Asianet Suvarna News Asianet Suvarna News

ಕೃಷಿ ಬಜೆಟ್‌ ಕೊಟ್ಟ ಯಡಿಯೂರಪ್ಪ ಮಹಾನ್‌ ನಾಯಕ: ಪ್ರಲ್ಹಾದ್‌ ಜೋಶಿ

ಅಭಿವೃದ್ಧಿಗೆ ಹೆಸರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ಯಾವುದೇ ವಿಷಯವಾದರೂ ಸರಿ ಮಾಡಬೇಕು ಎಂದು ತೀರ್ಮಾನ ಮಾಡಿದರೆ ಮುಗಿತು. ಅದರಿಂದ ಯಾವತ್ತು ಹಿಂದೆ ಸರಿದವರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದರು. 

BS Yediyurappa is a great leader who gave agriculture budget Says Pralhad Joshi gvd
Author
First Published Mar 10, 2024, 1:06 PM IST

ಶಿವಮೊಗ್ಗ (ಮಾ.10): ಅಭಿವೃದ್ಧಿಗೆ ಹೆಸರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ಯಾವುದೇ ವಿಷಯವಾದರೂ ಸರಿ ಮಾಡಬೇಕು ಎಂದು ತೀರ್ಮಾನ ಮಾಡಿದರೆ ಮುಗಿತು. ಅದರಿಂದ ಯಾವತ್ತು ಹಿಂದೆ ಸರಿದವರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದರು. ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಬಳಗದಿಂದ ಶನಿವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದುತ್ವವನ್ನು ರಕ್ಷಣೆ ಮಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಏನೂ ಅಲ್ಲ ಎನ್ನುವ ಕಾಲದಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷರಾದ ಬಳಿಕ ಅವರ ಮೇಲೆ ಹಲ್ಲೆ ನಡೆದಾಗಲೂ ಪುನರ್ಜನ್ಮದಂತೆ ಬದುಕಿ ಬಂದ ಯಡಿಯೂರಪ್ಪ ಅವರು, ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ 40 ವರ್ಷಗಳ ಕಾಲ ಹೋರಾಟ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ನಾಯಕ. ಅಲ್ಲಿಂದ ಈವರೆಗೆ ಪಕ್ಷ ಅನೇಕ ಸೋಲು- ಗೆಲುವನ್ನು ನೋಡಿದೆ. ಆದರೆ, ಕಳೆದ ಬಾರಿ ವಿಧಾನಸಭೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಾಗ ಇನ್ನೊಂದು ವರ್ಷದಲ್ಲಿ ಪಕ್ಷವನ್ನು ಪುನಃ ಕಟ್ಟಿ ಲೋಕಸಭೆಯಲ್ಲಿ ನಿಮಗೆ ಉತ್ತರವನ್ನು ಕೊಡುತ್ತೇವೆ ಎಂದು ಯಡಿಯೂರಪ್ಪ ಅವರು ಶಪಥವನ್ನು ಸ್ವೀಕರಿಸಿ, ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಅವರು ಅಂದುಕೊಂಡಿದ್ದ ಸಾಧಿಸಿ ತೋರಿಸಿದ ಛಲಗಾರ ಎಂದು ಬಣ್ಣಿಸಿದರು.

ಜೆಡಿಎಸ್ ಈಗ ಕೋಮುವಾದಿ ಜನತಾದಳವಾಗಿದೆ: ಸಚಿವ ಡಿ.ಸುಧಾಕರ್ ಲೇವಡಿ

ಸಕಾಲಕ್ಕೆ ಕೆಲಸವಾಗಿಲ್ಲ ಎಂದರೆ ಬೇಗ ಕೋಪ ಮಾಡಿಕೊಳ್ಳುವ ಯಡಿಯೂರಪ್ಪ ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ. ಆದರೆ, ದೀರ್ಘ ದ್ವೇಷಿ ಅಲ್ಲ. ವೈಯಕ್ತಿಕವಾಗಿ ಯಾರ ಮೇಲೂ ಎಂದೂ ದ್ವೇಷ ಮಾಡಿದವರಲ್ಲ. ಪಕ್ಷ ಸೋತಾಗ ಯುವಕರೆಲ್ಲ ದುಃಖದಲ್ಲಿ ಒಳಗೆ ಕೂತಿದ್ದರೆ, 80 ವರ್ಷದ ಯುವಕ ಯಡಿಯೂರಪ್ಪ ಅವರು, ನಾನು ಪಕ್ಷವನ್ನು ಕಟ್ಟುತ್ತೇನೆ ಬನ್ನಿ ಎಂದು ಹೊರಗೆ ಬಂದು ಹೇಳಿದವರು. ಯಡಿಯೂರಪ್ಪರಂಥ ನಾಯಕರು ಅಧಿಕಾರದಲ್ಲಿ ಇದ್ದರೆ ಜಿಲ್ಲೆ ಮತ್ತು ರಾಜ್ಯವನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯವೇ ಸಾಕ್ಷಿಯಾಗಿದೆ ಎಂದರು.

ರೈತ ಹೋರಾಟದಿಂದಲೇ ಬೆಳೆದುಬಂದ ನಾಯಕ ಯಡಿಯೂರಪ್ಪ ಅವರು ರೈತರಿಗಾಗಿ ಮೊದಲ ಬಾರಿ ಕೃಷಿ ಬಜೆಟ್‌ ಕೊಟ್ಟು ಇತಿಹಾಸ ಪುಟದಲ್ಲಿ ಉಳಿಯುಂಥ ಕೆಲಸವನ್ನು ಮಾಡಿ ತೋರಿಸಿದವರು. ವಿರೋಧ ಪಕ್ಷದಲ್ಲಿದ್ದಾಗ ಅವರು ಯಾವ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದರೋ ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಪೂರೈಸುತ್ತಿದ್ದರು. ಅದು ಅವರು ರಾಜಕೀಯ ಸಿದ್ದಾಂತವೂ ಆಗಿತ್ತು. ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗುವುದು ಎಂಬ ಕೂಗಿಗೆ ತಕ್ಕದಾಗೆ ಅವರು ನಡೆದುಕೊಂಡ ಶ್ರೇಷ್ಟ ನಾಯಕ ಎಂದು ವರ್ಣಿಸಿದರು.

ಚುನಾವಣೆ ಬಂದಾಗ ಆಸ್ಪತ್ರೆಯಿಂದ ಬರ್ತಾರೆ: ಸಂಸದ ಅನಂತ್‌ ಬಗ್ಗೆ ಸತೀಶ್‌ ವ್ಯಂಗ್ಯ

ಟಾಪ್‌-10 ಎಂಪಿಗಳಲ್ಲಿ ರಾಘವೇಂದ್ರ: ನಾನು ಕೇಂದ್ರ ಸಚಿವರಾಗಿ ಅನೇಕ ಸಂಸದರನ್ನು ನೋಡಿದ್ದೇನೆ. ಆದರೆ, ಕ್ಷೇತ್ರದ ಅಭಿವೃದ್ದಿಗಾಗಿ ಇಷ್ಟೊಂದು ಕ್ರೀಯಾಶೀಲವಾಗಿ ಕೆಲಸ ಮಾಡುವಂತ ದೇಶದ 10 ಜನ ಸಂಸದರನ್ನು ಗುರುತಿಸಿದರೆ ಅದರಲ್ಲಿ ಸಂಸದ ಬಿ.ವೈ. ರಾಘವೇಂದ್ರರೂ ಒಬ್ಬರು. ಅವರನ್ನು ಹೊಗಳಿ ನನಗೆ ಆಗಬೇಕಿದ್ದು ಏನೂ ಇಲ್ಲ. ಅವರು ಮಾಡಿರುವ ಅನೇಕ ಕೆಲಸಗಳೇ ಅವರ ಸಾಧನೆಯನ್ನು ಹೇಳುತ್ತವೆ. ನನ್ನ ಕಚೇರಿಯಲ್ಲೆ ನನ್ನ ಮೂಲಕ ರೈಲ್ವೆ ಸಚಿವರನ್ನು ಭೇಟಿ ಅವರಿಂದ ಕೆಲಸ ಮಾಡಿಸಿಕೊಳ್ಳುವ ಕ್ರೀಯಾಶೀಲ ವ್ಯಕ್ತಿ ಎಂದರು. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್‌. ಚನ್ನಬಸಪ್ಪ, ಪ್ರಮುಖರಾದ ಆಶೋಕ್‌ ಹಾರನಹಳ್ಳಿ, ನಟರಾಜ್‌ ಭಾಗವತ್‌, ಪದ್ಮನಾಬ್‌ ಭಟ್‌, ರಾಮಚಂದ್ರ, ದತ್ತಾತ್ರಿ, ಡಾ.ಪಿ.ನಾರಾಯಣ್‌, ಎಂ.ಶಂಕರ್‌, ವೆಂಕಟೇಶ್‌ ಮತ್ತಿತರರು ಇದ್ದರು.

Follow Us:
Download App:
  • android
  • ios