'ವಿಧಾನಸಭೆ ಚುನಾವಣೆ ವೇಳೆ 12 ಸಚಿವರ CD ಹೊರಬರುತ್ತೆ, 30 ಕೋಟಿ ಲಂಚ, 1 ಮಂಚ’
* ಬಾಗಲಕೋಟೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೊಸ ಬಾಂಬ್
* 18 ಸಿಡಿಗಳಿವೆ, ಚುನಾವಣೆ ಸಮಯದಲ್ಲಿ ಸಿಡಿಗಳು ಹೊರ ಬರುತ್ತವೆ
* ಯಾವಾಗ ಯಡಿಯೂರಪ್ಪ ತೆಗೆದರೋ ಆಗಲೇ ಬಿಜೆಪಿ ಕಥೆ ಮುಗೀತು
* ಬೀದಿಯಲ್ಲಿ ಇದ್ದ ಸಿದ್ದರಾಮಯ್ಯರನ್ನ ಬಾದಾಮಿಗೆ ಕರೆತಂದದ್ದೇ ನಾನು
ಬಾಗಲಕೋಟೆ, (ಜೂನ್.28): ವಿಧಾನಸಭೆ ಚುನಾವಣೆಯಲ್ಲಿ ಸಚಿವರುಗಳ ಸಿಡಿ ಹೊರಗೆ ಬರಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎ.ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮಾದರಿಯಲ್ಲೆ ಇದೀಗ ಮಹಾರಾಷ್ಟ್ರ ಶಿವಸೇನೆ ಶಾಸಕರನ್ನು ತಗೊಂಡಿದ್ದಾರೆ. ಹಿಂದೆ ನಮ್ಮ ರಾಜ್ಯದ ಶಾಸಕರಿಗೆ 30 ಕೋಟಿ ರೂ. ಕೊಟ್ಟಿದ್ದರು, ಜೊತೆಗೆ ಒಂದು ಮಂಚ ಕೊಟ್ಟಿದ್ದು, ಸಿಡಿ ಇವೆ, ಅವರೆಲ್ಲ ಈಗ ಸ್ಟೇ ತೆಗೆದುಕೊಂಡಿದ್ದಾರೆ. ಆದರೂ ಸಹ ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಸರ್ ಅಂದಿದ್ದೆ, ಸ್ಟೇ ಕೊಟ್ರಲ್ಲ, ಜಡ್ಜ್ ಅವರಾದ್ರೂ ನೋಡಬೇಕಲ್ಲ. 12 ಜನ ಮಂತ್ರಿಗಳು ಸ್ಟೇ ತಗೊಂಡಾರ,ಮತ್ತೆ ವಿಧಾನಸೌಧದಲ್ಲಿ ಭಾಳ್ ಗೌರವಾನ್ವಿತರಂತೆ ಮಾತಾಡ್ತಾರೆ ಛೇ... ಛೇ...ಛೇ.. ಎಂದು ವ್ಯಂಗ್ಯವಾಡಿದರು.
ಆ.3ಕ್ಕೆ ಸಿದ್ದು ಬಣ ‘ಶಕ್ತಿ ಪ್ರದರ್ಶನ’: 5 ಲಕ್ಷ ಜನರನ್ನು ಸೇರಿಸಿ 75ನೇ ಜನ್ಮದಿನ ಆಚರಣೆ!
ಇನ್ನು ಸಿಡಿ ಚುನಾವಣೆಯಲ್ಲಿ ಹೊರಬರುತ್ತೆ. ಒಟ್ಟು 17-18 ಸಿಡಿ ಇವೆ. ಅವರೇ ಸ್ಟೇ ತಗೊಂಡಾರಲ್ಲ.ಅದರಲ್ಲಿ ಒಬ್ಬ ಗೋಪಾಲ ನಾನು ಏನು ತಗೊಂಡಿಲ್ಲ ಅಂದ ಎಂದರು. ಆದರೆ, ಅವರ ಹೈಟ್, ವೇಟ್ ಗೆ ಏನು ಮಾಡಾಕಾಗಲ್ಲ ಎಂದು ವ್ಯಂಗ್ಯ ನಗೆ ಬೀರಿ ಇಬ್ರಾಹಿಂ,
ಅಯ್ಯೋ ಇವರ ಕಥೆ...? ಎಂದು ಲೇವಡಿ ಮಾಡಿದರು.
ಯಾವಾಗ ಯಡಿಯೂರಪ್ಪರನ್ನ ತೆಗೆದರೋ ಆಗಲೇ ಬಿಜೆಪಿ ಕಥೆ ಮುಗೀತು..
ಇನ್ನು ಕಾಂಗ್ರೆಸ್ ಜೆಡಿಎಸ್ ತಿಕ್ಕಾಟದಲ್ಲಿ ಅಧಿಕಾರವನ್ನು ಬಿಜೆಪಿಗೆ ಧಾರೆಯೆರಿತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಬಿಜೆಪಿ ಪಕ್ಷ ಸೇದಿ ಎಸೆದ ಬೀಡಿಯಂತಾಗಿದೆ. ಯಾವಾಗ ಯಡಿಯೂರಪ್ಪ ಅವರನ್ನು ತೆಗೆದರೋ ಬಿಜೆಪಿಯದ್ದು ಮುಗಿತು. ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ನಾ ಒಂದು ಮಾತು ಹೇಳಿದೆ. ಯಡಿಯೂರಪ್ಪ ಅವರೆ ಶೈವತ್ವ ಬಿಡಿ ವೀರತ್ವ ಇಟ್ಟುಕೊಂಡು ಹೊರಬನ್ನಿ ಎಂದ ತಕ್ಷಣ ಮುಖ್ಯಮಂತ್ರಿ ಯನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮಾಡಿದರು. ಇಲ್ಲದಿದ್ದರೆ ಕೇಶವಕೃಪಾದವರು ಸಿಎಂ ಆಗ್ತಿದ್ದರು. ಮಾಡಿದ್ದು ಬಸವಕೃಪಾ ಸಾಧರ ಲಿಂಗಾಯತ ಬೊಮ್ಮಾಯಿ ಅವರನ್ನು ಮಾಡಿದ್ದರು. ದೆಹಲಿಯಲ್ಲಿದ್ದೋರಿಗೆ ಮೋದಿಗೆ ಸಾಧರು ಯಾರು? ಪಂಚಾಚಾರ್ಯರು ಯಾರು? ಗಾಣಿಗರು ಯಾರು? ರೆಡ್ಡಿ ಯಾರು ಎಂದು ಗೊತ್ತಾಗಬೇಕಲ್ಲ ಎಂದು ಹೇಳಿದರು.
ತಾಳಿ ಕಟ್ಟದೆ ಹೆಂಡತಿ ಅಂತ ಹೇಳೋಕಾಗಲ್ಲ..ಪಕ್ಷ ಸೇರದೆ ಹೆಸರು ಹೇಳೋಕಾಗಲ್ಲ. ಇದೇ ಸಮಯದಲ್ಲಿ ಮಾತನಾಡಿದ ಇಬ್ರಾಹಿಂ,ಜುಲೈ 30 ರೊಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಕ್ತಾಯ ಮಾಡುತ್ತೇವೆ. ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳುವವರ ಹೆಸರು ಈಗಲೇ ಹೇಳೋಕಾಗೋದಿಲ್ಲ,ತಾಳಿ ಕಟ್ಟದೆ ಹೆಂಡತಿ ಅಂತ ಹೇಳೋದಕ್ಕೆ ಆಗೋದಿಲ್ಲ. ಆದರೆ ಪ್ರಮುಖರು ಜೆ ಡಿಎಸ್ ಸೇರಲಿದ್ದಾರೆ ಎಂದ ಅವರು, ಕಾಂಗ್ರೆಸ್ ನವರು ನಮ್ಮ ಪಕ್ಷದವರನ್ನ ಬೇಕಾದರೆ ಹೇಳಲಿ, ನಾವೇ ಲಿಸ್ಟ್ ಕೊಡುತ್ತೇವೆ ಎಂದು ಸಿ ಎಂ ಇಬ್ರಾಹಿಂ ಟಾಂಗ್ ನೀಡಿದರು.
ಬಿಜೆಪಿ ಬೀ ಟೀಮ್ ಕಾಂಗ್ರೆಸ್ ಅಥವಾ ಜೆಡಿಎಸ್ ಜನರೇ ತೀರ್ಮಾನ ಮಾಡ್ತಾರೆ
ರಾಜ್ಯಸಭಾ ಚುನಾವಣೆ ವಿಚಾರವಾಗಿ ಮಾತನಾಡಿ, ಭಾರತದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕ ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿಸಿದ್ದು ಎಂದೂ ನೋಡಿಲ್ಲ.ಸೋನಿಯಾ ಗಾಂಧಿಗೆ ಪತ್ರ ಬರೆದರೂ ಈ ಬಗ್ಗೆ ರಿಪ್ಲೈ ಇಲ್ಲ ಎಂದರು, ಈ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಎಲ್ಲೂ ಉತ್ತರ ಕೊಡುತ್ತಿಲ್ಲ,ಹಾಗಾದ್ರೆ ಬಿಜೆಪಿ ಬಿ ಟೀಮ್ ಜೆಡಿಎಸ್ ನಾ? ಅಥವಾ ಕಾಂಗ್ರೆಸ್ಸಾ? ಅಂತ ಜನ ತೀರ್ಮಾನ ಮಾಡುತ್ತಾರೆ ಎಂದರು.
ಬೀದಿಯಲ್ಲಿ ಇದ್ದ ಸಿದ್ದರಾಮಯ್ಯರನ್ನ ಬಾದಾಮಿಗೆ ಕರೆತಂದದ್ದೇ ನಾನು
ಎಚ್.ಡಿಕೆ ಮತ್ತೆ ಮುಖ್ಯಮಂತ್ರಿಯಾಗಲು ಜೆಡಿಎಸ್ ಏನು ರಾಷ್ಟ್ರೀಯ ಪಕ್ಷವೇನು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ಬಾದಾಮಿಯಿಂದ ಸಿದ್ದರಾಮಯ್ಯ ಹೇಗೆ ಎಂ.ಎಲ್ ಎ ಆದ್ರು. ಬೀದಿಯಲ್ಲಿ ಬಿದ್ದ ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಬಂದವರ್ಯಾರು? ನಾನು ತಾನೆ ಎಂದು ಹೇಳಿದ ಇಬ್ರಾಹಿಂ, ಬಿ.ಬಿ.ಚಿಮ್ಮನಕಟ್ಟಿ ನನ್ನ ಜೊತೆ ಮಂತ್ರಿ ಇದ್ದಂತವರು, ಚಿಮ್ಮನಕಟ್ಟಿ ಅವ್ರನ್ನ ನಾನು ಒಪ್ಪಿಸಿ ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ನಿಲ್ಲಿಸಿದೆವು, ವೈ ಎಸ್ ಆರ್, ಜಗನ್, ಸ್ಟಾಲಿನ್ ಇವರೆಲ್ಲಾ ರಾಷ್ಟ್ರೀಯ ಪಕ್ಷವಲ್ಲ, ಅವರು ಸಿಎಂ ಆಗಿಲ್ವಾ? ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯನವರನ್ನು ಬಾದಾಮಿಗೆ ಕರೆತರಲು ಎಸ್ ಆರ್ ಪಾಟೀಲ್,ಅದರಲ್ಲಿ ಇನ್ಮೊಯಬ್ಬರು ಇದ್ದರು ನಮ್ಮ ಗಿಡ್ಡ ತಿಮ್ಮಾಪುರ ಎಂದ ಇಬ್ರಾಹಿಂ ಅವರು, ತಿಮ್ಮಾಪುರ ಹಾಗೂ ಎಸ್ ಆರ್ ಪಾಟೀಲ್ ಅವರಿಗೂ ಸಿದ್ದರಾಮಯ್ಯ ಬಾದಾಮಿಗೆ ಬರ್ತಾರೆ ಬೆಂಬಲ ಕೊಡೋಣ ಅಂದಿದ್ದು ನಾನೇ ಎಂದ ಅವರು ,ಸಿದ್ದರಾಮಯ್ಯ ಬಂದರೆ 20 ಸ್ಥಾನ ಜಾಸ್ತಿ ಬರುತ್ತವೆ ಬನ್ನಿ ಅಂದೆ. ಆದರೆ ಸಿದ್ದರಾಮಯ್ಯ ಬಾದಾಮಿಗೆ ಬಂದ ಮೇಲೆ 20 ಸೀಟ್ ಕಡಿಮೆ ಆದವು ಎಂದು ತಿಳಿಸಿದರು.
ಕಿಡ್ನಾಪ್ ಮಾಡಿ ಲವ್ ಮ್ಯಾರೇಜ್ ಮಾಡೋದರಲ್ಲಿ ನಮಗೆ ವಿಶ್ವಾಸ ಇಲ್ಲ. ಇನ್ನು ಎಸ್. ಆರ್. ಪಾಟೀಲ್ ಜೆಡಿಎಸ್ ಗೆ ಬರುವ ವಿಚಾರವಾಗಿ ಮಾತನಾಡಿ, ನಾವು ಯಾರ ಮೇಲೂ ಒತ್ತಡ ಹಾಕಲ್ಲ,ನಾವು ಯಾವತ್ತೂ ಆರೇಂಜ್ ಮ್ಯಾರೇಜ್ ಮಾಡುವವರು,ಕಿಡ್ನಾಪ್ ಮಾಡಿ ಲವ್ ಮ್ಯಾರೇಜ್ ಮಾಡೋದರಲ್ಲಿ ನಮಗೆ ವಿಶ್ವಾಸವಿಲ್ಲ, ಹಾಗಾಗಿ ನಾವು ಯಾರೇ ಬಿಜೆಪಿ ಕಾಂಗ್ರೆಸ್ ನವರನ್ನು ಬನ್ನಿ ಅಂತ ಹೇಳೋದಿಲ್ಲ. ಸಜ್ಜನರು ಅವರಾಗಿಯೇ ಬರ್ತಾರೆ. ದೆಹಲಿಯಲ್ಲಿ ನಮಗೆ ಯಾರು ತಂದೆ ತಾಯಿಗಳಿಲ್ಲ,ನಮಗೆ ಮಾದ್ಯಮದವರೆ ತಂದೆ ತಾಯಿಗಳು ಎಂದ ಇಬ್ರಾಹಿಂ,ನಮ್ಮ ಬಳಿ ದುಡ್ಡಿಲ್ಲ, ನಮಗೆ ಮಾದ್ಯಮವೇ ಆಸರೆ. ನಮ್ಮ ಮಾನ ಅಪಮಾನ ನಿಮ್ಮದಯ್ಯ, ಸರ್ವಸ್ವವೂ ನಿಮ್ಮ ಪಾದಕ್ಕೆರೆದು,ಜಂಗಮರ ತರಹ ಹೊರಟಿದ್ದೇವೆ.ಎಲ್ಲೆಲ್ಲೊ ಭಿಕ್ಷೆ ಸಿಗುತ್ತೋ ಅಲ್ಲಿ ಕೇಳ್ತಿವಿ ಎಂದರು.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಮಾದ್ಯಮಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮತ್ತು ಸಲೀಂ ಮೋಮಿನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.