ಕಾಂಗ್ರೆಸ್‌ ವರಿಷ್ಠರ ಚಿತಾವಣೆಯಿಂದ ಉದ್ರಿಕ್ತಗೊಂಡ ರಾಜ್ಯ ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ ಆರ್‌ಎಸ್‌ಎಸ್‌ ಕಾರ್ಯಾಲಯ ಕೇಶವ ಕೃಪಾ ಮೇಲೆ ಅನಿರೀಕ್ಷಿತ ದಾಳಿ ನಡೆಸಲು ಯತ್ನಿಸಿದೆ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಅ.18): ಕಾಂಗ್ರೆಸ್‌ ವರಿಷ್ಠರ ಚಿತಾವಣೆಯಿಂದ ಉದ್ರಿಕ್ತಗೊಂಡ ರಾಜ್ಯ ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ ಆರ್‌ಎಸ್‌ಎಸ್‌ ಕಾರ್ಯಾಲಯ ಕೇಶವ ಕೃಪಾ ಮೇಲೆ ಅನಿರೀಕ್ಷಿತ ದಾಳಿ ನಡೆಸಲು ಯತ್ನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರಭಕ್ತ ಮನಸ್ಸುಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಗೂಂಡಾಗಿರಿ ನಡೆಸುವ ಕಾರ್ಯಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.

ಈ ದಿನದ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಶಾಂತಿ, ಸುವ್ಯವಸ್ಥೆ ನಮ್ಮ ಆದ್ಯತೆ. ದ್ವೇಷ, ಮತ್ಸರ, ವಿಧ್ವಂಸಕ ಕೃತ್ಯ ಉತ್ತೇಜಿಸುವುದು ನಿಮ್ಮ ಅಜೆಂಡಾ ಆಗಿದ್ದರೆ, ಅದನ್ನು ಎದುರಿಸುವ ಶಕ್ತಿ ಹಾಗೂ ತಾಕತ್ತು ಭಾರತೀಯ ಜನತಾ ಪಾರ್ಟಿಯ ಪ್ರತಿ ಕಾರ್ಯಕರ್ತನಿಗೂ ಇದೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ರಾಜ್ಯದಲ್ಲಿ ಉಂಟಾಗುವ ಪರಿಸ್ಥಿತಿಗೆ ಕಾಂಗ್ರೆಸ್‌ ಸರ್ಕಾರವೇ ಹೊಣೆಯಾಗುತ್ತದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ದೂರು: ಚಾಮರಾಜಪೇಟೆಯ ಆರ್‌ಎಸ್‌ಎಸ್‌ ರಾಜ್ಯ ಕಚೇರಿ ಕೇಶವ ಕೃಪಾ ಎದುರು ಶುಕ್ರವಾರ ಪ್ರತಿಭಟನೆ ಮಾಡಿದ ಯುವ ಕಾಂಗ್ರೆಸ್‌ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರ ವಿರುದ್ಧ ರಾಜ್ಯ ಬಿಜೆಪಿ ನಾಯಕರ ನಿಯೋಗ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ ಕುಮಾರ್‌, ಕಾಂಗ್ರೆಸ್‌ ಕಿಡಿಗೇಡಿಗಳು ಯಾವುದೇ ಪೂರ್ವಾನುಮತಿ ಇಲ್ಲದೆ ಗುಂಡಾವರ್ತನೆ ತೋರಿದ್ದಾರೆ. ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ನೂರಾರು ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕೇಶವ ಕೃಪಾ ಎದುರು ಕೆಲ ಜನ ಬಂದು ಗೂಂಡಾವರ್ತನೆ ಪ್ರದರ್ಶಿಸಿ, ಪ್ರತಿಭಟನೆ ನೆಪದಲ್ಲಿ ಅವಾಚ್ಯ ಶಬ್ಧಗಳನ್ನು ಕೂಗಿರುವುದು ಸಹಿಸಲು ಸಾಧ್ಯವಿಲ್ಲ ಎಂದರು.

ಎಫ್‌ಐಆರ್‌ ದಾಖಲಿಸಲು ಆಗ್ರಹ

ಅನುಮತಿ ಪಡೆಯದೇ ಪ್ರತಿಭಟನೆ ಮಾಡಿದ್ದರೆ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು. ಪ್ರತಿಭಟನೆಗೆ ಅವಕಾಶ ನೀಡಿದ ಸ್ಥಳೀಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲವಾದರೆ, ನಾವು 33 ಸಚಿವರ ಮನೆ ಎದುರು ಪ್ರತಿಭಟನೆ ನಡೆಸುತ್ತೇವೆ. ನಂತರ ಅನಾಹುತಗಳಿಗೆ ಸರ್ಕಾರವೇ ಹೊಣೆ. ಸರ್ಕಾರಿ ಪ್ರಾಯೋಜಿತ ಪ್ರತಿಭಟನೆಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡಿದೆ ಎಂದು ಕಿಡಿಕಾರಿದರು. ಆರ್‌ಎಸ್‌ಎಸ್ ಕಚೇರಿಗೆ ಭದ್ರತೆ ಕಡಿಮೆ ಮಾಡಿದ್ದಾರೆ. ವಿಪಕ್ಷ ನಾಯಕರ ಭದ್ರತೆ ಕಡಿಮೆ ಮಾಡಿದ್ದಾರೆ. ಸರ್ಕಾರಿ ಪ್ರಾಯೋಜಿತ ಗಲಭೆ ಮಾಡಲು ಸರ್ಕಾರ ಹುನ್ನಾರ ಮಾಡಿರುವ ಅನುಮಾನವಿದೆ. ಹೀಗಾಗಿ ಗೂಂಡಾ ವರ್ತನೆ ತೋರಿದವರ ವಿರುದ್ಧ 24 ಗಂಟೆಯೊಳಗೆ ಎಫ್ಐಆರ್‌ ದಾಖಲಿಸಬೇಕು. ಇಲ್ಲವಾದರೆ, ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ವಿ.ಸುನೀಲ್‌ ಕುಮಾರ್‌ ಎಚ್ಚರಿಸಿದರು.