ಎಲ್ಲ 28 ಕ್ಷೇತ್ರ ಗೆಲ್ಲೋವರೆಗೆ ಮನೆಗೆ ತೆರಳದಂತೆ ಬಿಎಸ್‌ವೈ ಸೂಚನೆ: ಬಿ.ವೈ.ವಿಜಯೇಂದ್ರ
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವಂತೆ, ಎಲ್ಲ 28 ಕ್ಷೇತ್ರ ಗೆಲ್ಲುವವರೆಗೆ ಮನೆಗೆ ತೆರಳದಂತೆ ಬಿ.ಎಸ್.ಯಡಿಯೂರಪ್ಪನವರು ಸೂಚಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರ (ಡಿ.01): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವಂತೆ, ಎಲ್ಲ 28 ಕ್ಷೇತ್ರ ಗೆಲ್ಲುವವರೆಗೆ ಮನೆಗೆ ತೆರಳದಂತೆ ಬಿ.ಎಸ್.ಯಡಿಯೂರಪ್ಪನವರು ಸೂಚಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ರಾಜ್ಯ ಬಿಜೆಪಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ಶಿಕಾರಿಪುರಕ್ಕೆ ಗುರುವಾರ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿಯಿಂದ ಹಳೆ ಸಂತೆ ಮೈದಾನದ ಮಾರಿಕಾಂಬಾ ರಂಗಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹಿತ ಪಕ್ಷದ ಮುಖಂಡರು, ಸಂಘ ಪರಿವಾರದ ಹಿರಿಯರ ಆಶೀರ್ವಾದದಿಂದ ರಾಜ್ಯಾಧ್ಯಕ್ಷರಾಗಿದ್ದು, ಈ ದಿಸೆಯಲ್ಲಿ ಕ್ಷೇತ್ರದ ಮತದಾರರ ಬೆಂಬಲ ಮರೆಯಲು ಸಾಧ್ಯವಿಲ್ಲ. ಯಡಿಯೂರಪ್ಪನವರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೋರಾಟದ ಮೂಲಕ ಮೇಲೆದ್ದು ಬಂದ ರೈತ ನಾಯಕ. ಅವರು ನಗರಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಹಳ್ಳಿ ಹಳ್ಳಿಗೆ ಮುಟ್ಟಿಸಿದ್ದಾರೆ. ಪ.ಜಾತಿ, ಪ.ವರ್ಗ, ದಲಿತ, ಶೋಷಿತರ ಪರವಾದ ಹೋರಾಟದಿಂದ ಪಕ್ಷ ಸಂಘಟಿಸಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂದು ಎಲ್ಲ ವರ್ಗಗಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇಂದು ಎಲೆಕ್ಷನ್ ನಡೆದರೂ ಬಿಜೆಪಿಗೆ 135 ಸ್ಥಾನ ಬರುತ್ತೆ: ಬಿ.ಎಸ್.ಯಡಿಯೂರಪ್ಪ
ಕೇಂದ್ರದಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ರಚನೆಗೆ ರಾಜ್ಯಾದ್ಯಂತ ಪ್ರವಾಸ ಮಾಡುವಂತೆ ಯಡಿಯೂರಪ್ಪನವರು ಸೂಚಿಸಿದ್ದಾರೆ. ರಾಜ್ಯದಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರದ ಅಹಂನಿಂದ ಬೀಗುತ್ತಿರುವ ರಾಜ್ಯದ ಭ್ರಷ್ಟ-ದುಷ್ಟ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದರು.
28 ಲೋಕಸಭಾ ಸ್ಥಾನ ಗೆಲ್ಲುವ ವಿಶ್ವಾಸವಿದೆ: ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆಶೀರ್ವಾದಿಂದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಅಶೋಕ್ ರಾಜ್ಯ ಪ್ರವಾಸದ ಮೂಲಕ ಎಲ್ಲ 28 ಲೋಕಸಭಾ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಆ ಮೂಲಕ ಭವಿಷ್ಯದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ವಿರೋಧಿಗಳು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
28 ಕ್ಷೇತ್ರಗಳನ್ನೂ ಗೆದ್ದು ಪ್ರಧಾನಿ ಮೋದಿಗೆ ಬಲ ತರುವೆ: ಬಿ.ವೈ.ವಿಜಯೇಂದ್ರ
ಶಿಕಾರಿಪುರದಲ್ಲಿ ಗುರುವಾರ ವಿಜಯೇಂದ್ರ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಇದೀಗ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೈತರು, ಸಾರ್ವಜನಿಕರು ನೆಮ್ಮದಿಯಿಂದ ಬದುಕಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಧಿವೇಶನದಲ್ಲಿ ಶಾಸಕರು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದರು.