ಕರದಂಟು ಮೆಲ್ಲಲು ಸಹೋದರರ ಪೈಪೋಟಿ; ಜಾರಕಿಹೊಳಿದ್ವಯರ ಪೈಕಿ ಗೆಲ್ಲೋರು ಯಾರು?
ಗೋಕಾಕ್‌ನಲ್ಲಿ ಸೋದರರ ಕದನದಲ್ಲಿ ಮೂರನೆಯವರಿಗೆ ಲಾಭವಾದೀತೆ ಎಂಬ ಅನುಮಾನ | ಇದೇ ಮೊದಲ ಬಾರಿ ಖಾತೆ ತೆರೆಯುವ ಉತ್ಸಾಹದಲ್ಲಿ ಬಿಜೆಪಿ | ಲಖನ್ ಸ್ಪರ್ಧೆಯಲ್ಲಿದ್ದರೂ ರಮೇಶ್‌ಗೆ ಸತೀಶ್ ಅಸಲಿ ಎದುರಾಳಿ
ಬೆಳಗಾವಿ (ನ. 27): ಕರದಂಟಿನ ನಾಡು ಗೋಕಾಕ್ ವಿಧಾನಸಭೆ ಉಪಸಮರ ರಂಗೇರುತ್ತಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಪ್ರತಿಸ್ಪರ್ಧಿಯಾಗಿ ಅವರ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಗೋಕಾಕ್ ಕ್ಷೇತ್ರ ಹೆಚ್ಚಿನ ಗಮನ ಸೆಳೆದಿದೆ. ಜಾರಕಿಹೊಳಿ ಸಹೋದರರ ಸವಾಲಿನ ನಡುವೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅಶೋಕ ಪೂಜಾರಿ ಅವರು ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿರುವುದರಿಂದ ಈ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಪರಿವರ್ತನೆಯಾಗಿದೆ. ಹೀಗಾಗಿ ಇದುವರೆಗೆ ಎರಡೇ ಪಕ್ಷಗಳ ನಡುವೆ ಮುಖಾಮುಖಿಯಾಗಿ ನಡೆಯುತ್ತಿದ್ದ ಸ್ಪರ್ಧೆ ಈಗ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಅಥಣಿ ಉಪಚುನಾವಣೆ: ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ
ಗೋಕಾಕ್ ಕ್ಷೇತ್ರ ಇದೇ ಮೊದಲ ಬಾರಿಗೆ ಉಪಚುನಾವಣೆ ಎದುರಿಸುತ್ತಿದೆ. ಈವರೆಗೆ ಇಲ್ಲಿ ಬಿಜೆಪಿ ತನ್ನ ಖಾತೆಯನ್ನೇ ತೆರೆದಿಲ್ಲ. ಬಿಜೆಪಿ ಗೆದ್ದರೆ ಹೊಸ ಅಧ್ಯಾಯ ಆರಂಭವಾಗಲಿದೆ. ಗೋಕಾಕ್ ಕ್ಷೇತ್ರ ಕಾಂಗ್ರೆಸ್ ಹಾಗೂ ಜಾರಕಿಹೊಳಿ ಕುಟುಂಬದ ಭದ್ರಕೋಟೆ. ಇಲ್ಲಿ ಪಕ್ಷ ಗೌಣ. ಏನಿದ್ದರೂ ವೈಯಕ್ತಿಕ ವರ್ಚಸ್ಸು ಮಾತ್ರ ವರ್ಕೌಟ್ ಆಗುತ್ತಾ ಬಂದಿದೆ.
ಅದರಲ್ಲಿಯೂ ಈ ಕ್ಷೇತ್ರದ ಮೇಲೆ ರಮೇಶ ಜಾರಕಿಹೊಳಿ ಪ್ರಬಲ ಹಿಡಿತ ಹೊಂದಿದ್ದಾರೆ. ಈವರೆಗಿನ ಎಲ್ಲ ಚುನಾವಣೆಗಳಲ್ಲಿ ಸಹೋದರನ ಪರ ನಿಂತು ಪ್ರಚಾರ ಮಾಡಿ, ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಲಖನ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಅವರ ಎದುರಾಳಿಯಾಗಿ ಕಣಕ್ಕಿಳಿದಿದ್ದಾರೆ. ಜಾರಕಿಹೊಳಿ ಸಹೋದರರ ನಡುವಿನ ಸಮರ ಕ್ಷೇತ್ರದಲ್ಲಿ ರಂಗೇರಿದೆ.
ಬಿಜೆಪಿ ಸರ್ಕಾರ ಅಸ್ತಿತ್ವದ ಪ್ರಶ್ನೆ
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ, ಈ ಉಪ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಮೇಶ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಅಶೋಕ ಪೂಜಾರಿ ಕೊನೆ ಗಳಿಗೆಯಲ್ಲಿ ಬಂಡಾಯ ಬಾವುಟ ಹಾರಿಸಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ‘ಕಮಲ’ ಅರಳಿಸುತ್ತಾರಾ ಡಾಕ್ಟರ್?
ಜಾರಕಿಹೊಳಿ ಸಹೋದರರ ಜಂಗೀ ಕುಸ್ತಿಯಲ್ಲಿ ‘ತೆನೆ ಹೊತ್ತ ಮಹಿಳೆ’ಗೆ ವರವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನುವುದು ರಾಜಕೀಯ ತಜ್ಞರ ವಿಶ್ಲೇಷಣೆ. ಅಭ್ಯರ್ಥಿಗಳ ಹಣೆಬರಹ ಬರೆಯುವುದಕ್ಕೆ ಮತದಾರ ಪ್ರಭು ಸಿದ್ಧನಾಗಿದ್ದು, ಯಾರೇ ಗೆದ್ದರೂ, ಬಿದ್ದರೂ ಸರ್ಕಾರ ಉಳಿಸುವ, ಉರುಳಿಸುವ ಅಥವಾ ಹೊಸ ಸರ್ಕಾರ ರಚಿಸುವಲ್ಲಿ ಗೋಕಾಕ್ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಟಿಕೆಟ್ ಪಕ್ಕಾ ಆದಾಗ ಅಶೋಕ ಪೂಜಾರಿ ಅವರು ಬಂಡಾಯ ಏಳುವ ಮುನ್ಸೂಚನೆ ಕೊಟ್ಟಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರಮೇಶ ಜಾರಕಿಹೊಳಿ, ಸಚಿವ ಜಗದೀಶ ಶೆಟ್ಟರ್ ನೇತೃತ್ವದ ನಿಯೋಗ ಅಶೋಕ ಪೂಜಾರಿ ಮನವೊಲಿಕೆಗೆ ಯತ್ನಿಸಿದ ಪ್ರಯತ್ನ ಫಲಪ್ರದವಾಗಲಿಲ್ಲ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಅಶೋಕ ಪೂಜಾರಿ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಮತಗಳ ವಿಭಜನೆಯಾಗುವ ಭಯ ಬಿಜೆಪಿ ಅಭ್ಯರ್ಥಿಯಲ್ಲಿ ಮನೆ ಮಾಡಿದೆ.
ಲಿಂಗಾಯತರು ಮತ ಹಾಕಿ ಎಂದ ಸಿಎಂ
ರಮೇಶ ಜಾರಕಿಹೊಳಿ ಬಿಜೆಪಿಯಿಂದ ಗೆದ್ದರೆ ಉಪಮುಖ್ಯಮಂತ್ರಿಯಾಗಲಿದ್ದಾರೆ. ಅಷ್ಟೇ ಅಲ್ಲದೇ ಪ್ರಮಖ ಖಾತೆಯೂ ದೊರೆಯಲಿದೆ. ಹಾಗಾಗಿ, ರಮೇಶ ಅವರನ್ನು ಗೆಲ್ಲಿಸುವಂತೆ ಬಿಜೆಪಿ ಪ್ರಚಾರ ನಡೆಸುತ್ತಿದೆ. ಅವರ ಜೊತೆಗೆ ಸಹೋದರರಾದ ಅರಬಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಡಾ.ಭೀಮಶಿ ಜಾರಕಿಹೊಳಿ ಬೆನ್ನಿಗೆ ನಿಂತಿದ್ದಾರೆ. ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಿ ಹೋಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಹೇಗಿದೆ ಉಪಚುನಾವಣೆ ಟ್ರೆಂಡ್? ಇಲ್ಲಿದೆ ಗ್ರೌಂಡ್ ರಿಪೋರ್ಟ್
ಗೋಕಾಕ್ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು, ಜನ ಬೆಂಬಲ ಹೊಂದಿದ್ದಾರೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಬೆಂಬಲವಿದೆ.
ಕ್ಷೇತ್ರದ ಮತದಾರರ ನಾಡಿಮಿಡಿತ, ಮೋದಿ ಅಲೆ, ಬಿಜೆಪಿ ಆಡಳಿತ ಪಕ್ಷವಾಗಿರುವುದು ರಮೇಶ ಜಾರಕಿಹೊಳಿ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಅನರ್ಹ ಶಾಸಕ ಹಣೆಪಟ್ಟಿ, ಅಶೋಕ ಪೂಜಾರಿ ಬಂಡಾಯ, ಸಹೋದರ ಶಾಸಕ ಸತೀಶ ಜಾರಕಿಹೊಳಿ ವೈಯಕ್ತಿಕ ನಿಂದನೆ ಮಾಡುತ್ತಿರುವುದು, ಸಹೋದರರ ಸವಾಲ್ ಮೈನಸ್ ಪಾಯಿಂಟ್ ಆಗಿವೆ.
ತಮ್ಮ ಹಿರಿಯ ಸಹೋದರನ ವಿರುದ್ಧ ಉದ್ಯಮಿ ಲಖನ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಇವರ ಬೆನ್ನ ಹಿಂದೆ ನಿಂತಿರುವ ಶಾಸಕ ಸತೀಶ ಜಾರಕಿಹೊಳಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರಾರಯರೂ ಈವರೆಗೂ ಈ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿಲ್ಲ. ಈ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಿದ್ದ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಇಲ್ಲಿಂದ ಅಥಣಿ ಕ್ಷೇತ್ರಕ್ಕೆ ನೇಮಕ ಮಾಡಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರು ಹಾಗೂ ಕುರುಬ ಸಮುದಾಯದ ಬೆಂಬಲ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಬೇಕೆಂಬ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಚ್ಚು ಈ ಪಕ್ಷಗಳಿಗೆ ಪ್ಲಸ್ ಪಾಯಿಂಟ್ ಆಗಿವೆ. ಆದರೆ, ಲಖನ್ ಜಾರಕಿಹೊಳಿ ಅವರಿಗೆ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಇಲ್ಲದಿರುವುದು, ರಾಜಕೀಯದಲ್ಲಿ ಅನುಭವದ ಕೊರತೆ, ಸತೀಶ ಜಾರಕಿಹೊಳಿ ಮತ್ತು ಪಕ್ಷವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಕಾಂಗ್ರೆಸ್‌ನ ಮೈನಸ್ ಪಾಯಿಂಟ್ ಆಗಿವೆ.
ಬಿಜೆಪಿಯಿಂದ ಬಂಡಾಯವೆದ್ದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶೋಕ ಪೂಜಾರಿ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಅಶೋಕ ಪೂಜಾರಿ ಸೇರಿದವರಾಗಿರುವುದರಿಂದ ಲಿಂಗಾಯತ ಮತಗಳು ವಿಭಜನೆಯಾಗುತ್ತವೆ. ಇವರ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲವಾಗುತ್ತದೆ. ಇವರಿಗೆ ಗೆಲುವಿನ ಸಾಧ್ಯತೆಗಳು ಹೆಚ್ಚು ಇಲ್ಲವಾದರೂ ಮತಗಳ ವಿಭಜನೆ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಸಹೋದರರ ಜಗಳದಲ್ಲಿ ತನಗೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಜೆಡಿಎಸ್ ಇದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಇಲ್ಲಿ ಜೆಡಿಎಸ್ ಸಂಘಟನೆ ಪ್ರಬಲವಾಗಿಲ್ಲ. ಉಪಕದನದಲ್ಲಿ ಗೋಕಾಕ್ ಕ್ಷೇತ್ರದ ಮತದಾರರು ಯಾರ ಬಾಯಿಗೆ ಕರದಂಟು ಹಾಕುತ್ತಾರೆ ಎಂಬ ಕುತೂಹಲ ಕೆರಳಿಸಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ರಮೇಶ ಜಾರಕಿಹೊಳಿ (ಬಿಜೆಪಿ), ಲಖನ್ ಜಾರಕಿಹೊಳಿ ( ಕಾಂಗ್ರೆಸ್), ಅಶೋಕ ಪೂಜಾರಿ (ಜೆಡಿಎಸ್), ದೀಪಕ ಉರುಫ್ ವೆಂಕಟೇಶ್ವರ ಸ್ವಾಮೀಜಿ (ಹಿಂದುಸ್ತಾನ ಜನತಾ ಪಾರ್ಟಿ), ಸಂತೋಷ ನಂದೂರ (ಉತ್ತಮ ಪ್ರಜಾಕೀಯ ಪಾರ್ಟಿ), ಅಶೋಕ ಹಣಜಿ (ಪಕ್ಷೇತರ), ಗುರುಪುತ್ರ ಕುಳ್ಳೂರ (ಪಕ್ಷೇತರ ), ಪ್ರಕಾಶ ಭಾಗೋಜಿ (ಪಕ್ಷೇತರ), ರಾಮಪ್ಪ ಕುರಬೇಟ (ಪಕ್ಷೇತರ), ಸತೀಶ ಅಶೋಕ ಪೂಜಾರಿ (ಪಕ್ಷೇತರ), ಸಂಜಯ ಕುರಬೇಟ (ಪಕ್ಷೇತರ).
- ಶ್ರೀಶೈಲ ಮಠದ