ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಅನ್ನೋದು ಮೂರ್ಖತನದ ಪರಮಾವಧಿ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುಟ್ಟುವ ಯೋಗ್ಯತೆ ಇವರಿಗೆ ಇಲ್ಲ. ಸಂಘವನ್ನು ಬ್ಯಾನ್ ಮಾಡುವುದು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಚಿತ್ರದುರ್ಗ (ಅ.16): ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಅನ್ನೋದು ಮೂರ್ಖತನದ ಪರಮಾವಧಿ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುಟ್ಟುವ ಯೋಗ್ಯತೆ ಇವರಿಗೆ ಇಲ್ಲ. ಸಂಘವನ್ನು ಬ್ಯಾನ್ ಮಾಡುವುದು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐದಾರು ದಶಕದಿಂದ ಇಡೀ ಕಲಬುರಗಿ ಖರ್ಗೆ ಕುಟುಂಬದ ಹಿಡಿತದಲ್ಲಿದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಕೆಲಸ‌ ಮಾಡಲಾಗಿದೆ? ಶಿಕ್ಷಣದಲ್ಲಿ ಏಕೆ ಆ ಜಿಲ್ಲೆ ಕೊನೆಯ ಸ್ಥಾನದಲ್ಲಿ ಉಳಿದಿದೆ?

ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಚ್ಚಿಹಾಕಲು, ವಿಷಯಾಂತರ ಮಾಡಲು ಈ ರೀತಿಯ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಔತಣ ಕೂಟದ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಏನು ಚರ್ಚೆ ಆಯಿತು? ಕಲ್ಯಾಣ ಕರ್ನಾಟಕಕ್ಕೆ ಪರಿಹಾರ ಕ್ರಮದ ಚರ್ಚೆ ನಡೆಯಿತಾ? ರಾಜ್ಯವನ್ನು ಲೂಟಿ ಮಾಡುವ ಹಾಗೂ ಬಿಹಾರ ಚುನಾವಣೆಗೆ ಹಣ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಲಬುರಗಿಯಲ್ಲಿ ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖರ್ಗೆ ಮೊದಲು ಈ ಬಗ್ಗೆ ಗಂಭೀರ ಆಲೋಚನೆಯ ಮಾಡಲಿ ಎಂದು ತಿರುಗೇಟು ನೀಡಿದರು.

ಉದ್ಯಮಿಗಳಿಗೆ ಖರ್ಗೆ ಕೆಟ್ಟ ಮಾತು

ಬಯೋಕಾನ್‌ನ ಕಿರಣ್‌ ಮುಜುಂದಾರ್ ಶಾ ಬಗ್ಗೆ ಪ್ರಿಯಾಂಕ್‌ ಖರ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ಹಿಂದೆ ಉದ್ಯಮಿ ಮೋಹನ್ ದಾಸ್ ಪೈ ಸೌಕರ್ಯದ ಬಗ್ಗೆ ಟೀಕಿಸಿದಾಗ ಅಂದು ಸಿಎಂ ಆಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಕರೆದು ಮಾತಾಡಿದ್ದರು. ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿದ್ದರು. ಉದ್ಯಮಿಗಳಾದ ಕಿರಣ್, ಮೋಹನ್ ದಾಸ್ ಪೈ ಅವರಂಥ ದಿಗ್ಗಜರು ಸಲಹೆ ನೀಡಿದಾಗ ಸ್ವೀಕರಿಸಬೇಕು. ದಿಗ್ಗಜರಿಗೆ ಟೀಕಿಸಿ ಅವಮಾನಿಸುವುದು ರಾಜ್ಯಕ್ಕೆ ಅವಮಾನ ಎಂದು ಬಿವೈವಿ ಹೇಳಿದರು.