ಬಿಎಸ್‌ವೈ ಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ರಮಾದ: ಸಮಯಪ್ರಜ್ಞೆ ಮೆರೆದ ಪೈಲಟ್
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂದಿಳಿಯಬೇಕಿದ್ದ ಹೆಲಿಪ್ಯಾಡ್ ಬಳಿ ಪ್ಲಾಸ್ಟಿಕ್ ಹೊದಿಕೆ ಮತ್ತು ಬ್ಯಾರಲ್ ಗಿರಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್‌ನ್ನು ಲ್ಯಾಂಡಿಂಗ್ ಮಾಡಲಾಗದೆ ಪೈಲಟ್ ಫಜೀತಿ ಅನುಭವಿಸಿದ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಕಲಬುರಗಿ (ಮಾ.7) : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂದಿಳಿಯಬೇಕಿದ್ದ ಹೆಲಿಪ್ಯಾಡ್ ಬಳಿ ಪ್ಲಾಸ್ಟಿಕ್ ಹೊದಿಕೆ ಮತ್ತು ಬ್ಯಾರಲ್ ಗಿರಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್‌ನ್ನು ಲ್ಯಾಂಡಿಂಗ್ ಮಾಡಲಾಗದೆ ಪೈಲಟ್ ಫಜೀತಿ ಅನುಭವಿಸಿದ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬಿಜೆಪಿ(BJP)ಯ ‘ವಿಜಯ ಸಂಕಲ್ಪ ಯಾತ್ರೆ’(Vijayasankalpa yatre) ಭಾಗವಾಗಿ ಜೇವರ್ಗಿ ಪಟ್ಟಣ(Jevargi town)ದಲ್ಲಿ ಸೋಮವಾರ ಅವರು ಬೃಹತ್ ರೋಡ್ ಶೋ ನಡೆಸಿದರು. ಇದಕ್ಕಾಗಿ ಯಡಿಯೂರಪ್ಪ(BS Yadiyurappa)ನವರು ವಿಶೇಷ ಹೆಲಿಕಾಪ್ಟರ್(Helicopter) ಮೂಲಕ ಆಗಮಿಸಿದ್ದು, ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್(Halipad)ನಲ್ಲಿ ಇಳಿಯಬೇಕಿತ್ತು.
ಬಿಎಸ್‌ವೈ ಸವಾಲಿನಿಂದ ವಿಪಕ್ಷದ ನಿದ್ದೆ ಹಾಳಾಗಿದೆ: ವಿಜಯೇಂದ್ರ
ನಿಗದಿತ ಸಮಯಕ್ಕೆ ಹೆಲಿಕಾಪ್ಟರ್ ಬಂತು. ಪೈಲಟ್ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಮುಂದಾಗುತ್ತಿದ್ದಂತೆ, ಹೆಲಿಪ್ಯಾಡ್ ಸಮೀಪದ ಹೊಲದಲ್ಲಿದ್ದ ಪ್ಲಾಸ್ಟಿಕ್ ಹೊದಿಕೆ, ಪ್ಲಾಸ್ಟಿಕ್ ಚೀಲಗಳು ಗಾಳಿಯಲ್ಲಿ ಗಿರಕಿ ಹೊಡೆಯಲಾರಂಭಿಸಿದವು. ಇದÜನ್ನು ಗಮನಿಸಿದ ಪೈಲಟ್, ಲ್ಯಾಂಡಿಂಗ್ ಕೈಗೊಳ್ಳದೆ ಆಗಸದಲ್ಲಿಯೇ ಸ್ವಲ್ಪ ಹೊತ್ತು ಹೆಲಿಕಾಪ್ಟರ್ ಸುತ್ತಾಡಿಸಿದರು. ಈ ವೇಳೆ, ಹೆಲಿಪ್ಯಾಡ್ ಬಳಿಯಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು ಪ್ಲಾಸ್ಟಿಕ್ ಹೊದಿಕೆ, ಬ್ಯಾರಲ್, ಪ್ಲಾಸ್ಟಿಕ್ ಚೀಲಗಳನ್ನು ಸ್ಥಳದಿಂದ ತೆರವುಗೊಳಿಸಿದರು. ಬಳಿಕ, ಪೈಲಟ್ ಯಶಸ್ವಿಯಾಗಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದರು. ಬಳಿಕ, ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಿಂದ ಇಳಿದು ಕಾರಿನಲ್ಲಿ ರೋಡ್ ಶೋ ಆರಂಭಗೊಳ್ಳಬೇಕಿದ್ದ ಸ್ಥಳದ ಕಡೆಗೆ ಪ್ರಯಾಣಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೈಲಟ್ ಜೋಸೆಫ್, ಪ್ಲಾಸ್ಟಿಕ್ ಚೀಲ, ಬ್ಯಾರಲ್ ಸೇರಿದಂತೆ ಹಲವು ವಸ್ತುಗಳು ಹಾರಿ ಬಂದ ಕಾರಣ ಹೆಲಿಕಾಪ್ಟರ್‌ನ್ನು ಆ ಕ್ಷಣಕ್ಕೆ ಲ್ಯಾಂಡ್ ಮಾಡದೆ ಕೆಲಹೊತ್ತು ಆಗಸದಲ್ಲೇ ಹಾರಾಡಿಸಿದೆ. ಬಳಿಕ, ಅವುಗಳನ್ನು ಸ್ವಚ್ಛಗೊಳಿಸಿದ ಬಳಿಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಈ ರೀತಿಯ ಪ್ಲಾಸ್ಟಿಕ್ ಚೀಲ ಹಾರಬಾರದು. ಪ್ಲಾಸ್ಟಿಕ್ ಚೀಲ ಹಾರಾಡಿದ್ದರಿಂದ ಲ್ಯಾಂಡಿಂಗ್ ಮಾಡೋಕೆ ಆಗಿಲ್ಲ. ನಮಗೆ ಹಾರಾಟ ತರಬೇತಿಯಲ್ಲಿ ಇಂತಹ ಸಂದರ್ಭದಲ್ಲಿ ಲ್ಯಾಂಡ್ ಮಾಡಬಾರದು ಎಂದು ಹೇಳಿಕೊಡುತ್ತಾರೆ. ಲ್ಯಾಂಡಿಂಗ್ ಟೈಮ್‌ನಲ್ಲಿರುವ ಪ್ರೋಟೊಕಾಲ್ ಫಾಲೋ ಮಾಡಬೇಕಿತ್ತು. ಸಂಬಂಧಪಟ್ಟವರು ಅದನ್ನು ಫಾಲೋ ಅಪ್ ಮಾಡಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದರು.
ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಹೊಲದಲ್ಲಿ ರೈತರೊಬ್ಬರು ತಮ್ಮ ಹೊಲದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದು, ಅದರ ಮೇಲ್ಛಾವಣಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿದ್ದರು. ತೊಗರಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವ ವೇಳೆ ಬೇಕಾಗುವ ಪ್ಲಾಸ್ಟಿಕ್ ಬ್ಯಾರಲ್ ಮತ್ತು ಹೆಲ್ಮೆಟ್, ಖಾಲಿ ಸಿಮೆಂಟ್ ಚೀಲಗಳನ್ನು ಆ ಗುಡಿಸಿಲಿನ ಹೊರಗೆ ಇರಿಸಿದ್ದರು.
ಚಿಕ್ಕಮಗಳೂರು: ಇಂದು ಬಿಎಸ್‌ವೈಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ
ಹೆಲಿಪ್ಯಾಡ್‌ನಿಂದ ಕೇವಲ 25 ಅಡಿ ಅಂತರದಲ್ಲಿದ್ದ ಈ ಗುಡಿಸಿಲಿನ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಬರುತ್ತಿದ್ದಂತೆಯೇ ಗುಡಿಸಲಿಗೆ ಹೊದಿಸಿದ್ದ ಪ್ಲಾಸ್ಟಿಕ್ ಹೊದಿಕೆ ಹಾಗೂ ಬ್ಯಾರಲ್‌ಗಳು ಗಾಳಿಯ ರಭಸಕ್ಕೆ ಸಿಲುಕಿ ತರಗೆಲೆಯಂತಾಗಿ ಮೇಲೆದ್ದು ಹಾರಾಡಲಾರಂಭಿಸಿದವು. ಇದರಿಂದಾಗಿಯೇ ಲ್ಯಾಂಡಿಂಗ್‌ಗೆ ತೊಂದರೆಯಾಯ್ತು ಎಂದು ಘಟನೆಯನ್ನು ಕಂಡ ಸ್ಥಳೀಯರು ತಿಳಿಸಿದ್ದಾರೆ.