ಕೋವಿಡ್ ನೆಪದಲ್ಲಿ ಬಸ್ ಯಾತ್ರೆ ನಿಲ್ಲಿಸಲ್ಲ: ಡಿಕೆಶಿ
ಸರ್ಕಾರ ವಿನಾಕಾರಣ ಜನರಲ್ಲಿ ಹೆದರಿಕೆ ಸೃಷ್ಟಿಸುತ್ತಿದೆ, ಜನರ ಬಳಿಗೆ ತೆರಳಿ ಸರ್ಕಾರದ ವೈಫಲ್ಯ ತಿಳಿಸುತ್ತೇವೆ, ಈ ಹಿಂದೆ ಮೇಕೆದಾಟು ಪಾದಯಾತ್ರೆ ವೇಳೆಯೂ ಹೋರಾಟ ನಿಲ್ಲಿಸಿದ್ದರು. ಈಗ ರಾಹುಲ್ ಗಾಂಧಿ ‘ಭಾರತ್ ಜೋಡೋ ಯಾತ್ರೆ’ ಮಾಡುತ್ತಿದ್ದಾರೆ. ಅದಕ್ಕೆ ಸಿಗುತ್ತಿರುವ ಜನಬೆಂಬಲವನ್ನು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ.

ಬೆಂಗಳೂರು(ಡಿ.26): ‘ಕೊರೋನಾ ನೆಪದಲ್ಲಿ ಜನರನ್ನು ವಿನಾಕಾರಣ ಹೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ನೆಪದಲ್ಲಿ ಬಸ್ ಯಾತ್ರೆ ನಿಲ್ಲಿಸುವುದು ಸಾಧ್ಯವಿಲ್ಲ. ಕಾಂಗ್ರೆಸ್ ಬಸ್ ಯಾತ್ರೆಯನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಯಾತ್ರೆ ಮೂಲಕ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕೊರೋನಾ ನಿರ್ಬಂಧಗಳ ಹೆಸರಿನಲ್ಲಿ ದೇಶದ ಆರ್ಥಿಕತೆ ಹಾಳು ಮಾಡಿ, ನಿರುದ್ಯೋಗ ಹೆಚ್ಚಿಸುತ್ತಿದ್ದಾರೆ. ಜನರನ್ನು ಸುಮ್ಮನೆ ಹೆದರಿಸುತ್ತಿದ್ದಾರೆ. ಈ ಹಿಂದೆ ಮೇಕೆದಾಟು ಪಾದಯಾತ್ರೆ ಕೈಗೊಂಡಾಗ ನಮ್ಮ ವಿರುದ್ಧ ಕೊರೋನಾ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ಪಾದಯಾತ್ರೆ ನಿಲ್ಲಿಸಿದ್ದರು. ಈಗ ರಾಹುಲ… ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದು, ಅವರಿಗೆ ಸಿಗುತ್ತಿರುವ ಜನ ಬೆಂಬಲವನ್ನು ಸಹಿಸಲು ಬಿಜೆಪಿ ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದರು.
ಡಿಕೆಶಿ ಕುಕ್ಕರ್ ಬಾಂಬ್ ಹೇಳಿಕೆ ಬಗ್ಗೆ ರವಿ ಪ್ರಸ್ತಾಪದಿಂದ ಗದ್ದಲ
‘ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಬಸ್‌ಯಾತ್ರೆ ಹಮ್ಮಿಕೊಂಡಿದೆ. ಈ ಎಲ್ಲ ಕಾರಣಗಳಿಗಾಗಿ ಕೊರೋನಾ ನೆಪದಲ್ಲಿ ಯಾತ್ರೆಗಳನ್ನು ನಿಲ್ಲಿಸುವ ಹುನ್ನಾರ ನಡೆದಿದೆ. ಆದರೆ, ಯಾವುದೇ ಕಾರಣಕ್ಕೂ ಯಾತ್ರೆಯಿಂದ ಹಿಂದೆ ಸರಿಯುವುದಿಲ್ಲ’ ಎಂದರು.
‘ಡಿ. 30ರಂದು ಕೃಷ್ಣಾ ನದಿ ನೀರು ವಿಚಾರವಾಗಿ ವಿಜಯಪುರದಲ್ಲಿ ಪ್ರತಿಭಟನೆ ಇದೆ. ಜ.2ರಂದು ಮಹದಾಯಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಹೋರಾಟ ಮಾಡಲಾಗುವುದು. ಜ.8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟಜಾತಿ ಹಾಗೂ ಪಂಗಡದ ಸಮಾವೇಶ ನಡೆಯಲಿದೆ. ನಂತರ ನಾವು ಬೆಳಗಾವಿಯಿಂದ ಬಸ್ ಯಾತ್ರೆ ಮಾಡುತ್ತೇವೆ. ಜನರ ಮುಂದೆ ಬಿಜೆಪಿ ಸರ್ಕಾರ ಮಾಡಿರುವ ಅಕ್ರಮ, ಅನ್ಯಾಯ, ಲೂಟಿಯನ್ನು ಇಡುತ್ತೇವೆ. ಈ ಯಾತ್ರೆ ಪಾಂಚಜನ್ಯ 2.0 ಆಗಲಿದೆ’ ಎಂದು ಹೇಳಿದರು.
ಗುತ್ತಿಗೆರಾರರು ಜಾಗರೂಕರಾಗಿರಿ: ಡಿಕೆಶಿ
ಬೆಂಗಳೂರು: ಸರ್ಕಾರದ ಭ್ರಷ್ಟಾಚಾರ ಕುರಿತು ಕೆಂಪಣ್ಣ ಅವರು ಸತ್ಯ ಹೇಳಿದ್ದಕ್ಕೆ ವಾರಂಟ್ ಹೊರಡಿಸಿ ಬಂಧಿಸಿದ್ದಾರೆ. ರಾಜ್ಯದ ಗುತ್ತಿಗೆದಾರರು ಈ ವಿಚಾರದಲ್ಲಿ ಜಾಗರೂಕರಾಗಿರಿ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
‘ಇದು ಕೇವಲ ಕೆಂಪಣ್ಣ ಒಬ್ಬರ ಮೇಲಿನ ದೌರ್ಜನ್ಯ ಅಲ್ಲ. ಗುತ್ತಿಗೆದಾರರಿಗೆ ದಿನನಿತ್ಯ ಆಗುತ್ತಿರುವ ಕಿರುಕುಳ. ಈ ಸರ್ಕಾರವನ್ನು ಕಿತ್ತೊಗೆಯಲು ಭ್ರಷ್ಟಾಚಾರದ ಮಾಹಿತಿ ಒದಗಿಸಿಕೊಡಬೇಕು. ಲೋಕಾಯುಕ್ತ, ಇ,ಡಿ., ಐಟಿ ಸಂಸ್ಥೆಗಳು ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಮಾಡಬೇಕು.ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.