ರಾಜ್ಯಾದ್ಯಂತ ಬಿಜೆಪಿ ಪರ ಅಲೆ ಜೋರಾಗಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದ ಯಡಿಯೂರಪ್ಪ. 

ಕಲಬುರಗಿ(ಮಾ.08): ಬಿಜೆಪಿಯಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದಾರೆ.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿರುವ ಯಡಿಯೂರಪ್ಪ ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಬಿಜೆಪಿ ಪರ ಅಲೆ ಜೋರಾಗಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದರು.

ಬಿಎಸ್‌ವೈ ಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಪ್ರಮಾದ: ಸಮಯಪ್ರಜ್ಞೆ ಮೆರೆದ ಪೈಲಟ್

ಟಿಕೆಟ್‌ ಹಂಚಿಕೆ ವಿಷಯದಲ್ಲಿಯೂ ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಗುವುದು. ಟಿಕೆಟ್‌ ಹಂಚಿಕೆಯಲ್ಲಿ ಗುಜರಾತ್‌ ಮಾದರಿ ಅನ್ನೋದಕ್ಕಿಂತ ಪಕ್ಷದ ಹೈಕಮಾಂಡ್‌ ಹಾಲಿ ಶಾಸಕರೆಲ್ಲರ ಚಲನ ವಲನ ಗಮನಿಸುತ್ತಿದೆ. ಇದನ್ನಾಧರಿಸಿ ಹೇಳೋದಾದಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯ ಉಮೇದುವಾರರ ಮೊದಲ ಪಟ್ಟಿ ಶೀಘ್ರವೇ ಹೊರಬೀಳುತ್ತದೆ. ವಿಜಯೇಂದ್ರ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂಬುದನ್ನು ಪಕ್ಷದ ಹೈಕಮಾಡ್‌ ತೀರ್ಮಾನಿಸಲಿದೆ. ಬಹುಶ: ಈಗಿನ ಮಟ್ಟಿಗೆ ಶಿಕಾರಿಪುರದಿಂದಲೇ ಸ್ಪರ್ಧಿಸುವ ಸಾಧ್ಯತೆಗಳು ಅಧಿಕ ಎಂದು ಹೇಳಿದರು. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಚುನಾವಣೆ ಮುಗಿದ ಬಳಿಕ ನಡೆಯುವ ಶಾಸಕಾಂಗ ಸಭೆಯಲ್ಲಿ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರವಾಗಲಿದೆ ಎಂದರು.

ಹೊರ ದೇಶಗಳಲ್ಲಿ ಭಾರತದ ಕುರಿತಂತೆ, ಇಲ್ಲಿನ ವ್ಯವಸ್ಥೆಯ ಕುರಿತಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಗುರವಾಗಿ ಮಾತನಾಡುವ ಚಾಳಿ ಹೊಂದಿದ್ದಾರೆ. ಇದು ಸರಿಯಲ್ಲ. ಈಚೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತಂತೆ ನೀಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಯಾಚಿಸಬೇಕು ಎಂದರು.