹೆಕ್ಟೇರ್ ಭೂಮಿ ಪ್ರದೇಶದಲ್ಲಿ ಮಳೆ ಇಲ್ಲದೇ ವಿವಿಧ ಬೆಳೆಗಳು ಹಾನಿಯಾಗಿದ್ದು, 4762 ರೈತರು ಸಂಕಷ್ಟಕ್ಕೆ ಸಿಲುಕಿದ್ದು, ₹3.13 ಕೋಟಿ ನಷ್ಟವಾಗಿದೆ.
ಕಾರಟಗಿ ತಾಲೂಕಿನಲ್ಲಿ 1353 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 1432 ರೈತರು ಬೆಳೆ ಕಳೆದುಕೊಂಡಿದ್ದಾರೆ. ₹1.17 ಕೋಟಿ ಹಾನಿಯಾಗಿದೆ. ಕನಕಗಿರಿ- 29,413 ಹೆಕ್ಟೇರ್ ಪ್ರದೇಶದಲ್ಲಿ 25,234 ರೈತರು ಬೆಳೆ ಹಾನಿಗೆ ಒಳಗಾಗಿದ್ದಾರೆ. ₹36.98 ಕೋಟಿ ಬೆಳೆ ಹಾನಿಯಾಗಿದೆ ಎಂದು ಸಭೆಯಲ್ಲಿ ಸಚಿವರು ತಿಳಿಸಿದರು. ಈ ಬಗ್ಗೆ ಮೂರು ತಾಲೂಕುಗಳ ತಹಸೀಲ್ದಾರರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶರು ಮತ್ತು ಕಂದಾಯ ಅಧಿಕಾರಿಗಳು ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸ ಬೇಕೆಂದು ಸೂಚಿಸಿದರು.
3ನೇ ಬಾರಿ ಮೋದಿ ಪ್ರಧಾನಿಯಾಗಲು ಕುರುಡುಮಲೆ ಗಣಪತಿಗೆ ವಿಜಯೇಂದ್ರ ವಿಶೇಷ ಪೂಜೆ
ಕುಡಿವ ನೀರಿನ ಬಗ್ಗೆ ಜಾಗೃತಿ ವಹಿಸಿ: ಮುಂಬರುವ ದಿನಗಳಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಇದೆ. ಕೂಡಲೇ ಅಧಿಕಾರಿಗಳು ಮುಂಜಾಗರೂಕತೆ ವಹಿಸಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ನ.30ಕ್ಕೆ ಕಾಲುವೆಗಳಿಗೆ ನೀರು ಸ್ಥಗಿತಗೊಳ್ಳುತ್ತದೆ. ಜಿಪಂ, ತಾಪಂ, ತಹಸೀಲ್ದಾರರು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.