ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಮಕ್ಕಳ ಭರ್ಜರಿ ಹವಾ..!
ಅಂದು ಹಾಲಿ ಶಾಸಕ, ಬಿಜೆಪಿಯ ದೊಡ್ಡನಗೌಡ ಪಾಟೀಲರಿಂದ ವಿಜಯೇಂದ್ರ ಆಗಮನ ವೇಳೆ ಭರ್ಜರಿ ರೋಡ್ ಶೋ ಮಾಡಿಸಿದ್ರೆ, ಇಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಿಂದ ಯತೀಂದ್ರನನ್ನ ಕರೆಯಿಸಿ ರೋಡ್ ಶೋ ಜೊತೆಗೆ ಬಹಿರಂಗ ವೇದಿಕೆ ಕಾರ್ಯಕ್ರಮ ಮಾಡಿ ಸೆಡ್ಡು ಹೊಡೆದಿದ್ದಾರೆ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ, (ಜುಲೈ.03): ರಾಜ್ಯದಲ್ಲಿ ಇನ್ನೇನು ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಆಯಾ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳು ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಈ ಮಧ್ಯೆ ಇಲ್ಲೊಂದು ಮತಕ್ಷೇತ್ರದ ಅಭ್ಯರ್ಥಿಗಳು ಪೈಪೋಟಿ ಮೇಲೆ ಪೈಪೋಟಿ ಮಾಡಿ ಮಾಜಿ ಸಿಎಂ ಮಕ್ಕಳನ್ನೇ ಸ್ವಕ್ಷೇತ್ರಕ್ಕೆ ಕರೆತರುವ ಮೂಲಕ ಭರ್ಜರಿ ರೋಡ್ ಶೋ ಸಹಿತ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಭರಾಟೆ ಈಗಿನಿಂದಲೇ ಜೋರಾಗಿದೆ. ಈ ಕುರಿತ ವರದಿ.
ಅತ್ತ ಬಿಜೆಪಿ ಕಾರ್ಯಕರ್ತರ ಜಯಘೋಷಗಳೊಂದಿಗೆ ಮಾಜಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಬಂದು ಹೋದ ಬಳಿಕ ಇತ್ತ ಪೈಪೋಟಿ ಎಂಬಂತೆ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ರೋಡ್ ಶೋದಲ್ಲಿ ಭಾಗಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಇವುಗಳ ಮಧ್ಯೆ ಮೇಲಿಂದ ಮೇಲೆ ಬಹಿರಂಗ ಸಮಾವೇಶದ ಮೂಲಕ ಮತದಾರರನ್ನ ಸೆಳೆಯಲು ಪ್ಲ್ಯಾನ್ ಮಾಡುತ್ತಿರೋ ರಾಷ್ಟ್ರೀಯ ಪಕ್ಷಗಳ ಆಕಾಂಕ್ಷಿ ಅಭ್ಯರ್ಥಿಗಳು. ಅಂದಹಾಗೆ ಇಂತಹವೊಂದು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿರೋದು ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಮತಕ್ಷೇತ್ರ.
'ವಿಧಾನಸಭೆ ಚುನಾವಣೆ ವೇಳೆ 12 ಸಚಿವರ CD ಹೊರಬರುತ್ತೆ, 30 ಕೋಟಿ ಲಂಚ, 1 ಮಂಚ’
ಹೌದು. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿ ಅಕಾಂಕ್ಷಿಗಳು ಒಂದಿಲ್ಲೊಂದು ಕಸರತ್ತು ನಡೆಸುತ್ತಲೇ ಇದ್ದಾರೆ, ಯಾಕಂದರೆ ಹುನಗುಂದ ಮತಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ತಮ್ಮ ಪಕ್ಷದ ಘಟಾನುಘಟಿ ಮಾಜಿ ಸಿಎಂ ಮಕ್ಕಳನ್ನೇ ಸ್ವಕ್ಷೇತ್ರಕ್ಕೆ ಕರೆತಂದು ರೋಡ್ ಶೋ ಮತ್ತು ಬಹಿರಂಗ ಸಭೆಗಳ ಮೂಲಕ ಭರ್ಜರಿ ಹವಾ ಮಾಡುತ್ತಿದ್ದಾರೆ.
ವಿಜಯೇಂದ್ರ ಭರ್ಜರಿ ರೋಡ್ ಶೋ
ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ್, ತಮ್ಮ ಪಕ್ಷದ ರಾಜ್ಯದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರನ್ನ ಸ್ವಕ್ಷೇತ್ರಕ್ಕೆ ಕರೆಯಿಸಿದ್ದರು, ಸಾಲದ್ದಕ್ಕೆ ವಿಜಯೇಂದ್ರಗೆ ಭರ್ಜರಿ ಸ್ವಾಗತ ಸಹ ನೀಡಿ, ಊರ ತುಂಬೆಲ್ಲಾ ಕಾರ್ಯಕರ್ತರ ಬೈಕ್ ರ್ಯಾಲಿಯೊಂದಿಗೆ ಮೆರವಣಿಗೆ ಮಾಡಿ ಭರ್ಜರಿ ಹವಾ ಮಾಡಿದ್ರು. ಇನ್ನೇನು ಚುನಾವಣೆ ಈಗ ಬಂದೇ ಬಿಡ್ತೇನೋ ಎನ್ನುವಷ್ಟರ ಮಟ್ಟಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕಂಡು ಬಂದು, ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರನ್ನ ಸೆಳೆಯೋಕೆ ಮುಂದಾದರು.
ಜೊತೆಗೆ ಹಿಂದುತ್ವ ಸೇರಿದಂತೆ ವಿವಿಧ ವಿಷಯಗಳನ್ನ ಮುಂದಿಟ್ಟುಕೊಂಡು ಸಮಾವೇಶ ಆಯೋಜನೆಗಳ ಮೂಲಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಸಿಎಂ ಬಿಎಸ್ವೈ ಮಗ ವಿಜಯೇಂದ್ರನನ್ನ ಕರೆತರುವ ಮೂಲಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಶಾಸಕ ದೊಡ್ಡನಗೌಡ ಪಾಟೀಲ ಮುಂದಾದರು. ಈ ಮದ್ಯೆ ಅಂದು ಬಂದಾಗ, ಭರ್ಜರಿ ಸ್ವಾಗತ ಕಂಡು ಖುಷಿಯಾಗಿದೆ ಎಂದು ತಿಳಿಸಿ, ಹಾಲಿ ಶಾಸಕ ದೊಡ್ಡನಗೌಡ ಪಾಟೀಲರನ್ನ ಹಾಡಿ ಹೊಗಳಿ, ಅವರನ್ನ ಬೆಂಬಲಿಸುವಂತೆ ಹುನಗುಂದ ಮತಕ್ಷೇತ್ರದ ಜನರಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಹುನಗುಂದ ಮತದಾರರಲ್ಲಿ ಮನವಿ ಮಾಡಿದ್ದರು.
ಸಿದ್ದರಾಮಯ್ಯ ಪುತ್ರ ಯತೀಂದ್ರ ಆಹ್ವಾನಿಸಿ ಭರ್ಜರಿ ರೋಡ್ ಶೋ
ಇನ್ನು ಅತ್ತ ಬಿಜೆಪಿಯವರು ವಿಜಯೇಂದ್ರನನ್ನ ಕರೆತರುತ್ತಲೇ ಪೈಪೋಟಿ ಎಂಬಂತೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರನನ್ನ ಸ್ವಕ್ಷೇತ್ರಕ್ಕೆ ಕರೆತರೋ ಪ್ಲ್ಯಾನ್ ಮಾಡಿದ್ರು. ಅಂದುಕೊಂಡಂತೆ ಯತೀಂದ್ರ ಹುನಗುಂದ ಮತಕ್ಷೇತ್ರಕ್ಕೆ ಆಗಮಿಸಿದರು. ಅಂದುಕೊಂಡಂತೆ ಕಾಶಪ್ಪನವರ ಸಹ ಯತೀಂದ್ರನ ನೇತೃತ್ವದಲ್ಲಿ ಭರ್ಜರಿ ರೋಡ್ ಶೋ ಅರೆಂಜ್ ಮಾಡಿದ್ರು.
ಸಾಲದ್ದಕ್ಕೆ ಐಪಿಎಲ್ ಹೆಸರಿನ ಇಲಕಲ್ ಪ್ರೀಮಿಯರ್ ಲೀಗ್ನ ಕ್ರಿಕೆಟ್ ಆಯೋಜನೆ ಜೊತೆಗೆ ಮಾಜಿ ಸಚಿವ ವಿನಯ ಕುಲಕರ್ಣಿ, ಶಿವರಾಜ್ ತಂಗಡಗಿ ಸೇರಿದಂತೆ ಕೈ ನಾಯಕರನ್ನ ಕರೆತಂದು ರೋಡ್ ಶೋ ಮಾಡಲು ಕಾಶಪ್ಪನವರ ಮುಂದಾದರು. ಇದ್ರಿಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕ್ರೀಡಾಭಿಮಾನಿಗಳೆಲ್ಲರೂ ಸೇರಿ ಭರ್ಜರಿ ಐಪಿಎಲ್ ಕಾರ್ಯಕ್ರಮ ಉದ್ಘಾಟಿಸಿದ್ರು. ಸಾಲದ್ದಕ್ಕೆ ವೇದಿಕೆಯಲ್ಲಿಯೇ ಯತೀಂದ್ರ ಅವರು, ಬಿಜೆಪಿ ಪಕ್ಷದ ನಾಯಕರ ವಿರುದ್ದ ಹರಿಹಾಯ್ದರು, ಅಲ್ಲದೆ ಮತ್ತೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಯುವ ನಾಯಕತ್ವದ ಅವಶ್ಯಕತೆ ಇದೆ, ಹೀಗಾಗಿ ವಿಜಯಾನಂದ ಕಾಶಪ್ಪನವರ ಮೇಲೆ ನಿಮ್ಮ ಆಶೀರ್ವಾದ ಇರಲೆಂದು ಮನವಿ ಮಾಡುವ ಮೂಲಕ ಮತದಾರರನ್ನ ಈಗಿನಿಂದಲೇ ಸೆಳೆಯೋ ಪ್ರಯತ್ನ ಮಾಡಿದ್ರು.
ಹಾಲಿ-ಮಾಜಿಗಳ ವಾಕ್ಸಮರಕ್ಕೆ ಸಾಕ್ಷಿಯಾಗುವ ಹುನಗುಂದ ಕ್ಷೇತ್ರ
ಬಾಗಲಕೋಟೆ ಜಿಲ್ಲೆಯಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ಅದರಲ್ಲೂ ರಾಜಕೀಯವಾಗಿ ಹುನಗುಂದ ಮತಕ್ಷೇತ್ರ ಗಮನ ಸೆಳೆಯುತ್ತೇ, ಯಾಕಂದರೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಲಿ ಶಾಸಕ ದೊಡ್ಡನಗೌಡ ಪಾಟೀಲರ ಮಧ್ಯೆ ನಿತ್ಯ ವಾಕ್ಸಮರ ನಡೆಯುತ್ತಲೇ ಇರುತ್ತೆ. ಅದರಲ್ಲೂ ಈ ವರ್ಷ ಚುನಾವಣೆ ವರ್ಷವಾಗಿರುವುದರಿಂದ ಕ್ಷೇತ್ರದ ನೇಕಾರರ ಸಮಸ್ಯೆಗಳು, ಆಶ್ರಯ ಮನೆಗಳ ಹಂಚಿಕೆ, ಅಭಿವೃದ್ದಿ ಕಾಮಗಾರಿ ಹೀಗೆ ಪ್ರಮುಖ ವಿಷಯಗಳನ್ನಿಟ್ಟುಕೊಂಡು ಪರಸ್ಪರ ಇಬ್ಬರ ಮಧ್ಯೆಯೂ ನಿಲ್ಲದ ಟಾಕ್ ವಾರ್ ನಡೆಯುತ್ತಲೇ ಇದೆ.
ಒಂದೆಡೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಶಾಸಕ ದೊಡ್ಡನಗೌಡ ಪಾಟೀಲ ಸ್ಪಂದಿಸುತ್ತಿಲ್ಲವೆಂದು ಆರೋಪಿಸುತ್ತಿದ್ದರೆ ಇತ್ತ ಕಳೆದ ನಾಲ್ಕು ವರ್ಷದಲ್ಲಿ ಮಾಡಿದ ಅಭಿವೃದ್ದಿ ಕಾಮಗಾರಿಗಳೇ ನಮಗೆ ಶ್ರೀರಕ್ಷೆಯಾಗಲಿವೆ ಅಂತ ಹಾಲಿ ಶಾಸಕ ದೊಡ್ಡನಗೌಡ ಪಾಟೀಲರು ಹೇಳುತ್ತಿದ್ದು, ಈ ಮಧ್ಯೆ ಈ ಬಾರಿಯೂ ಸಹ ಚುನಾವಣೆ ಹೊತ್ತಿಗೆ ಹೊಸ ಹೊಸ ವಿಷಯಗಳು ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರಕ್ಕೆ ಎಂಟ್ರಿಯಾಗಲಿವೆ.
ಒಟ್ಟಿನಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಾ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಮತದಾರರ ಮನಸೆಳೆಯಲು ಒಂದಿಲ್ಲೊಂದು ಕಸರತ್ತು ನಡೆಸುತ್ತಿದ್ದರೆ ಇತ್ತ ಹುನಗುಂದ ಮತಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನ ಸ್ವಕ್ಷೇತ್ರಕ್ಕೆ ಕರೆತರುವ ಮೂಲಕ ಹವಾ ಮಾಡಲು ಹೊರಟಿದ್ದು, ಇದು ಯಾರಿಗೆ ಎಷ್ಟರ ಮಟ್ಟಿಗೆ ಲಾಭವಾಗುತ್ತೇ ಅಂತ ಕಾದು ನೋಡಬೇಕಿದೆ..