* ಬಿಎಸ್‌ವೈ ಹುದ್ದೆ ಬಿಡಲಿ: ವಿಶ್ವನಾಥ್‌* ಯಡಿಯೂರಪ್ಪಗೆ ಮೊದಲಿನಂತೆ ಉತ್ಸಾಹ ಇಲ್ಲ, ಶಕ್ತಿ ಕುಂದಿದೆ* ಯತ್ನಾಳ್‌, ನಿರಾಣಿ, ಬೆಲ್ಲದ್‌ರನ್ನು ಸಿಎಂ ಮಾಡಲು ತಿಳಿಸಿದ್ದೇನೆ 

ಬೆಂಗಳೂರು(ಜೂ.18): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಮೊದಲಿನಂತೆ ಉತ್ಸಾಹ (ಸ್ಪಿರಿಟ್‌) ಅವರಲ್ಲಿ ಇಲ್ಲ. ಇಡೀ ರಾಜ್ಯದ ನಾಯಕತ್ವವನ್ನು ಎಳೆಯುವ ಶಕ್ತಿ ಕುಸಿದಿದೆ. ಹಾಗಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಗದರ್ಶಕರಾಗಿ ಮುಂದುವರೆಯಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.

ಗುರುವಾರ ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ನೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿ, ಅದರಲ್ಲೂ ಪಂಚಮಸಾಲಿ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಲಿ. ಅವರಿಗೊಂದು ಅವಕಾಶ ಕೊಡಲಿ ಎಂದರು.

'ಯಾರೋ ಮಾತನಾಡಿದ್ದಕ್ಕೆಲ್ಲ ನಾನು ರಿಯಾಕ್ಷನ್ ಕೊಡಲ್ಲ'

ಪಂಚಮಸಾಲಿ ಸಮುದಾಯದಲ್ಲಿ ಸಚಿವ ಮುರುಗೇಶ್‌ ನಿರಾಣಿ, ಶಾಸಕರಾದ ಬಸನಗೌಡ ಯತ್ನಾಳ್‌ ಮತ್ತು ಅರವಿಂದ್‌ ಬೆಲ್ಲದ್‌ ಇದ್ದಾರೆ. ಯಂಗ್‌ ಸ್ಟಾರ್‌ ಬೇಕಾದರೆ ಬೆಲ್ಲದ್‌ರನ್ನು ಮುಖ್ಯಮಂತ್ರಿ ಮಾಡಲಿ. ಮಧ್ಯವಯಸ್ಕ ಬೇಕಾದರೆ ನಿರಾಣಿ ಅವರನ್ನು ಮಾಡಿ. ಎಲ್ಲದಕ್ಕೂ ಬೇಕು ಅಂದರೆ ಯತ್ನಾಳ್‌ ಅವರನ್ನು ಮಾಡಿ ಎಂದು ಹೇಳಿದರು. ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ರಾಕ್ಷಸ ರಾಜಕಾರಣ ಇಲ್ಲಿಯೂ ಕಾಣುತ್ತಿದ್ದೇವೆ. ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ, ಅತಿಯಾದ ಭ್ರಷ್ಟಾಚಾರ ಇದೆ. ಎಲ್ಲ ಮಂತ್ರಿಗಳು ಸಮಾಧಾನವಾಗಿಲ್ಲ ಎಂದು ತಿಳಿಸಿದರು.

ಬಿಎಸ್‌ವೈ ವಯಸ್ಸು ಈಗ ಗೊತ್ತಾಯ್ತಾ?

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದ ಬಿಜೆಪಿ ಶಾಸಕ ಎಚ್‌. ವಿಶ್ವನಾಥ್‌ಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಮೈತ್ರಿ ಸರ್ಕಾರವನ್ನು ರಾಕ್ಷಸೀ ಸರ್ಕಾರ ಎಂದು ಹೇಳಿ ಹೋದಾಗ ಬಿಎಸ್‌ವೈಗೆ ವಯಸ್ಸಾಗಿದೆ ಅಂತ ಗೊತ್ತಿರಲಿಲ್ಲವೇ? ಈಗ ಗೊತ್ತಾಗಿದೆಯೇ? ಎಂದು ಲೇವಡಿ ಮಾಡಿದ್ದಾರೆ.

`ಹಳ್ಳಿಹಕ್ಕಿ’ಗೆ ಪೂರ್ಣ ಹುಚ್ಚು ಹಿಡಿದಿದೆ, ಶಕುನಿ ಇದ್ದಂಗೆ'

ವಿಶ್ವನಾಥ್‌ ವಿರುದ್ಧ ಶಾಸಕರ ಆಕ್ರೋಶ

ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಕುರಿತು ಬೇಡಿಕೆ ಇಟ್ಟವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಿರುದ್ಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಪ್ತ ಬಣದ ಶಾಸಕರು ಹರಿಹಾಯ್ದಿದ್ದಾರೆ. ಸಚಿವ ಶ್ರೀರಾಮುಲು, ಶಾಸಕ ರೇಣುಕಾಚಾರ್ಯ, ಎಸ್‌.ಆರ್‌. ವಿಶ್ವನಾಥ್‌ ಮತ್ತಿತರರು ತೀವ್ರ ವಾಗ್ದಾಳಿ ನಡೆಸಿದ್ದಾರೆ.