ಮೊದಲ ದಿನ ಜಂಟಿ ಕಲಾಪದಲ್ಲಿ ಗೌರ್ನರ್ ಭಾಷಣ, 7ಕ್ಕೆ ಸಿಎಂ ಸಿದ್ದು ದಾಖಲೆ 14ನೇ ಬಜೆಟ್ ಮಂಡನೆ, ವಿವಾದಿತ ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಬಿಜೆಪಿ ವಿರೋಧ ಸಾಧ್ಯತೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ರಾಜಕೀಯ ಸಮರ, ಒಟ್ಟು 10 ದಿನಗಳ ಕಾಲ ಅಧಿವೇಶನ: 8 ದಿನ ಪ್ರಶ್ನೋತ್ತರ ಕಲಾಪ.
ಬೆಂಗಳೂರು(ಜು.02): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯದ ಮಟ್ಟಿಗೆ ಸಾರ್ವಕಾಲಿಕ ದಾಖಲೆಯ 14ನೇ ಬಜೆಟ್ ಮಂಡನೆ, ರಾಜ್ಯಪಾಲರ ಜಂಟಿ ಭಾಷಣ, ಬಿಜೆಪಿಯ ವಿವಾದಿತ ತಿದ್ದುಪಡಿ ಕಾಯಿದೆಗಳ ರದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತ ಆರೋಪ-ಪ್ರತ್ಯಾರೋಪ’ ಸೇರಿ ಹಲವು ಕಾರಣಗಳಿಗೆ ಕುತೂಹಲ ಹುಟ್ಟಿಸಿರುವ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದೆ.
16ನೇ ವಿಧಾನಸಭೆಯ ಮೊದಲ ಅಧಿವೇಶನದ ಮುಂದುವರೆದ ಭಾಗವಾಗಿ ಜು.3ರಂದು ಅಧಿವೇಶನ ಶುರುವಾಗಲಿದ್ದು, 10 ದಿನಗಳ ಅಧಿವೇಶನದಲ್ಲಿ ಮೊದಲ ದಿನವಾದ ಸೋಮವಾರ ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಭಾಷಣ ಮಾಡಲಿದ್ದಾರೆ.
ರಾಜ್ಯದಲ್ಲಿ 7ಲಕ್ಷ ಟನ್ ಅಕ್ಕಿ ಇದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ : ಖಂಡ್ರೆ ಕಿಡಿ
ಬಳಿಕ ಜು.4ರಿಂದ ಸರ್ಕಾರಿ ಕಾರ್ಯಕಲಾಪಗಳು ಪ್ರಾರಂಭವಾಗಲಿದ್ದು, ಮೊದಲ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.
ಸಿದ್ದು ದಾಖಲೆಯ ಬಜೆಟ್:
ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ 13 ಬಜೆಟ್‌ಗಳ ಮಂಡನೆಯ ಸಾಧನೆಯನ್ನು 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಗಟ್ಟಿದ್ದರು. ಇದೀಗ ಎರಡನೇ ಅವಧಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜು.7ರಂದು ಬಜೆಟ್ ಮಂಡಿಸಲಿದ್ದು, ತನ್ಮೂಲಕ ರಾಜ್ಯದ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಭಾಜನರಾಗಲಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ ದಾಖಲೆಯ 3.35 ಲಕ್ಷ ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದ್ದು, ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ಬಳಿಕ ಅನುದಾನದ ಬೇಡಿಕೆಗಳನ್ನು ಅಂಗೀಕರಿಸಲಾಗುತ್ತದೆ.
ಚುನಾವಣೆಗೆ ಮೊದಲು ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 3.09 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡಿಸಿದ್ದರು. ಈ ವೇಳೆ ಮಂಡಿಸಿರುವ ಬಿಜೆಪಿ ಸರ್ಕಾರದ ಬಹುತೇಕ ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಕೈಬಿಡಲಿದ್ದಾರೆ. ಬದಲಿಗೆ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಆದ್ಯತೆ ನೀಡಲಿದ್ದಾರೆ. ಜತೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಇತರೆ ಅಂಶಗಳನ್ನು ಬಜೆಟ್‌ನಲ್ಲಿ ಸೇರಿಸಲಿದ್ದಾರೆ. ಹೀಗಾಗಿ ಯಾವ್ಯಾವ ಕಾರ್ಯಕ್ರಮಗಳನ್ನು ಕೈಬಿಡಲಿದ್ದಾರೆ ಹಾಗೂ ಯಾವ್ಯಾವ ಕಾರ್ಯಕ್ರಮಗಳನ್ನು ಸೇರಿಸಲಿದ್ದಾರೆ. ಜತೆಗೆ ಯಾವುದಾದರೂ ತೆರಿಗೆ ಹೆಚ್ಚಾಗಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಗ್ಯಾರಂಟಿ ಕಲಹ ಖಚಿತ:
10 ದಿನಗಳ ಕಲಾಪದಲ್ಲಿ 8 ದಿನ ಇತರೆ ಕಲಾಪಗಳಿಗೂ ಅವಕಾಶ ನೀಡಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಯ ಅನುಷ್ಠಾನ ಮಾಡಿರುವ ಪರಿ ಬಗ್ಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ. ಹೆಚ್ಚುವರಿ ಅಕ್ಕಿ ಭರವಸೆ ನೀಡಿ ಹಣ ನೀಡುತ್ತಿರುವ ಬಗ್ಗೆ ಸರ್ಕಾರದ ವಿರುದ್ಧ ಮುಗಿ ಬೀಳುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಹಣ ನೀಡಿದರೂ ಅಕ್ಕಿ ನೀಡದ ಕೇಂದ್ರ ಹಾಗೂ ಬಿಜೆಪಿಯವರ ನಿಲುವನ್ನು ಪ್ರಸ್ತಾಪಿಸಿ ಸರ್ಕಾರ ಹಾಗೂ ಕಾಂಗ್ರೆಸ್ ಸದಸ್ಯರು ಪ್ರತಿದಾಳಿ ನಡೆಸುವ ಸಾಧ್ಯತೆಯಿದೆ.
ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರಲಿ: ಸಚಿವ ಎಚ್.ಕೆ.ಪಾಟೀಲ್
ವಿವಾದಿತ ತಿದ್ದುಪಡಿ ವಿಧೇಯಕಗಳ ಮಂಡನೆ:
ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾದ ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ (ಎಪಿಎಂಸಿ) ಕಾಯಿದೆಯ ತಿದ್ದುಪಡಿಯನ್ನು ಹಿಂಪಡೆಯಲು ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯಿದೆ- 2022’ ಅರ್ಥಾತ್ ಮತಾಂತರ ನಿಷೇಧ ಕಾಯಿದೆ ತಿದ್ದುಪಡಿಯನ್ನು ರದ್ದುಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದ್ದು, ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡಿಸಲಿದೆ.
8 ದಿನ ಪ್ರಶ್ನೋತ್ತರ ಕಲಾಪ:
ಹತ್ತು ದಿನಗಳ ಕಲಾಪದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಮಂಡನೆ ದಿನ ಹೊರತುಪಡಿಸಿ ಉಳಿದ ಎಂಟು ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಜತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆ ಸೇರಿದಂತೆ ಎಲ್ಲಾ ಕಾರ್ಯಕಲಾಪಗಳು ನಡೆಯಲಿವೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.
